ಶಿರಸಿ: ಪ್ರತಿನಿತ್ಯ ಬೆಳಿಗ್ಗೆ ೭.೩೦ಕ್ಕೆ ಶಿರಸಿಯಿಂದ ಯಲ್ಲಾಪುರಕ್ಕೆ ಹಾಗೂ ಸಂಜೆ ೫.೧೫ಕ್ಕೆ ಯಲ್ಲಾಪುರದಿಂದ ಶಿರಸಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿಗಳು ಹಾಗೂ ನೌಕರರ ವರ್ಗ ಆಗ್ರಹಿಸುತ್ತಿದೆ.
ಬೆಳಿಗ್ಗೆ ೯ ಗಂಟೆಗೆ ಹೊರಡುವ ಆಗರ-ಬೆಳಗಾವಿ ಬಸ್ ವಾರದಲ್ಲಿ ಕೆಲವು ದಿನ ಕೆಟ್ಟು ನಿಲ್ಲುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ತರಗತಿಗೆ ಹಾಗೂ ನೌಕರರಿಗೆ ಕಚೇರಿಗೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಒಂದೇ ಬಸ್‌ನ್ನು ನಂಬಿ ವಿದ್ಯಾರ್ಥಿಗಳು ಹಾಗೂ ನೌಕರರು ತೆರಳುತ್ತಿರುವುದರಿಂದ ಬಸ್ ರಶ್ ಆಗಿ ಬಾಗಿಲಿನಲ್ಲಿ ಜೋತು ಬಿದ್ದು ತೆರಳುವ ಪರಿಸ್ಥಿತಿ ಇದೆ. ಅನಾಹುತ ಸಂಭವಿಸಿದರೆ ಪ್ರಾಣ ಹಾನಿಯಾಗುವ ಸಂಭವವಿದೆ. ಕೂಡಲೇ ಪ್ರತಿನಿತ್ಯ ಬೆಳಿಗ್ಗೆ ೭.೩೦ಕ್ಕೆ ಶಿರಸಿಯಿಂದ ಯಲ್ಲಾಪುರಕ್ಕೆ ಹಾಗೂ ಸಂಜೆ ೫.೧೫ಕ್ಕೆ ಯಲ್ಲಾಪುರದಿಂದ ಶಿರಸಿಗೆ ಬಸ್ ವ್ಯವಸ್ಥೆ ಕಲ್ಪಿಸಿ, ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಶಾಸಕರಾದ ಭೀಮಣ್ಣ ನಾಯ್ಕ, ಶಿವರಾಮ ಹೆಬ್ಬಾರ, ಶಿರಸಿ ಹಾಗೂ ಯಲ್ಲಾಪುರ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ನೌಕರರ, ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಬೇಡಿಕೆಯನ್ನು ಮನ್ನಿಸಿ, ಈ ಸಮಯಕ್ಕೆ ಬಸ್ ವ್ಯವಸ್ಥೆ ಮಾಡಬೇಕೆಂದು ವಿನಂತಿಸಿದ್ದಾರೆ.