ಕನ್ನಡಪ್ರಭ ವಾರ್ತೆ ಶಹಾಪುರ
ಗೊಂಡ ಪರ್ಯಾಯ ಪದ ಕುರುಬವನ್ನು ಎಸ್‌ಟಿಗೆ ಸೇರ್ಪಡೆಗೆ ಆಗ್ರಹಿಸಿ ಕರ್ನಾಟಕ ಪ್ರದೇಶ ಗೊಂಡ (ಕುರುಬ) ಸಂಘದ ನೇತೃತ್ವದಲ್ಲಿ ನಗರದ ಚರಬಸವೇಶ್ವರ ಕಮಾನದಿಂದ ಬಸವೇಶ್ವರ ವೃತ್ತದ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಬಳಿಕ ತಹಸೀಲ್ದಾರ್ ಉಮಾಕಾಂತ್ ಹಳ್ಳಿ ಮುಖಾಂತರ ಪ್ರಧಾನಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಿಂಥಣಿಯ ಕನಕಗುರು ಪೀಠದ ಪೀಠಾಧಿಪತಿ ರಮಾನಂದಪುರಿ ಶ್ರೀಗಳು, ಕುರುಬ ಸಮುದಾಯದ ಎಸ್ಟಿ ಹಕ್ಕು ಪಡೆಯಲು ನಡೆಸುತ್ತಿರುವ ಹೋರಾಟ ಸಮಾಜದ ಕಟ್ಟಕಡೆ ವ್ಯಕ್ತಿ ಶೈಕ್ಷಣಿಕ ಮತ್ತು ಸಾಮಾಜಿಕ ನ್ಯಾಯ ಪಡೆಯುವ ನ್ಯಾಯಯುತ ಹೋರಾಟವಾಗಿದೆ. ಗೊಂಡ ಪರ್ಯಾಯ ಪದ ಕುರುಬ. ಕೆಲವರು ಗೊಂಡರು ಎಸ್ಟಿ ಸುಳ್ಳು ಜಾತಿ ಪ್ರಮಾಣಪತ್ರ ತೆಗೆದುಕೊಳ್ಳುತ್ತಿದ್ದಾರೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ನಾವು ಸುಳ್ಳು ಜಾತಿ ಪ್ರಮಾಣ ಪತ್ರ ತೆಗೆದುಕೊಳ್ಳುವುದಿಲ್ಲ. ನಮ್ಮದು ನ್ಯಾಯೋಚಿತ ಬೇಡಿಕೆ ಎಂದರು.
ಕುರುಬ ಸಂಘದ ತಾಲೂಕಾಧ್ಯಕ್ಷ ಡಾ. ಭೀಮಣ್ಣ ಮೇಟಿ ಮಾತನಾಡಿ, ಡಿ. ದೇವರಾಜ್ ಅರಸು, ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಗಳಾಗಿದ್ದಾಗ ಕುರುಬರನ್ನು ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಯಿತು. ಆ ಎಲ್ಲಾ ಮನವಿಗಳು ಮಾಹಿತಿ ಕೊರತೆಯಿಂದ ವಾಪಸ್ ಬಂದಿವೆ. ಕುಲಶಾಸ್ತ್ರೀಯ ಅಧ್ಯಯನ ನಡೆಸಿ ವರದಿ ಸಲ್ಲಿಸಿದರೂ ಕಾರ್ಯಗತಗೊಳಿಸದೆ ಇರುವುದು ದುರಂತ ಎಂದರು.ಸಮುದಾಯದ ಹಿರಿಯ ಮುಖಂಡ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಅಮಾತೆಪ್ಪ ಕಂದಕೂರ ಮಾತನಾಡಿ, ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ದಶಕಗಳಿಂದಲೂ ಒತ್ತಾಯಿಸಲಾಗುತ್ತಿದೆ. ಇದನ್ನು ಸರಕಾರಗಳು ಈಡೇರಿಸದೇ ಇರುವುದು ನೋವುಂಟು ಮಾಡಿದೆ. ಕುರುಬರು ಒಗ್ಗಟ್ಟಾಗಿ ಸಂಘಟನಾತ್ಮಕವಾಗಿ ಹೋರಾಡಿದರೆ ಮಾತ್ರ ಎಸ್ಟಿಗೆ ಸೇರಲು ಸಾಧ್ಯ ಎಂದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ, ಮರಿಗೌಡ ಹುಲ್ಕಲ್, ಬಸವರಾಜ್ ವಿಭೂತಿಹಳ್ಳಿ, ಗಿರೆಪ್ಪಗೌಡ ಬಾಣತಿಹಾಳ್, ಶಿವಮಾಂತು ಚಂದಾಪುರ್ ಮಾತನಾಡಿದರು. ದೇವಿಂದ್ರಪ್ಪ ಸುರಪುರ, ಶಾಂತಗೌಡ ನಾಗನಟಿಗಿ, ಶರಬಣ್ಣ ರಸ್ತಾಪೂರ, ಧರ್ಮಣ್ಣ ಹೋತಪೇಟ್, ಧರ್ಮಣ್ಣ ಯಾದಗಿರಿ, ರವಿ ರಾಜಾಪುರ, ಮಾಳಪ್ಪ ಪೂಜಾರಿ, ಮಲ್ಲನಗೌಡ ಬಿರಾದಾರ್ ಸೇರಿದಂತೆ ಸಾವಿರಾರು ಜನ ಕುರುಬರು ಪ್ರತಿಭಟನೆಯಲ್ಲಿದ್ದರು.ಕುರುಬರು ಭಾರತದ ಮೂಲ ನಿವಾಸಿಗಳು: 1950ರಲ್ಲೇ ನಮಗೆ ಎಸ್ಟಿಗೆ ಸೇರ್ಪಡೆ ಆಗುವ ಅವಕಾಶ ಇತ್ತು. 23 ವರ್ಷಗಳ ಲ್ಲಿ ಎರಡು ಬಾರಿ ಕೇಂದ್ರಕ್ಕೆ ಶಿಫಾರಸ್ಸು, ಆದರೂ ನಮಗೆ ನ್ಯಾಯ ದೊರಕಿಲ್ಲ. ಎರಡು ಪ್ರಮುಖ ಬೇಡಿಕೆಗಳೊಂದಿಗೆ ಕಾಗಿನೆಲೆಯಿಂದ ಹೋರಾಟ ಆರಂಭಿಸಲಾಗಿದ್ದು, ಕುರುಬರು ಭಾರತದ ಮೂಲ ನಿವಾಸಿಗಳು ಎಂದು ಕುರುಬ ಸಮಾಜದ ಹಿರಿಯ ಮುಖಂಡ ಶರಣಪ್ಪ ಸಲಾದಾಪೂರ ಹೇಳಿದರು.
ನಗರದ ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, 1868 ಮತ್ತು 1901ರ ಜನಗಣತಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿತ್ತು. ಸ್ವಾತಂತ್ರ್ಯ ನಂತರ ಕೈಬಿಡಲಾಗಿದೆ. ದೇವರಾಜ ಅರಸು ಆಡಳಿತಾವಧಿಯಲ್ಲಿ ಜೇನು ಕುರುಬ ಮತ್ತು ಕಾಡು ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದರು. ನಂತರದಲ್ಲಿ ಅದನ್ನು ಕೈ ಬಿಡಲಾಗಿದೆ. ಕುರುಬರು ಎಲ್ಲಿವರೆಗೆ ಸಂಘಟನಾತ್ಮಕವಾಗಿ ಹೋರಾಟ ಮಾಡುವುದಿಲ್ಲವೋ ಅಲ್ಲಿಯವರೆಗೆ ಸರ್ಕಾರ ನಮ್ಮ ಮನವಿಯನ್ನು ಪುರಸ್ಕರಿಸುವ ಲಕ್ಷಣಗಳು ಕಾಣುತ್ತಿಲ್ಲ. ಇಂದು ಹಚ್ಚಿದ ಹೋರಾಟದ ಕಿಡಿ ಮುಂದೊಂದು ದಿನ ಧಗದಗಿಸುತ್ತದೆ ಎಂದರು.ಬ್ರಿಟಿಷರ ಕಾಲದಲ್ಲೇ ಗೊಂಡ ಕುರುಬ ಎಸ್ಟಿಗೆ ಸೇರ್ಪಡೆ:
500 ವರ್ಷಗಳ ಹಿಂದೆ ಕುರುಬರು ಗುಡ್ಡಗಾಡುಗಳಲ್ಲಿ ವಾಸಿಸುತ್ತಿದ್ದರು. ಅಲೆಮಾರಿಗಳಾಗಿ, ಸಂಚಾರಿಗಳಾಗಿ ಊರೂರು ಸುತ್ತುತ್ತಿದ್ದರು. ರಸ್ತೆಗಳಲ್ಲೇ ವಾಸಿಸುತ್ತಿದ್ದರು. ಬ್ರಿಟಿಷರ ಕಾಲದಲ್ಲೆ ಎಲೆಜೆಬತ್ ರಾಣಿ ಗೊಂಡ ಕುರುಬರನ್ನು ಎಸ್ಟಿಗೆ ಸೇರಿಸಿದ್ದರು. ನಂತರದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಕುರುಬರನ್ನು ಎಸ್ಟಿಗೆ ಸೇರಿಸಿದ್ದರು. ಹಾಗಾಗಿ ನಾವು ಎಸ್ಟಿಗೆ ಸೇರಿಸಿರಿ ಎಂದು ಹೊಸದಾಗಿ ಕೇಳುತ್ತಿಲ್ಲ. ನಮ್ಮದು ನ್ಯಾಯೋಚಿತ ಬೇಡಿಕೆ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲುವುದಿಲ್ಲ. - ಸಿದ್ದರಾಮಾನಂದಪುರಿ ಶ್ರೀಗಳು, ತಿಂಥಣಿಯ ಕನಕ ಗುರು ಪೀಠದ ಪೀಠಾಧಿಪತಿ