ವಿಜಯನಗರ ತಿರುಗಾಟ ಸಂಶೋಧನಾ ತಂಡ ತಾಲೂಕಿನ ದೊಡ್ಡ ಅಂತಾಪುರ ಗ್ರಾಮದ ಹರಿಜನ ಹುಲಿಗೆಮ್ಮ ಮತ್ತು ಹಟ್ಟಿ ರಮೇಶ ಅವರ ಹೊಲಗಳಲ್ಲಿ ಎರಡು ಅಪ್ರಕಟಿತ ಜಿನ ಶಾಸನಗಳನ್ನು ಪತ್ತೆ ಹಚ್ಚಿದೆ. ಈ ಶಾಸನಗಳು ವಿಜಯನಗರದ ದೊರೆ ಇಮ್ಮಡಿ ಹರಿಹರನ ಕಾಲಕ್ಕೆ ಸಂಬಂಧಿಸಿದ ಶಾಸನಗಳೆಂದು ಗುರುತಿಸಲಾಗಿದೆ
ಸಂಡೂರು: ವಿಜಯನಗರ ತಿರುಗಾಟ ಸಂಶೋಧನಾ ತಂಡ ತಾಲೂಕಿನ ದೊಡ್ಡ ಅಂತಾಪುರ ಗ್ರಾಮದ ಹರಿಜನ ಹುಲಿಗೆಮ್ಮ ಮತ್ತು ಹಟ್ಟಿ ರಮೇಶ ಅವರ ಹೊಲಗಳಲ್ಲಿ ಎರಡು ಅಪ್ರಕಟಿತ ಜಿನ ಶಾಸನಗಳನ್ನು ಪತ್ತೆ ಹಚ್ಚಿದೆ. ಈ ಶಾಸನಗಳು ವಿಜಯನಗರದ ದೊರೆ ಇಮ್ಮಡಿ ಹರಿಹರನ ಕಾಲಕ್ಕೆ ಸಂಬಂಧಿಸಿದ ಶಾಸನಗಳೆಂದು ಗುರುತಿಸಲಾಗಿದೆ.
ವಿಜಯನಗರ ತಿರುಗಾಟ ಸಂಶೋಧನಾ ತಂಡದ ಪ್ರೊ. ಎಚ್. ತಿಪ್ಪೇಸ್ವಾಮಿ, ಡಾ. ಗೋವಿಂದ, ಡಾ. ಕೃಷ್ಣೇಗೌಡ, ಸಂಶೋಧಕರಾದ ಎಚ್. ರವಿ, ಮಾರುತಿ, ಇಸ್ಮಾಯಿಲ್ ಸಿದ್ದಿಕಿ, ಅಶೋಕ್ ನಾಯಕ್ ದಿದ್ದಿಗಿ ಅವರು ಸ್ಥಳೀಯರಾದ ತಾಯಪ್ಪ, ರಾಗಿ ಶಿವರಾಮಪ್ಪ ಹಾಗೂ ಬಂಡ್ರಿ ಪಾಪಯ್ಯ ಅವರ ಸಹಕಾರದೊಂದಿಗೆ ಪತ್ತೆ ಹಚ್ಚಿದ್ದಾರೆ.ಸಂಶೋಧನಾ ತಂಡ ಇತ್ತೀಚೆಗೆ ಇದೇ ಗ್ರಾಮದ ಹೊಲದಲ್ಲಿ 17ನೇ ತೀರ್ಥಂಕರರಾದ ಶ್ರೀ ಕುಂಥುನಾಥರ ಹೆಸರನ್ನು ಉಲ್ಲೇಖಿಸುವ ದಾನ ಶಾಸನವೊಂದನ್ನು ಪತ್ತೆ ಹಚ್ಚಿತ್ತು. ಅದರ ಮುಂದುವರಿದ ಸಂಶೋಧನೆಯ ಸಂದರ್ಭದಲ್ಲಿ ಇದೀಗ ಮತ್ತೆರಡು ಜಿನ ಶಾಸನಗಳನ್ನು ಪತ್ತೆ ಹಚ್ಚಿರುವುದು ಸಂಡೂರು ಪ್ರದೇಶ ಪ್ರಾಚೀನ ಜೈನ ಧಾರ್ಮಿಕ ಪರಂಪರೆಯ ಕುರಿತ ಅಧ್ಯಯನಕ್ಕೆ ಹೊಸ ಆಯಾಮ ನೀಡಿದ್ದು, ಈ ಭಾಗವು ಜೈನ ಧರ್ಮದ ಪ್ರಮುಖ ಕೇಂದ್ರವಾಗಿದ್ದಿರಬಹುದು ಎಂಬ ಸಾಧ್ಯತೆಗೆ ಪುಷ್ಟಿ ನೀಡುತ್ತಿದೆ.
ಶಾಸನಗಳಲ್ಲಿನ ವಿವರ: ಹೊಸದಾಗಿ ಪತ್ತೆಯಾದ ಎರಡು ಶಾಸನಗಳಲ್ಲಿ ಒಂದರಲ್ಲಿ ಏಳು ಸಾಲುಗಳ ಬರಹವಿದ್ದು, ಮತ್ತೊಂದರಲ್ಲಿ ಎಂಟು ಸಾಲಿನ ಬರಹವಿದೆ. ಎರಡು ಶಾಸನಗಳಲ್ಲಿ ಹರಿಹರರಾಯರು ಶ್ರೀಕುಂಥುತೀರ್ಥರಿಗೆ ಅಂತಾಪುರದ ಗದ್ದೆಯ ಕೆಳಗೆ ಹನ್ನೆರಡು ಕೊಳಗದಷ್ಟು ಬೆಳೆಯುವ ಜಿಜವರಿ ಭೂಮಿಯನ್ನು ದಾನವಾಗಿ ನೀಡಿದ ವಿಷಯ ಉಲ್ಲೇಖವಾಗಿದೆ.ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ. ತಿಪ್ಪೇಸ್ವಾಮಿ ಅವರು ಶಾಸನಗಳ ಕುರಿತು ಮಾತನಾಡಿ, ಡಿ. ಅಂತಾಪುರ ಗ್ರಾಮದ ಹೊಲದಲ್ಲಿ ದೊರೆತಿರುವ ದಾನ ಶಾಸನಗಳು ಕೇವಲ ಭೂದಾನದ ದಾಖಲೆ ಅಲ್ಲ. ಆ ಕಾಲದ ಧಾರ್ಮಿಕ ಸಂಸ್ಥೆಗಳು ಹೇಗೆ ಆರ್ಥಿಕವಾಗಿ ನಿರ್ವಹಿಸಲ್ಪಡುತ್ತಿದ್ದವು, ರಾಜರು ಅಥವಾ ಆಡಳಿತ ವ್ಯವಸ್ಥೆ ಧಾರ್ಮಿಕ ಕೇಂದ್ರಗಳಿಗೆ ಹೇಗೆ ಬೆಸೆದುಕೊಂಡಿದ್ದವು ಎಂಬುದನ್ನು ಅರ್ಥ ಮಾಡಿಕೊಳ್ಳಲು ಇಂತಹ ಶಾಸನಗಳು ಅತ್ಯಂತ ಮಹತ್ವದ ಆಧಾರಗಳಾಗಿವೆ ಎಂದು ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಹಿರಿಯ ಶ್ರೇಣಿ ಸಹಾಯಕ ಪ್ರಾಧ್ಯಾಪಕ ಡಾ. ಗೋವಿಂದ ಮಾತನಾಡಿ, ದೊಡ್ಡ ಅಂತಾಪುರದ ಹೊಲಗಳಲ್ಲಿ ದೊರಕಿರುವ ಎರಡು ಜಿನ ಶಾಸನಗಳು ಗ್ರಾನೈಟ್ ಕಲ್ಲಿನಲ್ಲಿ ರಚಿಸಲಾಗಿವೆ. ಈ ಜಿನ ಶಿಲ್ಪಗಳ ಮೇಲ್ಭಾಗದ ಬಲಬದಿಗೆ ಸೂರ್ಯ, ಎಡ ಬದಿಗೆ ಚಂದ್ರನ ಚಿತ್ರಗಳಿವೆ. ಈ ಚಿತ್ರಗಳ ಕೆಳಗೆ ಮೊಕ್ಕೊಡೆಯ ಕೆಳಗೆ ಪದ್ಮಾಸನದಲ್ಲಿ ಕುಳಿತಿರುವ ಜಿನ ಮೂರ್ತಿಯನ್ನು ಸುಂದರವಾಗಿ ಕೆತ್ತಲಾಗಿದೆ. ಐದಿ ಅಡಿ ಎತ್ತರ, ಒಂದೂವರೆ ಅಡಿ ಅಗಲವಿರುವ ಈ ಶಿಲಾಶಾಸನಗಳು ಕನ್ನಡ ಭಾಷೆಯ ಕನ್ನಡ ಲಿಪಿಯಲ್ಲಿ ಬರೆಯಲಾಗಿದೆ ಎಂದು ಹೇಳಿದರು.ಜಿನ ಶಾಸನಗಳ ರಕ್ಷಣೆಗೆ ಮೊರೆ: ಈ ಅಪ್ರಕಟಿತ ಶಾಸನಗಳ ರಕ್ಷಣೆ ಮಾಡಬೇಕಾದುದು ಅಗತ್ಯ ಎಂದು ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ಡಾ. ಕೃಷ್ಣೇಗೌಡ ತಿಳಿಸಿದ್ದಾರೆ.