ಸಿದ್ದಾಪುರ: ದೇಶದಲ್ಲಿಯೇ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಹೆಚ್ಚಿನ ಕೊಡುಗೆ ನೀಡಿದ ತಾಲೂಕು ಸಿದ್ದಾಪುರ. ತಾಲೂಕಿನ ಯಾವುದೇ ಗ್ರಾಮಕ್ಕೆ ಹೋದರೂ ಅಲ್ಲೊಂದು ಸ್ವಾತಂತ್ರ‍್ಯ ಹೋರಾಟದ ಕಥೆ ಸಿಗುತ್ತದೆ ಎಂದು ಪರಿಸರ ಬರಹಗಾರ ಶಿವಾನಂದ ಕಳವೆ ಹೇಳಿದರು.
ಅತಿಥಿಗಳಾಗಿ ಭಾಗಿಯಾದ ಸಾಗರದ ತಹಶೀಲ್ದಾರ ಚಂದ್ರಶೇಖರ ನಾಯ್ಕ ಮಾತನಾಡಿ, ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ ಮನೆ ಮನೆಗಳಲ್ಲಿ ಹೋರಾಟಗಾರರು ಜನಿಸಿ ಸ್ವಾತಂತ್ರ‍್ಯ ಪಡೆದುಕೊಳ್ಳಲು ತಮ್ಮ ಜೀವನವನ್ನೇ ಸಮರ್ಪಿಸಿದ್ದಾರೆ. ಈಗಿನ ಕಾಲದಲ್ಲಿ ಒಂದಿಂಚು ಭೂಮಿಗಾಗಿ ಅನಾಹುತಗಳೇ ನಡೆಯುತ್ತಿವೆ. ಆದರೆ ಸ್ವಾತಂತ್ರ‍್ಯ ಹೋರಾಟದಲ್ಲಿ ತಮ್ಮ ಜಮೀನು ಮನೆಗಳನ್ನೇ ಕಳೆದುಕೊಂಡವರು ನಮ್ಮ ಪೂರ್ವಜರು ಎಂದರು.
ಸಭೆಯಲ್ಲಿ ಹಿರಿಯ ಸಾಹಿತಿ ಎಸ್.ವಿ. ಹೆಗಡೆ ಮಗೇಗಾರು, ಹಿರಿಯ ವಕೀಲ ಜೆ.ಪಿ.ಎನ್. ಹೆಗಡೆ ಹರಗಿ, ಜಿ.ಎಸ್.ಹೆಗಡೆ ಬೆಳ್ಳೆಮಡ್ಕೆ, ಗುರುರಾಜ ಶಾನಭಾಗ, ಪಿ.ಬಿ. ಹೊಸೂರು, ಶಿರೀಷ ಬೆಟಗೇರಿ ಉಪಸ್ಥಿತರಿದ್ದರು.ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಾರತ ಸೇವಾದಳದ ತಾಲೂಕು ಅಧ್ಯಕ್ಷ ನಾಗರಾಜ ಭಟ್ಟ ಕೆಕ್ಕಾರ ಪ್ರಾಸ್ತಾವಿಕ ಮಾತನಾಡಿದರು.
ಸಭೆಯಲ್ಲಿ ದಕ್ಷಿಣದ ಬಾರ್ಡೋಲಿ ಎಂಬ ಹೆಸರನ್ನು ಶಾಶ್ವತವಾಗಿರಿಸಲು ಸ್ವಾತಂತ್ರ‍್ಯ ಸ್ಮಾರಕ ಭವನ ಸಿದ್ದಾಪುರದಲ್ಲಿ ನಿರ್ಮಾಣವಾಗಬೇಕು. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನಮ್ಮ ಕೂಗಿಗೆ ಬೆಲೆ ನೀಡಬೇಕು. ಸ್ವಾತಂತ್ರ‍್ಯ ಸ್ಮಾರಕ ವನಕ್ಕೆ ಚಾಲನೆ ನೀಡುವುದು. ಪಟ್ಟಣದಲ್ಲಿ ತಿಮ್ಮಪ್ಪ ನಾಯ್ಕ ಮತ್ತು ಚೌಡಾ ನಾಯ್ಕ ವೃತ್ತ ಪುನರ್ ನಿರ್ಮಿಸಬೇಕು. ಪ್ರತಿ ವರ್ಷ ಅಗಸ್ಟ್ ತಿಂಗಳಿನಲ್ಲಿ ಸ್ವಾತಂತ್ರ‍್ಯ ಹೋರಾಟಗಾರ ಸ್ಮರಣೆಯ ಕಾರ್ಯಕ್ರಮ ಹಮ್ಮಿಕೊಳ್ಳುವುದು. ಸ್ವಾತಂತ್ರ‍್ಯ ಹೋರಾಟಗಾರರ ಸಮಗ್ರ ಇತಿಹಾಸ ದಾಖಲಿಸುವುದು. ಶಾಲೆಗಳಲ್ಲಿ ಮತ್ತು ಪಂಚಾಯಿತಿಗಳಲ್ಲಿ ಸ್ಥಳೀಯ ಸ್ವಾತಂತ್ರ‍್ಯ ಹೋರಾಟಗಾರರ ಮಾಹಿತಿ ಫಲಕ ಅಳವಡಿಸುವುದು ಎಂಬ ನಿರ್ಣಯ ಕೈಗೊಳ್ಳಲಾಯಿತು.ಎಂ.ಆರ್.ಭಟ್ಟ ನಿರೂಪಿಸಿದರು. ಎನ್. ಎಸ್. ಹೆಗಡೆ ಸ್ವಾಗತಿಸಿದರು. ಸತ್ಯನಾರಾಯಣ ನಾಯ್ಕ ವಂದಿಸಿದರು.