ಭಟ್ಕಳ, ಮುರುಡೇಶ್ವರದ ಆಟೋ ಚಾಲಕರ ಸಂಘದಿಂದ ಎಸಿಗೆ ಮನವಿ
ಆಟೋ ರಿಕ್ಷಾದವರಿಗೆ ಸಿಎನ್‌ಜಿ ಗ್ಯಾಸ್ ಸಮರ್ಪಕವಾಗಿ ವಿತರಣೆ ಮಾಡಬೇಕೆಂದು ಆಗ್ರಹಿಸಿ ಭಟ್ಕಳ ಮತ್ತು ಮುರುಡೇಶ್ವರ ಆಟೋ ಚಾಲಕರ ಸಂಘದ ವತಿಯಿಂದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಭಟ್ಕಳದಲ್ಲಿ ಭಾರತ್ ಪೆಟ್ರೋಲ್ ಬಂಕ್‌ನಲ್ಲಿ ಸಿಎನ್‌ಜಿ ಗ್ಯಾಸ್ ಬಂಕ್ ಇದ್ದು, ಈ ಬಂಕಿನಲ್ಲಿ ಸಮರ್ಪಕವಾಗಿ ಗ್ಯಾಸ್ ಸರಬರಾಜು ಮಾಡದ ಹಿನ್ನೆಲೆಯಲ್ಲಿ ಆಟೋ ರಿಕ್ಷಾದವರಿಗೆ ತೊಂದರೆ ಆಗಿದೆ. ಭಟ್ಕಳ ತಾಲ್ಲೂಕಿನಲ್ಲಿ ಸದ್ಯ ಒಂದೇ ಸಿಎನ್‌ಜಿ ಪಂಪ್ ಇದ್ದು, ಸರಿಯಾಗಿ ಗ್ಯಾಸ್ ಸರಬರಾಜು ಮಾಡದೇ ಇರುವುದರಿಂದ ಆಟೋ ಚಾಲಕರು ಗ್ಯಾಸ್ ಇಲ್ಲದೇ ಪರದಾಡುವಂತಾಗಿದೆ. ಇಲ್ಲಿಗೆ ಗ್ಯಾಸ್ ಒಮ್ಮೆ ಬಂದರೂ ಆಟೋ ಚಾಲಕರು ತಾಸು ಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಭಟ್ಕಳ ಆಟೋ ಚಾಲಕರು ಸಿಎನ್‌ಜಿ ಗ್ಯಾಸನ್ನೇ ನಂಬಿ ಬಾಡಿಗೆ ಮಾಡುತ್ತಿದ್ದು, ಗ್ಯಾಸ್ ಇಲ್ಲದಿದ್ದರೆ ಖಾಲಿ ಕುಳಿತುಕೊಳ್ಳುವಂತಾಗಿದೆ. ಹೀಗಾಗಿ ಸಿಎನ್‌ಜಿ ಗ್ಯಾಸ್ ಬಂಕಿನವರಿಗೆ ಸಮರ್ಪಕ ಗ್ಯಾಸ್ ಸರಬರಾಜಿಗೆ ಸೂಚಿಸಬೇಕಿದೆ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಸಿಎನ್‌ಜಿ ಗ್ಯಾಸ್ ಬಂದಾಗ ಪ್ರಥಮ ಆದ್ಯತೆ ಆಟೋ ರಿಕ್ಷಾದವರಿಗೆ ಕೊಡಬೇಕಾಗಿದೆ. ಆಟೋ ಚಾಲಕರಿಗೆ ಅನುಕೂಲವಾಗಲು ಸಿಎನ್‌ಜಿ ಗ್ಯಾಸ್ ಸರಬರಾಜಿನಲ್ಲಿ ಉಂಟಾದ ವ್ಯತ್ಯಯದ ಬಗ್ಗೆ ಗಮನ ಹರಿಸಬೇಕು. ವೆಂಕಟಾಪುರದಲ್ಲಿ ನೂತನವಾಗಿ ಸಿಎನ್‌ಜಿ ಗ್ಯಾಸ್ ಬಂಕ್ ನಿರ್ಮಾಣವಾಗುತ್ತಿದ್ದು, ಇದನ್ನು ಶೀಘ್ರ ಆರಂಭಿಸಿದರೆ ಆಟೋ ಚಾಲಕರಿಗೆ ಸಿಎನ್‌ಜಿ ತುಂಬಿಸಿಕೊಳ್ಳಲು ಅನುಕೂಲವಾಗಿದೆ. ಈ ಬಂಕಿನ ಸ್ಥಿತಿಯ ಬಗ್ಗೆಯೂ ತಾವು ಕೂಲಂಕುಶವಾಗಿ ಪರಿಶೀಲಿಸಿ ಆದಷ್ಟು ಬೇಗ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಪಟ್ಟಣದಲ್ಲಿ ಆದಷ್ಟು ಬೇಗ ಹೆದ್ದಾರಿ ಮತ್ತು ಸರ್ವಿಸ್ ರಸ್ತೆ ಕಾಮಗಾರಿ ಮುಗಿಸಲು ಸೂಚಿಸಬೇಕೆಂದು ಆಗ್ರಹಿಸಲಾಗಿದೆ. ಸಹಾಯಕ ಆಯುಕ್ತ ಮಹೇಶ ಮನವಿ ಸ್ವೀಕರಿಸಿದರು. ಭಟ್ಕಳ ಆಟೋ ಚಾಲಕರ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ, ಪ್ರಧಾನ ಕಾರ್ಯದರ್ಶಿ ಮಾದೇವ ನಾಯ್ಕ, ಉಪಾಧ್ಯಕ್ಷರಾದ ಶ್ರೀನಿವಾಸ ನಾಯ್ಕ, ರಿಯಾಜ್ ಪಟೇಲ್, ಕೇಶವ ನಾಯ್ಕ ಶಿರಾಲಿ, ಸಹಕಾರ್ಯದರ್ಶಿ ಈಶ್ವರ ನಾಯ್ಕ, ಸದಸ್ಯರಾದ ಮಂಜುನಾಥ ನಾಯ್ಕ, ಕೃಷ್ಣಾ ನಾಯ್ಕ, ಮಂಜುನಾಥ ನಾಯ್ಕ ಆಸರಕೇರಿ, ಮುರುಡೇಶ್ವರ ಆಟೋ ಯೂನಿಯನ್ ಅಧ್ಯಕ್ಷ ಶ್ರೀಧರ ನಾಯ್ಕ ಸೇರಿ ಆಟೋ ಚಾಲಕರು ಇದ್ದರು.