ಬಸವಣ್ಣ ಹಾಗೂ ಶರಣರನ್ನು ಲೂಟಿಕೋರರು, ಕೊಲೆಗಡುಕರು ಎಂಬಂತೆ ಚಿತ್ರಿಸಿ ಅಪಪ್ರಚಾರ ಎಸಗಿರುವ ದುಷ್ಟರಿಗೆ ರಾಜ್ಯ ಸರ್ಕಾರ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ.
- ‘ಬಸವ ಮಂಟಪ’ ಕೃತಿ ಮುಟ್ಟುಗೋಲು ಹಾಕಿಕೊಂಡ ಸರ್ಕಾರದ ಕ್ರಮಕ್ಕೆ ಸ್ವಾಗತ
- - -ಕನ್ನಡಪ್ರಭ ವಾರ್ತೆ ಜಗಳೂರು
ಬಸವಣ್ಣ ಹಾಗೂ ಶರಣರನ್ನು ಲೂಟಿಕೋರರು, ಕೊಲೆಗಡುಕರು ಎಂಬಂತೆ ಚಿತ್ರಿಸಿ ಅಪಪ್ರಚಾರ ಎಸಗಿರುವ ದುಷ್ಟರಿಗೆ ರಾಜ್ಯ ಸರ್ಕಾರ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು.ಪಟ್ಟಣದ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ''''ಶಿವಸಂಚಾರ'''' ನಾಟಕೋತ್ಸವ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಬಸವಣ್ಣನವರನ್ನು ಲೇವಡಿ ಮಾಡಿರುವ ಲೇಖಕರೊಬ್ಬರು, ಲೇಖನಗಳ ಮೂಲಕ ನಮ್ಮ ವಿರುದ್ಧವೂ ನಿರಂತರ ವಿಷಕಾರಿದ್ದಾರೆ. ಸುಳ್ಳು ಮತ್ತು ಅಪಪ್ರಚಾರದಿಂದ ಕೂಡಿದ ''''ಬಸವ ಮಂಟಪ'''' ಕೃತಿಯನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿರುವುದು ಅತ್ಯಂತ ಸ್ವಾಗತಾರ್ಹ ನಿರ್ಧಾರ ಎಂದರು.
ಅಮೆರಿಕದಲ್ಲಿ ಇರುವುದಾಗಿ ಸುಳ್ಳು ಹೇಳಿಕೊಂಡಿದ್ದ ಆ ವ್ಯಕ್ತಿ ಇದೀಗ ಕೇರಳದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಇಂತಹ ಸುಳ್ಳುಕೋರಗೆ ಬಸವಣ್ಣನವರ ಹೆಸರನ್ನು ಎತ್ತಲೂ ನೈತಿಕತೆಯಿಲ್ಲ. ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ಬಸವಣ್ಣ ಹಾಗೂ ಶರಣರು ಐತಿಹಾಸಿಕ ವ್ಯಕ್ತಿಗಳೇ ಅಲ್ಲ ಎಂದು ಅವಹೇಳನ ಮಾಡಿರುವ ಇಂತಹವರಿಗೆ ಕಠಿಣ ಶಿಕ್ಷೆಯಾದಾಗ ಮಾತ್ರ ಸಮಾಜದಲ್ಲಿ ಸತ್ಯ ಮತ್ತು ನ್ಯಾಯಕ್ಕೆ ಬೆಲೆ ಬರುತ್ತದೆ ಎಂದು ಕಿಡಿಕಾರಿದರು.ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಶಿವಸಂಚಾರ ರಂಗತಂಡದ ಮೂಲಕ ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವ ನಾಟಕಗಳು ಪ್ರದರ್ಶನಗೊಳ್ಳುತ್ತಿವೆ. ಇಡೀ ದೇಶವೇ ತಿರುಗಿ ನೋಡುವಂತಹ ಮಹತ್ವದ ರಂಗಪ್ರಯೋಗಗಳನ್ನು ಸಾಣೇಹಳ್ಳಿ ಶ್ರೀಗಳು ಕಟ್ಟಿಕೊಡುತ್ತಿದ್ದಾರೆ ಎಂದರು.
ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಗ್ರೀಕ್ ಮಾದರಿಯಲ್ಲಿ ಸಾಣೇಹಳ್ಳಿ ಮಠದಲ್ಲಿ ಅಭೂತಪೂರ್ವ ಬಯಲು ರಂಗಮಂದಿರ ರೂಪುಗೊಂಡಿದ್ದು, ಅಲ್ಲಿ ಸಾಕಷ್ಟು ಪ್ರಯೋಗಾತ್ಮಕ ನಾಟಕಗಳು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿವೆ ಎಂದವರು ತಿಳಿಸಿದರು.ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ನಾಟಕ, ಸಾಹಿತ್ಯ ಹಾಗೂ ಪ್ರಗತಿಪರ ವಿಚಾರಗಳ ಮೂಲಕ ಆರೋಗ್ಯಕರ ಮತ್ತು ವೈಚಾರಿಕ ಸಮಾಜ ನಿರ್ಮಾಣಕ್ಕೆ ಸಾಣೇಹಳ್ಳಿ ಶ್ರೀಗಳು ನಿರಂತರ ಶ್ರಮಿಸುತ್ತಿದ್ದಾರೆ ಎಂದರು.
ಜಗಳೂರು ಪಟ್ಟಣದಲ್ಲಿ 3 ದಿನಗಳ ಶಿವಸಂಚಾರ ನಾಟಕೋತ್ಸವ ಕಲಾಪ್ರೇಮಿಗಳ ಮನಸೂರೆಗೊಂಡಿತು. ಉತ್ಸವದಲ್ಲಿ ''''ಕೂದಲಸ್ವಾಮಿ'''', ''''ಬರ್ಬರೀಕ'''' ಹಾಗೂ ''''ನುಲಿಯ ಚಂದಯ್ಯ'''' ನಾಟಕಗಳು ಯಶಸ್ವಿಯಾಗಿ ಪ್ರದರ್ಶನಗೊಂಡವು.ಜಿಪಂ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ, ಡಿಎಲ್ಡಿಬಿ ನಿರ್ದೇಶಕ ಎಂ.ಡಿ. ಕೀರ್ತಿಕುಮಾರ್, ಕ್ರೆಡೆಲ್ ನಿರ್ದೇಶಕ ಖಲಂದರ್, ಕೊರಚ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಆದರ್ಶ ಯಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ, ವೀರಶೈವ ಮಹಾಸಭಾ ಅಧ್ಯಕ್ಷ ಶಿವನಗೌಡ, ಉಪನ್ಯಾಸಕ ಸುಭಾಷ್ ಚಂದ್ರಬೋಸ್, ಎಸ್.ಕೆ. ಮಂಜುನಾಥ್, ಎಚ್.ಸಿ. ಮಹೇಶ್, ಕೆ.ಎಂ. ಬಸವರಾಜಪ್ಪ, ಬಿದರಕೆರೆ ಸತೀಶ್, ದಿದ್ದಿಗಿ ಕರಿಬಸವನಗೌಡ, ಗೋಡೆ ಪ್ರಕಾಶ್, ಹಲವು ಮುಖಂಡರು, ಕಲಾಭಿಮಾನಿಗಳು ಪಾಲ್ಗೊಂಡಿದ್ದರು.
- - --23ಜೆ.ಜಿ.ಎಲ್.1: ಸಮಾರಂಭದಲ್ಲಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು.