ಕನ್ನಡಪ್ರಭ ವಾತ್ರೆ ತುರುವೇಕೆರೆ
ತಾಲೂಕಿನ ಕುಣಿಕೇನಹಳ್ಳಿಯ ಶ್ರೀ ರಂಗನಾಥಸ್ವಾಮಿ, ಕೆಂಪಮ್ಮದೇವಿ ಜಾತ್ರೆಯಲ್ಲಿ ಗ್ರಾಮದ ಚಿಕ್ಕಮ್ಮ ದೇವಿ, ಕೆಂಚಪ್ಪ ಸ್ವಾಮಿ, ಈರಣ್ಣ ಸ್ವಾಮಿ ಮತ್ತು ಪಾತಪ್ಪ ಸ್ವಾಮಿಯವರ ಜಾತ್ರಾ ಮಹೋತ್ಸವವೂ ಅದ್ಧೂರಿಯಾಗಿ ಪ್ರತಿ ವರ್ಷವೂ ನಡೆಯುತ್ತಿತ್ತು. ಆದರೆ ಕುಣಿಕೇನಹಳ್ಳಿಯ ಜಗದೀಶ್ ಎಂಬುವವರು ವಿನಾಕಾರಣ ಜಗಳ ತೆಗೆದು ಗ್ರಾಮದಲ್ಲಿ ಅಶಾಂತಿಯ ವಾತಾವರಣ ಸೃಷ್ಠಿ ಮಾಡಿ ಸೌಹಾರ್ದತೆಗೆ ಧಕ್ಕೆ ತಂದಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮದ ದೇವತೆಗಳ ಪೂಜೆ ನಡೆಸುತ್ತಿರುವ ಅರ್ಚಕರುಗಳು ತಾಲೂಕು ಆಡಳಿತವನ್ನು ಆಗ್ರಹಿಸಿದ್ದಾರೆ. ಚಿಕ್ಕಮ್ಮ ದೇವಿ, ಕೆಂಚಪ್ಪ ಸ್ವಾಮಿ, ಈರಣ್ಣ ಸ್ವಾಮಿ ಮತ್ತು ಪಾತಪ್ಪ ಸ್ವಾಮಿಯವರ ಅರ್ಚಕರಾದ ಪರಿಶಿಷ್ಠ ಜಾತಿಗೆ ಸೇರಿದ ಮರಾಠಿ ಪಾಳ್ಯದ ಭೈರಪ್ಪನವರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸುಮಾರು 10 ಮಂದಿ ಅರ್ಚಕರು ಅನಾದಿಕಾಲದಿಂದ ಹಿಡಿದು ಇದುವರೆಗೂ ಕುಣೀಕೇನಹಳ್ಳಿಯಲ್ಲಿ ಯಾವುದೇ ತಾರತಮ್ಯವಿಲ್ಲ. ಪರಿಶಿಷ್ಠ ಜಾತಿ ಮತ್ತು ಇತರೆ ಪಂಡಗದವರು ಸಾಮರಸ್ಯದಿಂದ ಬಾಳುತ್ತಿದ್ದೇವೆ. ಆದರೆ ಗ್ರಾಮದ ಜಗದೀಶ್ ಎಂಬುವವ ವಿನಾಕಾರಣ ಜಗಳ ತೆಗೆದು ಸಾಮರಸ್ಯಕ್ಕೆ ಭಂಗ ತರುತ್ತಿದ್ದಾನೆ. ಗ್ರಾಮದಲ್ಲಿರುವ ಬಹುಪಾಲು ಎಲ್ಲಾ ದೇವತೆಗಳಿಗೆ ಪೂಜೆ ಮಾಡುವವರು ಪರಿಶಿಷ್ಠ ಜಾತಿಗೆ ಸೇರಿದವರೇ ಆಗಿದ್ದಾರೆ. ಉತ್ಸವ ಮೂರ್ತಿಗಳನ್ನು ಸಿದ್ಧ ಪಡಿಸುವವರೂ ಅದೇ ಜನಾಂಗದವರೇ ಆಗಿದ್ದಾರೆ. ಜಾತ್ರಾ ಮಹೋತ್ಸವದಲ್ಲಿ ಪರಿಶಿಷ್ಠ ಜಾತಿಯವರಿಂದಲೇ ಸಾಕಷ್ಟು ಧಾರ್ಮಿಕ ಕಾರ್ಯಗಳು ಆಗುವುದು ಅನಾದಿಕಾಲದಿಂದಲೂ ಬಂದಿದೆ. ಪರಿಶಿಷ್ಠ ಜಾತಿಯವರು ಮಾಡುವ ಪೂಜೆಗೆ ಸವರ್ಣಿಯರೂ ಸಹ ಕೈ ಜೋಡಿಸಿ ಬಹಳ ಭಕ್ತಿಭಾವದಿಂದ ನಡೆದುಕೊಳ್ಳುತ್ತಾರೆ. ಇಂತಹ ಸೌಹಾರ್ದತೆಗೆ ಜಗದೀಶ್ ಧಕ್ಕೆ ತರುತ್ತಿರುವುದು ಬೇಸರ ತರಿಸಿದೆ ಎಂದು ವಿಷಾದಿಸಿದರು. ತಮ್ಮ ಕುಟುಂಬದ ಪರಂಪರೆಯಂತೆ ಗ್ರಾಮದ ಜಾತ್ರಾ ಮಹೋತ್ಸವದಲ್ಲಿ ಎಲ್ಲಾ ದೇವರುಗಳ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಂಡು ಬರಲಾಗಿದೆ. ಆದರೆ ಜಗದೀಶ್ ತೆಗೆದಿರುವ ಕಿತಾಪತಿಯಿಂದ ಜಾತ್ರಾ ಮಹೋತ್ಸವವನ್ನು ತಾಲೂಕು ಆಡಳಿತ ರದ್ದು ಮಾಡಿದೆ. ಇದು ಅರ್ಚಕರ ಕುಟುಂಬಗಳಿಗೆ ಭಯ ಆವರಿಸಿದೆ. ದೇವತಾ ಕಾರ್ಯ ಮಾಡದ ಹಿನ್ನೆಲೆಯಲ್ಲಿ ಈ ಹಿಂದೆ ನಮ್ಮ ಕುಟುಂಬಗಳಲ್ಲಿ ಜೀವಹಾನಿ ಆಗಿದೆ. ಜಗದೀಶ್ ಮಾಡಿರುವ ದೂರಿನಿಂದಾಗಿ ಜಾತ್ರೆ ರದ್ದು ಗೊಂಡಿದೆ. ಸರ್ಕಾರದ ಆದೇಶದ ಪ್ರಕಾರ ಜಾತ್ರಾ ಮಹೋತ್ಸವ ಅಥವಾ ಧಾರ್ಮಿಕ ವಿಧಿ ವಿಧಾನಗಳು ನಡೆಯದಿದ್ದಲ್ಲಿ ಅನಾದಿ ಕಾಲದಿಂದ ಬಂದಿರುವ ಪದ್ದತಿಗೆ ಚ್ಯುತಿ ಆಗಲಿದ್ದು ಅದರ ಪರಿಣಾಮ ನಮ್ಮ ಕುಟುಂಬದವರಿಗೆ ಕೆಡುಕು ಆಗಲಿದೆ ಎಂಬ ಭಯ ನಮ್ಮನ್ನು ಕಾಡುತ್ತಿದೆ ಎಂದು ಭೈರಪ್ಪ ಕಳವಳ ವ್ಯಕ್ತಪಡಿಸಿದರು. ಕುಣಿಕೇನಹಳ್ಳಿಯ ಗ್ರಾಮಸ್ಥರಿಂದ ಯಾವುದೇ ತೊಂದರೆ ಆಗದಿದ್ದರೂ ಸಹ ಜಗದೀಶ್ ತಾನೊಬ್ಬ ಪರಿಶಿಷ್ಠ ಜಾತಿಗೆ ಸೇರಿದವನು ಎಂಬ ಒಂದೇ ಕಾರಣವನ್ನು ಇಟ್ಟುಕೊಂಡು ಗ್ರಾಮದಲ್ಲಿ ಅಶಾಂತಿಯ ವಾತಾವರಣವನ್ನು ಸೃಷ್ಠಿಸುತ್ತಿದ್ದಾನೆ. ಕೂಡಲೇ ಅವನ ವಿರುದ್ಧ ಕಾನೂನು ಕ್ರಮ ಕೈಗೊಂಡು ಜಾತ್ರೆಯನ್ನು ಸುಸೂತ್ರವಾಗಿ ನಡೆಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು. ಜಗದೀಶ್ ಮಾಡಿದ ತಪ್ಪಿನಿಂದಾಗಿ ತಾಲೂಕಿನಲ್ಲಿರುವ ಪರಿಶಿಷ್ಠ ಜಾತಿಯವರನ್ನು ಸಾಮಾನ್ಯ ಜನರು ಅನುಮಾನದಿಂದ ನೋಡುವಂತಾಗಿದೆ. ತಾಲೂಕಿನಲ್ಲಿ ಪರಿಶಿಷ್ಠ ಸಮುದಾಯ ಸರಿಸಮವಾಗಿ ತಾಲೂಕಿನಲ್ಲಿ ಯಾವುದೇ ತೊಂದರೆ ಇಲ್ಲದೇ ಬಾಳ್ವೆ ಮಾಡುತ್ತಿದೆ. ಆದರೆ ಕುಣಿಕೇನಹಳ್ಳಿಯಲ್ಲಿ ಮಾತ್ರ ಜಗದೀಶ್ ವಿನಾಕಾರಣ ಜಗಳ ತೆಗೆದು ಗ್ರಾಮದಲ್ಲಿ ಸವರ್ಣೀಯರು ಮತ್ತು ಪರಿಶಿಷ್ಠರ ನಡುವೆ ಕಂದಕ ಏರ್ಪಡಿಸಿ ವಿಕೃತ ಆನಂದ ಪಡುತ್ತಿದ್ದಾನೆ ಎಂದು ಭೈರಪ್ಪ ದೂರಿದರು. ಜಾತಿಯ ಹೆಸರಿನಲ್ಲಿ ತಾಲೂಕಿನ ಸಾಮರಸ್ಯ ಕದಡುತ್ತಿರುವ ಕುಣೀಕೇನಹಳ್ಳಿಯ ಜಗದೀಶ್ ವಿರುದ್ಧ ತಾಲೂಕು ಆಡಳಿತ ಸ್ವಯಂ ಕ್ರಮಕೈಗೊಂಡು ಆತನ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ತಾಲೂಕು ದಲಿತ ಮುಖಂಡ ಹಾಗೂ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ವಿ.ಟಿ. ವೆಂಕಟರಾಮಯ್ಯ ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ. ಜಗದೀಶ್ ವೈಯಕ್ತಿಕ ವಿಷಯಗಳನ್ನೂ ಸಹ ಜಾತಿ ನಿಂದನೆ ಹೆಸರಿನಲ್ಲಿ ಅಮಾಯಕರನ್ನು ಸಿಲುಕಿಸಿ ನೋಯಿಸಿದ್ದಾನೆ. ಸೌಹಾರ್ದಯತವಾಗಿ ಬಾಳುತ್ತಿರುವವರ ಮಧ್ಯೆ ಜಾತಿಯ ಕಿಡಿ ಹೊತ್ತಿಸಿ ಭಾಂದವ್ಯಕ್ಕೆ ಧಕ್ಕೆ ತರುತ್ತಿದ್ದಾನೆ. ಜಾತಿ ನಿಂದನೆ ಕೇಸನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾನೆಂದು ವಿ.ಟಿ.ವೆಂಕಟರಾಮಯ್ಯ ದೂರಿದರು. ಈ ಸಂದರ್ಭದಲ್ಲಿ ಪರಿಶಿಷ್ಠ ಜಾತಿಗೆ ಸೇರಿದ ಅರ್ಚಕರುಗಳಾದ ಬೇಲೂರಯ್ಯ, ಗೇಟಪ್ಪ, ಚನ್ನಿಗಯ್ಯ, ನಾಗರಾಜು, ಪುಟ್ಟರಾಜು, ಚಂದ್ರೇಶ್, ಚನ್ನಿಗರಾಯ, ಚನ್ನಬಸವಯ್ಯ. ಚನ್ನಪ್ಪ ಮತ್ತು ಪ್ರದೀಪ್ ಇದ್ದರು.