ಆದಿತ್ಯರಾಜ್‌ ಕ್ಯಾಪಿಟಲ್‌ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹ

KannadaprabhaNewsNetwork |  
Published : Jun 07, 2026, 03:00 AM IST
ಪತ್ರಕರ್ತರ ಮೇಲೆ ಹಲ್ಲೆಗೆ ಯತ್ನಿಸಿದ ಆದಿತ್ಯ ರಾಜ್‌ ಕ್ಯಾಪಿಟಲ್‌ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಗರ ಪೊಲೀಸ್‌ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು | Kannada Prabha

ಸಾರಾಂಶ

ಬಹುಕೋಟಿ ರುಪಾಯಿ ವಂಚನೆ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ಎದುರಿಸುತ್ತಿರುವ ಆದಿತ್ಯರಾಜ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕಚೇರಿ ಬಳಿ ಶನಿವಾರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬಹುಕೋಟಿ ರುಪಾಯಿ ವಂಚನೆ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ಎದುರಿಸುತ್ತಿರುವ ಆದಿತ್ಯರಾಜ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕಚೇರಿ ಬಳಿ ಶನಿವಾರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲು ನಗರದ ಭಾಗ್ಯನಗರದಲ್ಲಿರುವ ಸಂಸ್ಥೆಯ ಕಚೇರಿಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಕಂಪನಿ ಸಿಬ್ಬಂದಿ ಗೂಂಡಾವರ್ತನೆ ನಡೆಸಿದರು. ಸ್ಥಳದಲ್ಲಿದ್ದ ಕೆಲ ಮಹಿಳಾ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಪತ್ರಕರ್ತರೊಂದಿಗೆ ವಾಗ್ವಾದ ನಡೆಸಿ ಹಲ್ಲೆಗೆ ಯತ್ನಿಸಿದ್ದು, ಕೆಲವರು ಗುಂಪು ಸೇರಿ ನಿಂದನಾತ್ಮಕ ಪದಗಳನ್ನು ಬಳಸಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಕೆಲ ಪುರುಷ ಸಿಬ್ಬಂದಿಯೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ತೀವ್ರ ವಾಗ್ವಾದ ನಡೆಸಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಮಾಹಿತಿ ಸಂಗ್ರಹಿಸಲು ತೆರಳಿದ್ದ ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸುವ ಪ್ರಯತ್ನ ನಡೆದಿದ್ದು, ಘಟನಾ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕಂಪನಿ ಮಾಲೀಕ ಬಾಲರಾಜ್ ಮಾನೆ ಪರವಾಗಿ ಕೆಲ ಸಿಬ್ಬಂದಿ ಬಹಿರಂಗವಾಗಿ ಸಮರ್ಥನೆ ನಡೆಸುತ್ತಿದ್ದು, ಪ್ರಕರಣದ ಕುರಿತು ಪ್ರಶ್ನೆ ಕೇಳಿದ ಪತ್ರಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪ್ರಕರಣದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಮಾಹಿತಿ ಸಂಗ್ರಹಣೆ ಕಾರ್ಯದಲ್ಲಿ ತೊಡಗಿದ್ದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಈ ರೀತಿಯ ಗೂಂಡಾವರ್ತನೆ ತೋರಿರುವ ಘಟನೆಯನ್ನು ಖಂಡಿಸಿ ವಿವಿಧ ಮಾಧ್ಯಮ ಸಂಸ್ಥೆಗಳ ಪತ್ರಕರ್ತರು ಪ್ರತಿಭಟನೆ ನಡೆಸಿದರು. ಕರ್ತವ್ಯ ನಿರತ ಪತ್ರಕರ್ತರ ಮೇಲೆ ಹಲ್ಲೆಗೆ ಯತ್ನಿಸಿದ ಹಾಗೂ ಬೆದರಿಕೆ ಒಡ್ಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಬಳಿಕ ಪತ್ರಕರ್ತರು ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಅವರಿಗೆ ಮನವಿ ಸಲ್ಲಿಸಿ, ಘಟನೆಯ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪತ್ರಕರ್ತರ ಸುರಕ್ಷತೆ ಹಾಗೂ ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಸಹಿಸಲಾಗುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಪತ್ರಕರ್ತರಾದ ವಿಲಾಸ ಜೋಶಿ, ಸಹದೇವ ಮಾನೆ, ಮೈಲಾರಿ ಪಟಾತ್‌, ಮಂಜುನಾಥ ಪಾಟೀಲ, ರಾಜಶೇಖರ ಹಿರೇಮಠ, ಸಿದ್ದನಗೌಡ ಪಾಟೀಲ, ಅಡಿವೇಶ ಪಾಟೀಲ, ಪ್ರಹ್ಲಾದ ಪೂಜಾರಿ ಮೊದಲಾದವರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನದಿಗೆ ನೀರು ಬರಲಿಲ್ಲ; ಕಬ್ಬಿನ ಬಿಲ್‌ ಪಾವತಿ ಆಗಿಲ್ಲ
30ರಿಂದ ಮನೆ ಮನೆಗೆ ಭೇಟಿ, ಮಾಹಿತಿ ಸಂಗ್ರಹಣೆ: ಡಿಸಿ