ಇದು ಕೇವಲ ಸ್ಪರ್ಧೆಯಲ್ಲ, ಸಹನೆ, ತಾಳ್ಮೆ, ತಂಡದ ಮನೋಭಾವವನ್ನು ಪರೀಕ್ಷಿಸುವ ವೇದಿಕೆ. ಸೋಲು-ಗೆಲುವು ಸಹಜ, ಆದರೆ ಕ್ರೀಡಾ ಮನೋಭಾವವೇ ನಿಜವಾದ ಗೆಲುವು ಎಂದು ಜಿಲ್ಲಾಧಿಕಾರಿ ಶ್ರೀರೂಪ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಇದು ಕೇವಲ ಸ್ಪರ್ಧೆಯಲ್ಲ, ಸಹನೆ, ತಾಳ್ಮೆ, ತಂಡದ ಮನೋಭಾವವನ್ನು ಪರೀಕ್ಷಿಸುವ ವೇದಿಕೆ. ಸೋಲು-ಗೆಲುವು ಸಹಜ, ಆದರೆ ಕ್ರೀಡಾ ಮನೋಭಾವವೇ ನಿಜವಾದ ಗೆಲುವು ಎಂದು ಜಿಲ್ಲಾಧಿಕಾರಿ ಶ್ರೀರೂಪ ಹೇಳಿದರು.

ಚಾಮರಾಜನಗರ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಡಿ.ಎ.ಆರ್. ಕೇಂದ್ರ ಸ್ಥಾನದಲ್ಲಿರುವ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಿದ ಪ್ರತಿಷ್ಠಿತ 28ನೇ ವರ್ಷದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ -2026 ಅನ್ನು ಉದ್ಘಾಟಿಸಿ ಮಾತನಾಡಿದರು.

ಕಾನೂನು ಸುವ್ಯವಸ್ಥೆ ಕಾಪಾಡಲು ದೈಹಿಕ ಸಾಮರ್ಥ್ಯ ಅತ್ಯಂತ ಮುಖ್ಯ. ಪೊಲೀಸ್ ಇಲಾಖೆಯ ಗೌರವ ಉಳಿಸಲು ಇಂತಹ ಕ್ರೀಡಾಕೂಟಗಳು ಸಹಕಾರಿ. ತುಂಬಾ ಶಿಸ್ತುಬದ್ಧವಾಗಿ ಕ್ರೀಡಾಕೂಟ ನಡೆಯುತ್ತಿದೆ. ಕ್ರೀಡಾಕೂಟ ಯಶಸ್ವಿಯಾಗಲಿ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಎಂ. ಮಾತನಾಡಿ, ಜಿಲ್ಲೆಯ ಪೊಲೀಸ್ ಕುಟುಂಬ ಒಂದೇ ವೇದಿಕೆಯಲ್ಲಿ ಸೇರಿರುವುದು ಹೆಮ್ಮೆಯ ವಿಷಯ. ಕ್ರೀಡಾಕೂಟ ಯಶಸ್ವಿಯಾಗಲಿ, ಎಲ್ಲಾ ತಂಡಗಳು ಶಿಸ್ತುಬದ್ಧವಾಗಿ, ಪ್ರಾಮಾಣಿಕವಾಗಿ ಸ್ಪರ್ಧಿಸಲಿ. ಈ ಕ್ರೀಡಾಕೂಟ ನಮ್ಮ ಸಿಬ್ಬಂದಿಯ ಆತ್ಮವಿಶ್ವಾಸ, ಆರೋಗ್ಯ ಮತ್ತು ಒಗ್ಗಟ್ಟನ್ನು ಹೆಚ್ಚಿಸಲಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಕೃತಿ ಬನ್ಸಾಲ್ ಮಾತನಾಡಿ, ಕ್ರೀಡಾಪಟುಗಳಿಗೆ ಶುಭ ಹಾರೈಸಿ, ಪೊಲೀಸ್ ಇಲಾಖೆಯ ಸೇವೆ ಮತ್ತು ಶಿಸ್ತನ್ನು ಶ್ಲಾಘಿಸಿದರು.

ನಂತರ ಎಲ್ಲಾ ಕ್ರೀಡಾಪಟುಗಳು ಒಟ್ಟಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಅಪರ ಪೊಲೀಸ್ ಅಧೀಕ್ಷಕ ಎಂ.ಎನ್. ಶಶಿಧರ ವಂದನಾರ್ಪಣೆ ಮಾಡಿದರು. ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಆಗಮಿಸಿದ್ದ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು, ಕ್ರೀಡಾಪಟುಗಳ ಉಪಸ್ಥಿತಿಯಲ್ಲಿ ಕವಾಯತು ಮೈದಾನ ಕ್ರೀಡಾಮಯವಾಗಿತ್ತು. ಬೆಳಿಗ್ಗೆಯಿಂದಲೇ ಮೈದಾನದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಕ್ರೀಡಾಕೂಟದಲ್ಲಿ ಕರಿವರದರಾಜ ತಂಡ, ಮಹದೇಶ್ವರ ತಂಡ, ಬಿಳಿಗಿರಿ ತಂಡ, ಕನಕಗಿರಿ ತಂಡ, ಹಿಮವದ್ ತಂಡ, ಚಾಮರಾಜ ತಂಡ, ಆಪ್ತ ಗೆಳತಿ ತಂಡ ಸೇರಿದಂತೆ ಜಿಲ್ಲೆಯ ವಿವಿಧ ತಂಡಗಳು ಭಾಗವಹಿಸಿದ್ದು, ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯುತ್ತಿವೆ.

ಕಾರ್ಯಕ್ರಮದಲ್ಲಿ ಡಿವೈಎಸ್‌ಪಿಗಳಾದ ಸ್ನೇಹರಾಜ್, ಮೋಹನ್, ಸೋಮಣ್ಣ,ಆರ್‌ಪಿಐ ಸತೀಶ್ , ಸಾಗರ್, ಶೇಷಾದ್ರಿ ಸೇರಿದಂತೆ ಜಿಲ್ಲೆಯ ಎಲ್ಲಾ ಠಾಣೆಗಳ ಸಬ್ ಇನ್‌ಸ್ಪೆಕ್ಟರ್‌ಗಳು, ಸಿಬ್ಬಂದಿ ವರ್ಗ, ಕುಟುಂಬಸ್ಥರು, ಸಾರ್ವಜನಿಕರು ಇತರರು ಹಾಜರಿದ್ದರು.