ಕಾರವಾರ: ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ವೈದ್ಯಕೀಯ ಸಿಬ್ಬಂದಿ ಹಾಗೂ ವೈದ್ಯಕೀಯ ವಿದ್ಯಾರ್ಥಿನಿಯರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು ಎಂದು ಐಎಂಎ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಸುರೇಶ ಭಟ್ಟ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಆಸ್ಪತ್ರೆಗಳಲ್ಲಿ ಸೂಕ್ತ ರೀತಿಯ ಶೌಚಾಲಯ ಇಲ್ಲ. ವಿಶ್ರಾಂತಿಗಾಗಿ ಕೊಠಡಿಗಳಿಲ್ಲ. ಇದರಿಂದ ನರ್ಸ್‌ಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.ಕೋಲ್ಕತಾದ ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿ, ಹತ್ಯೆ ಮಾಡಿರುವುದು ಖಂಡನೀಯ. ಆರೋಗ್ಯ ವೃತ್ತಿಪರರಿಗೆ ಖಾಸಗಿ ಆಸ್ಪತ್ರೆಯಲ್ಲಿರುವ ಸುರಕ್ಷತಾ ವಾತಾವರಣ ಸರ್ಕಾರಿ ಆಸ್ಪತ್ರೆಗಳಲ್ಲಿ ಇಲ್ಲ. 100 ವರ್ಷಕ್ಕೂ ಅಧಿಕ ಇತಿಹಾಸವಿರುವ ಈ ಸರ್ಕಾರಿ ಆಸ್ಪತ್ರೆಯಲ್ಲಿ ಇಂತಹ ಘಟನೆ ನಡೆದಿದೆ. ಆದರೂ ಪೊಲೀಸರು, ಸರ್ಕಾರ ರಕ್ಷಣೆಗೆ ಕಲ್ಪಿಸುತ್ತಿಲ್ಲ. ಇಂಥ ಘಟನೆಯಿಂದ ಮಹಿಳಾ ವೈದ್ಯಕೀಯ ಸಿಬ್ಬಂದಿ ಆತಂಕ ಪಡುವಂತಾಗಿದೆ ಎಂದರು.
ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕ್ರಿಮ್ಸ್) ವೈದ್ಯಕೀಯ ಸೂಪರಿಟೆಂಡೆಂಟ್ ಡಾ. ಶಿವಾನಂದ ಕುಡ್ತಳಕರ ಕೋಲ್ಕತ್ತಾ ಘಟನೆ ಖಂಡನೀಯ. ಕ್ರಿಮ್ಸ್‌ನ ನರ್ಸ್‌ಗಳಿಗೆ ವಿಶ್ರಾಂತಿ ಕೊಠಡಿ, ಪ್ರತ್ಯೇಕ ಶೌಚಾಲಯ ಇಲ್ಲದೇ ಇದ್ದರೂ, ಸಾಧ್ಯವಾದಷ್ಟು ವ್ಯವಸ್ಥೆ ಮಾಡಲಾಗಿದೆ. ಹೊಸದಾಗಿ 450 ಹಾಸಿಗೆ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಅದು ಪೂರ್ಣಗೊಂಡ ಆನಂತರ ಸರಿಯಾದ ವ್ಯವಸ್ಥೆ ಆಗಲಿದೆ ಎಂದರು.ಸರ್ಕಾರದ ನಿಯಮದಂತೆ ಪ್ರತಿ ಜಿಲ್ಲಾಸ್ಪತ್ರೆಯಲ್ಲಿ 40, ತಾಲೂಕಾಸ್ಪತ್ರೆಯಲ್ಲಿ ತಲಾ 12 ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ ಎರಡರಂತೆ ಭದ್ರತಾ ಸಿಬ್ಬಂದಿ ಕಡ್ಡಾಯವಾಗಿ ನೇಮಿಸಬೇಕು. ಜತೆಗೆ ತಾಲೂಕಾಸ್ಪತ್ರೆಯಲ್ಲಿ 24×7 ಕಾರ್ಯನಿರ್ವಹಿಸಲು ಒಬ್ಬ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ವೈದ್ಯಕೀಯ ಸಿಬ್ಬಂದಿ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ನರೇಂದ್ರ ಪವಾರ ಮಾತನಾಡಿ, ಆಸ್ಪತ್ರೆಗಳಿಗೆ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದರು.ಡಾ. ಶ್ರುತಿ ಎಚ್., ಆರೋಗ್ಯ ವಲಯದಲ್ಲಿ ಮಹಿಳಾ ಸಿಬ್ಬಂದಿ ಭಯದಲ್ಲಿಯೇ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಐಎಂಎ ಕಾರವಾರ ಶಾಖೆಯ ಸದಸ್ಯರಾದ ಡಾ. ಶರದ ಕೊಲ್ವೇಕರ, ಡಾ. ಕೀರ್ತಿ ನಾಯ್ಕ, ಡಾ. ಸುಷ್ಮಾ, ಡಾ. ಸವಿತಾ, ಕ್ರಿಮ್ಸ್ ಹಾಗೂ ಜಿಲ್ಲಾಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ, ವೈದ್ಯಕೀಯ ವಿದ್ಯಾರ್ಥಿ ಯೂನಿಯನ್ ಸದಸ್ಯರು, ವೈದ್ಯ ವಿದ್ಯಾರ್ಥಿಗಳು ಇದ್ದರು.