ದೇವರ ಚಿಂತನೆಯಲ್ಲಿ ಆನಂದ ಪಡೆಯುವವನು ಗೆಲ್ಲುತ್ತಾನೆ: ಸ್ವರ್ಣವಲ್ಲೀ ಶ್ರೀ

KannadaprabhaNewsNetwork |  
Published : Aug 04, 2025, 12:30 AM IST
ಪೊಟೋ೩ಎಸ್.ಆರ್.ಎಸ್೨ (ಚಾತುರ್ಮಾಸ್ಯ ವ್ರತವನ್ನು ಕೈಗೊಂಡಿರುವ ಉಭಯ ಶ್ರೀಗಳಿಗೆ ಮೆಣಸಿ ಸೀಮೆಯ ಶಿಷ್ಯ ಭಕ್ತರು ಸೇವೆ ಸಲ್ಲಿಸಿದರು.) | Kannada Prabha

ಸಾರಾಂಶ

ಉಭಯ ಶ್ರೀಗಳ ಪಾದುಕಾ ಪೂಜೆ, ಭಿಕ್ಷಾ ಸೇವೆಯನ್ನು ಅತ್ಯಂತ ಶ್ರದ್ಧಾ- ಭಕ್ತಿಯಿಂದ ಸಮರ್ಪಿಸಿದರು.

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಗಂಗಾಧರೇಂದ್ರ ಸರಸ್ವತೀ ಶ್ರೀ ಹಾಗೂ ಆನಂದಬೋಧೇಂದ್ರ ಸರಸ್ವತೀ ಶ್ರೀ ಸೇವೆಯನ್ನು ಮೆಣಸಿ ಸೀಮೆಯ ಶಿಷ್ಯ ಭಕ್ತರು ಸಲ್ಲಿಸಿದರು.

ಉಭಯ ಶ್ರೀಗಳ ಪಾದುಕಾ ಪೂಜೆ, ಭಿಕ್ಷಾ ಸೇವೆಯನ್ನು ಅತ್ಯಂತ ಶ್ರದ್ಧಾ- ಭಕ್ತಿಯಿಂದ ಸಮರ್ಪಿಸಿದರು. ಸೇವೆಯನ್ನು ಸ್ವೀಕರಿಸಿ ಆಶೀರ್ವಚನವನ್ನು ಗಂಗಾಧರೇಂದ್ರ ಸರಸ್ವತೀ ಶ್ರೀಗಳು ನುಡಿದು, ದೇವರ ಚಿಂತನೆಯಲ್ಲಿ ಆನಂದ ಪಡೆಯುವವನು ಗೆಲ್ಲುತ್ತಾನೆ. ಜಪ, ಪೂಜೆ, ಧ್ಯಾನದಲ್ಲಿ ತೊಡಗಿಕೊಂಡಾಗ ಯಾರಿಗೆ ಸಹಜವಾಗಿ ಆನಂದವಾಗುತ್ತದೆಯೋ ಅವರು ಗೆಲ್ಲುತ್ತಾರೆ. ಇಹ ಮತ್ತು ಮತ್ತು ಪರದಲ್ಲೂ ಗೆಲ್ಲುತ್ತಾನೆ. ಕಷ್ಟ ಬಂದರು, ಏನೇ ಬಂದರೂ ಅವನ ಉತ್ಸಾಹಕ್ಕೆ ಭಂಗ ಬರುವುದಿಲ್ಲ. ದೇವರ ಸ್ವರೂಪಗಳಲ್ಲಿ ಮನಸ್ಸಿನಲ್ಲಿ ಆನಂದದ ಅನುಭವ ಆಗುತ್ತಿದ್ದರೆ ಜೀವನ ಪೂರ್ತಿ ಆನಂದದಿಂದಲೇ ಇರುತ್ತಾನೆ. ಅವನಿಗೆ ಯಾವುದೇ ಸಮಸ್ಯೆ ಬಂದರೂ ಅವನು ದೇವರ ಹತ್ತಿರವೇ ಹೋಗುತ್ತಾನೆ. ಅಲ್ಲಿಯೇ ದೇವರ ಚಿಂತನೆಯಿಂದ ಸಮಸ್ಯೆಯ ಭಾರವನ್ನು ಕಳೆದು ಕೊಳ್ಳುತ್ತಾನೆ ಎಂದರು.

ದೇವರಲ್ಲಿ ಆನಂದವನ್ನು ಕಾಣುವ ಭಕ್ತ ದೇವರ ಚಿಂತನೆಯಲ್ಲಿಯೇ ಅವನ ಕಷ್ಟಗಳ ಭಾವವನ್ನು ಕರಗಿಸಿಕೊಳ್ಳುತ್ತಾನೆ. ಹನುಮಂತನ ಉಪದೇಶ ಮಾಡುವುದು ಶ್ರೀರಾಮ ಎಂಬ ಘನ ತತ್ವವನ್ನು ಕಂಡುಕೊಂಡಂತಹ ಹನುಮಂತನು ಅವನಲ್ಲೇ ಎಲ್ಲ ಜೀವಸತ್ವಗಳನ್ನು ಕೊಡುತ್ತಾನೆ. ಅದರ ಮೂಲಕ ತನ್ನ ಜೀವನದ ಭಾರವನ್ನು ಕಳೆದುಕೊಳ್ಳುತ್ತಾನೆ. ಸದಾ ದೇವರಲ್ಲಿ ಮನಸ್ಸಿಡಿ ಎಂಬ ಉಪದೇಶ ಮಾಡುತ್ತಾನೆ. ಅದೇ ರೀತಿ ಭಕ್ತರು ದೇವರ ಭಾವದಲ್ಲಿ ಅದನ್ನು ಕಷ್ಟವನ್ನು ಕರಗಿಸಿಕೊಳ್ಳುತ್ತಾನೆ. ನಿದ್ರೆ ಬರದಿದ್ದರೆ ದೇವರ ಚಿಂತನೆಯಲ್ಲಿ ಕೂತಿದ್ದರೆ ಬೆಳಗಾದ ನಂತರ ಶ್ರಮ ಅನಿಸುವುದಿಲ್ಲ. ದೇವರ ಧ್ಯಾನ ಭಕ್ತಿಗಳಲ್ಲಿ ರಾತ್ರಿ ಕಳೆದರೇ ಅವನಿಗೆ ಶ್ರಮ ಇರುವುದಿಲ್ಲ. ಯಾರ ಮನಸ್ಸು ದೇವರಲ್ಲಿ ನೆಲೆ ನಿಂತು ಆನಂದ ಪಡುತ್ತಾನೋ ಅವನು ಇಹ, ಪರಗಳಲ್ಲಿ ಗೆಲ್ಲುತ್ತಾನೆ. ಯಾರ ಮನಸ್ಸು ವಿಷಯಗಳ ಮೇಲೆ ಆನಂದವನ್ನು ಪಡುತ್ತದೆಯೋ ಅವನು ಸೋಲುತ್ತಾನೆ. ವಿಷಯಗಳಲ್ಲಿ ಸುಖವನ್ನು ಇಷ್ಟಪಡುತ್ತಾನೆ ಅವನು ಇಹ ಪರಗಳಲ್ಲಿ ಸೋಲುತ್ತಾನೆ. ವಿಷಯಗಳ ಮೇಲೆ ಸುಖ ಇಷ್ಟಪಡುವವನು ಯಾವಾಗಲೂ ಅನಾರೋಗ್ಯ, ಅಶಾಂತಿಗಳಲ್ಲೇ ಇರುತ್ತಾನೆ. ಕಷ್ಟಗಳು ಬಂದಾಗ ಕರಗಿಸಿಕೊಳ್ಳಲು ದಾರಿ ಕಾಣುವುದಿಲ್ಲ ಎಂದರು.

ವಿಷಯದಲ್ಲಿ ಮುಳುಗಿ ಆನಂದ ಪಡೆಯುವಿಕೆ ಮತ್ತು ಪರಮಾತ್ಮನಲ್ಲಿ ಮುಳುಗಿ ಆನಂದ ಪಡೆಯುವಿಕೆ ಇವೆರಡರಲ್ಲಿ ಪರಮಾತ್ಮನಲ್ಲಿ ಆನಂದ ಪಡೆಯುವುದು ಒಮ್ಮೆಲೇ ಬರುವುದಿಲ್ಲ. ಸಾಕಷ್ಟು ಭಕ್ತಿ ಏಕಾಗ್ರತೆಗಳು ಬೆಳೆದ ನಂತರ ಬರುತ್ತದೆ. ಮೂಲತಃ ದೇವರ ಸ್ವರೂಪ ಬೇರೆ ಬೇರೆ ಇದೆ. ಆದರೆ ಆನಂದ ಸ್ವರೂಪವು ಭಗವಂತನ ಕಟ್ಟಕಡೆಯ ಸ್ವರೂಪ. ಅವನ ಸ್ವರೂಪವು ಎಲ್ಲ ರೂಪದಲ್ಲೂ ಪ್ರಕಟವಾಗುತ್ತದೆ. ದೇವರ ಚಿಂತನೆ ಗಾಢವಾಗಿ ಮುಂದುವರೆದರೆ ಮಾತ್ರ ಆನಂದದ ಅನುಭವ ಆಗುತ್ತದೆ. ದೇವರಲ್ಲಿ ಏಕಾಗ್ರತೆಯನ್ನು ಮಾಡಿಕೊಳ್ಳಬೇಕು. ಉಳಿದ ಎಲ್ಲ ಚಿಂತೆಗಳನ್ನು ಮರೆತು ದೇವರ ಪೂಜೆ ಜಪಗಳನ್ನು ಮಾಡಬೇಕು. ದೇವರ ಚಿಂತನೆಯಲ್ಲಿ ಇದ್ದಾಗ ಬೇರೆ ವಿಷಯಗಳು ಸುಳಿಯುತ್ತಿದ್ದರೆ ಅದನ್ನು ಬದಿಗಿಟ್ಟು ದೇವರಲ್ಲಿ ಇಡುತ್ತಾ ಹೋದರೆ ಈ ಆನಂದದ ಅನುಭವವಾಗುತ್ತದೆ ಎಂದರು.

ದೇವರ ಚಿಂತನೆಯಲ್ಲಿ ಆನಂದವನ್ನು ಪಡೆಯುವ ಉಪಾಯ ಬೆಳೆಸಿಕೊಳ್ಳುವ ವಿಧಾನ ವಿವರಿಸಿದರು. ಒಂದೇ ವೇಳೆಯಲ್ಲಿ ಒಂದೇ ಸ್ಥಳದಲ್ಲಿ ಕೂತು, ಬೇರೆ ಯಾವ ಆಲೋಚನೆಗೆ ಅಲ್ಲಿ ಅವಕಾಶ ಕೊಡದೇ ಜಪಾದಿ ಗಳನ್ನು ಮಾಡಿದರೆ ಕ್ರಮೇಣ ಆನಂದದ ಸ್ಥಿತಿ ಬರುತ್ತದೆ. ನಮ್ಮ ಮನಸ್ಸಿಗೆ ಒಂದು ಸ್ವಭಾವ ಇದೆ. ನಮ್ಮ ಮನಸ್ಸು ಒಂದು ದಿನಚರಿಗೆ ಹೊಂದಿಕೊಂಡು ಬಿಡುತ್ತದೆ. ಆದ್ದರಿಂದ ಒಂದು ದಿನಚರಿಯನ್ನು ಮೊದಲು ಹಾಕಿಕೊಳ್ಳಬೇಕು. ದೇವರ ಜಪ, ಸ್ತೋತ್ರ ನಿರಂತರ ಮಾಡಿದಾಗ ಮನಸ್ಸಿಗೆ ಈ ಸ್ಥಿತಿ ದೊರೆಯುತ್ತದೆ. ಇಂತಹ ಅನುಭವದತ್ತ ನಾವು ಹೋಗಬೇಕು. ನಿಯತವಾದ ರೀತಿಯಲ್ಲಿ ಮಾಡಿಕೊಂಡು ಹೋಗುವುದನ್ನು ರೂಢಿಸಿಕೊಂಡರೆ ಜೀವನದಲ್ಲಿ ಉತ್ಸಾಹ ಶಾಲೆಯಾಗಿ ಇರಬಹುದು ಎಂದರು.

ಈ ವೇಳೆ ರಾಜಾರಾಮ ಭಟ್ಟ, ರಮಾಕಾಂತ ಹೆಗಡೆ ಇತರರು ಇದ್ದರು. ಮಹನೀಯರು ಗಾಯತ್ರೀ ಜಪಾನುಷ್ಠಾನ, ಮಾತೆಯರು ಶ್ರೀ ಶಂಕರಸ್ತೋತ್ರ ಪಠಣ, ಲಲಿತಾ ಸಹಸ್ರನಾಮದಿಂದ ಕುಂಕುಮಾರ್ಚನೆ ಮಾಡಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...