ಸಾರ್ವಜನಿಕರು ಸಂಚರಿಸುವ ದಾರಿಗೆ ಅಕ್ರಮವಾಗಿ ಗೇಟ್ ಅಳವಡಿಸಿದವರ ಮೇಲೆ ಕ್ರಮಕ್ಕೆ ಆಗ್ರಹ

KannadaprabhaNewsNetwork | Updated : Mar 30 2025, 08:41 AM IST

ಸಾರಾಂಶ

ಸಾರ್ವಜನಿಕರು ಸಂಚರಿಸುವ ದಾರಿಗೆ ಅಕ್ರಮವಾಗಿ ಗೇಟ್ ಅಳವಡಿಸಿರುವ ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಫಿ ಬೆಳೆಗಾರರ ಸಂಘಟನೆ ನೇತೃತ್ವದಲ್ಲಿ ಮಲೆನಾಡು ಮೂಲನಿವಾಸಿಗಳ ಒಕ್ಕೂಟದ ಸದಸ್ಯರು ಮಿನಿವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿದರು.

  ಸಕಲೇಶಪುರ :  ಸಾರ್ವಜನಿಕರು ಸಂಚರಿಸುವ ದಾರಿಗೆ ಅಕ್ರಮವಾಗಿ ಗೇಟ್ ಅಳವಡಿಸಿರುವ ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಫಿ ಬೆಳೆಗಾರರ ಸಂಘಟನೆ ನೇತೃತ್ವದಲ್ಲಿ ಮಲೆನಾಡು ಮೂಲನಿವಾಸಿಗಳ ಒಕ್ಕೂಟದ ಸದಸ್ಯರು ಮಿನಿವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿದರು.

ತಾಲೂಕಿನ ಹಾನುಬಾಳು ಹೋಬಳಿಯ ಹೆಗ್ಗದ್ದೆ ಗ್ರಾಮದ ಸರ್ವೇ ನಂಬರ್ ೩೪೦ರಲ್ಲಿ ಭೂಮಿ ಖರೀದಿಸಿರುವ ಬೆಂಗಳೂರು ಮೂಲದ ಅಜಯ್ ರೆಡ್ಡಿ ಎಂಬಾತ ನೂರಾರು ವರ್ಷಗಳಿಂದ ಸಾರ್ವಜನಿಕರು ಹಾಗೂ ರೈಲ್ವೆ ಇಲಾಖೆ ವಾಹನಗಳು ಸಂಚರಿಸುತ್ತಿದ್ದ ರಸ್ತೆಗೆ ಗೇಟ್ ಅಳವಡಿಸಿ ತೊಂದರೆ ನೀಡುತ್ತಿದ್ದಾನೆ. ಈಗಾಗಲೇ ಈ ರಸ್ತೆಯನ್ನು ರೈಲ್ವೆ ಇಲಾಖೆ ಅಭಿವೃದ್ಧಿಗೊಳಿಸಿದ್ದರೆ, ಹೆಗ್ಗದ್ದೆ ಗ್ರಾಪಂನಿಂದ ಜಲ್ಲಿ ಹಾಕಲಾಗಿದೆ. ಅಲ್ಲದೆ ಗ್ರಾಮಸ್ಥರು ತಮ್ಮ ಕುಲದೇವರಿಗೆ ಹೋಗಲು ಇದೇ ರಸ್ತೆಯನ್ನು ಉಪಯೋಗಿಸುತ್ತಾರೆ. ಸರ್ವೇ ನಂಬರ್ರ 340ಲ್ಲಿ ಇನ್ನೂ ಹಲವರ ಭೂಮಿ ಇದ್ದು, ಇಂದಿಗೂ ಈ ಸರ್ವೇ ನಂಬರ್ ಪೋಡಿ ಮಾಡಲಾಗಿಲ್ಲ. ಆದರೂ ಈ ವ್ಯಕ್ತಿ ಜಮೀನಿನ ಆರಂಭದಲ್ಲಿ ಗೇಟ್ ಅಳವಡಿಸಿ ತೊಂದರೆ ನೀಡುತ್ತಿದ್ದಾನೆ. ಈ ಬಗ್ಗೆ ಗ್ರಾಮದ ಅಶೋಕ ಎಂಬುವವರು ನ್ಯಾಯಾಲಯದ ಮೊರೆಹೋಗಿ ತಡೆಯಾಜ್ಞೆ ತಂದಿದ್ದರೂ ಗೇಟ್ ತೆರವುಗೊಳಿಸಿಲ್ಲ. ಪರಿಣಾಮ ನ್ಯಾಯಾಲಯ ನಿಂದನೆ ಅಡಿ ಐವರ ವಿರುದ್ಧ ದೂರು ದಾಖಲಾಗಿದೆ. ಆದರೂ ಗೇಟ್ ತೆರವುಗೊಳಿಸದೆ ದರ್ಪ ತೊರಲಾಗುತ್ತಿದೆ. ಆದ್ದರಿಂದ ಕಂದಾಯ ಇಲಾಖೆ ಅಧಿಕಾರಿಗಳು ಈ ಕೂಡಲೇ ಗೇಟ್ ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಧಕ್ಕೆ ತಂದಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಉಪ ತಹಸೀಲ್ದಾರ್ ಮೋಹನ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಇಡೀ ಸರ್ವೇ ಕಚೇರಿ ವ್ಯವಸ್ಥೆಯೇ ಹದಗೆಟ್ಟಿದ್ದು, ಬೆಂಗಳೂರಿನ ಬಂಡವಾಳ ಶಾಹಿಗಳ ಬ್ರೋಕರ್‌ಗಳಂತೆ ವರ್ತಿಸುತ್ತಿರುವ ಸರ್ವೇಯರ್‌ಗಳು ಸ್ಥಳೀಯರಿಗೆ ಇನ್ನಿಲ್ಲದಂತೆ ದ್ರೋಹ ಎಸಗುತ್ತಿದ್ದಾರೆ. ಅದರಲ್ಲೂ ಸರ್ವೇಯರ್ ನವೀನ್ ಎಂಬಾತನ ವಿರುದ್ಧ ದೂರುಗಳ ಸುರಿಮಳೆಗರೆದಿದ್ದು ಸರ್ವೇ ನಂಬರ್ ೩೪೦ರಲ್ಲಿ ೧೨ ಎಕರೆ ಎಂದು ಪಹಣಿಯಲ್ಲಿ ದಾಖಲಾಗಿದೆ. ಆದರೆ, ೧೭ ಎಕರೆ ಭೂಮಿಗೆ ನಕಾಶೆ ಸಿದ್ಧಪಡಿಸಿರುವ ಸರ್ವೇಯರ್ ಬಂಡವಾಳ ಶಾಹಿಗಳ ಪರವಾಗಿ ಕೆಲಸ ಮಾಡಿದ್ದಾನೆ. ಪರಿಣಾಮ ಈ ನಕಾಶೆ ಆಧಾರದಲ್ಲೇ ಭೂಮಿ ಪರಬಾರೆಯಾಗಿದೆ. ಇದಲ್ಲದೆ ಜಮೀನೊಂದರಲ್ಲಿ ಅರ್ಧದವರೆಗೆ ರಸ್ತೆ ಇರುವುದಾಗಿ ನಕಾಶೆಯಲ್ಲಿ ತೋರ್ಪಡಿಸಿರುವ ಸರ್ವೇಯರ್ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಕೆ ಮಾಡಲಾಗಿತ್ತು. ನಂತರ ಪೂರ್ಣ ರಸ್ತೆ ನಕಾಶೆ ಸಿದ್ಧಪಡಿಸಿದ್ದಾನೆ. ಹೀಗೆ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿರುವ ಸರ್ವೇಯರ್‌ನನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದೂ ಸಹ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಾಫಿ ಬೆಳೆಗಾರರ ಸಂಘಟನೆಯ ಪ್ರಮುಖರಾದ ಹೆತ್ತೂರು ದೇವರಾಜ್. ಬೆಕ್ಕನಹಳ್ಳಿ ನಾಗರಾಜ್, ಕೃಷ್ಣಪ್ಪ, ಮಾಸವಳ್ಳಿ ಚಂದ್ರು, ಲೋಹಿತ್‌ ಕೌಡಳ್ಳಿ, ಸುರೇಂದ್ರ. ನರೇಶ್, ಮಹೇಶ್, ಶ್ರೀನಿಧಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Share this article