ಕನ್ನಡಪ್ರಭ ವಾರ್ತೆ ಸವದತ್ತಿ
ಪಟ್ಟಣದಲ್ಲಿ ಕೆಲವೊಂದು ವಾರ್ಡ್‌ಗಳಲ್ಲಿ ಸರಿಯಾಗಿ ಕುಡಿಯುವ ನೀರನ್ನು ಪೂರೈಕೆ ಮಾಡುತ್ತಿಲ್ಲ ಎಂದು ಆಗ್ರಹಿಸಿ ಸಾರ್ವಜನಿಕರು ಬುಧವಾರ ಪುರಸಭೆ ಕಾರ್ಯಾಲಯದಲ್ಲಿ ಮೇಕೆ ಮತ್ತು ಆಕಳು ಕರುವಿನೊಂದಿಗೆ ಆಗಮಿಸಿ ಪ್ರತಿಭಟನೆ ನಡಿಸಿದರು.ವಾರ್ಡ್ ನಂ.೧ ಸೇರಿದಂತೆ ಬಜಾರ ರಸ್ತೆ ಮತ್ತು ಬಳಿಗಾರ ಓಣಿಯ ಸಾರ್ವಜನಿಕರು ನಮ್ಮ ಭಾಗದಲ್ಲಿ ಹನ್ನೆರಡು ದಿನಗಳಿಗೊಮ್ಮೆ ನೀರನ್ನು ಪೂರೈಕೆ ಮಾಡಲಾಗುತ್ತಿದ್ದು, ಮೂರು ತಿಂಗಳಿಂದ ಇದೇ ಸಮಸ್ಯೆಯಾಗಿದೆ ಎಂದು ಪ್ರತಿಭಟಿಸಿ ಪುರಸಭೆ ಅಭಿಯಂತರರಿಗೆ ಮನವಿ ಸಲ್ಲಿಸಿದರು.ಪ್ರಭಾವಿತ ಜನರಿರುವ ಕಡೆಗೆ 2 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದ್ದು, ಈ ಭಾಗದಲ್ಲಿ ಮಾತ್ರ ಹನ್ನೆರಡು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣ ಎನ್ನಲಾಗುತ್ತಿದೆ.ಬಸವರಾಜ ಹಂಪಣ್ಣವರ ಮಾತನಾಡಿ, ರಾಮಾಪುರಸೈಟ್ ಮತ್ತು ಪದಕಿಪುರಂ ವ್ಯಾಪ್ತಿಯಲ್ಲಿ 2 ದಿನಕ್ಕೊಮ್ಮೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿದ್ದು, ನಮ್ಮ ಭಾಗದಲ್ಲಿ ಹತ್ತು ದಿನಗಳಾದರೂ ನೀರು ಪೂರೈಕೆ ಇಲ್ಲದಾಗಿದೆ ಎಂದು ಆಗ್ರಹಿಸಿದರು.
ಪಕ್ಕದಲ್ಲಿಯೇ ಮಲಪ್ರಭಾ ನದಿಯಿದ್ದು, ಇಲ್ಲಿಂದಲೇ ಬೇರೆ ಜಿಲ್ಲೆ ಮತ್ತು ತಾಲೂಕುಗಳಿಗೆ ನೀರನ್ನು ತೆಗೆದುಕೊಂಡು ಹೋಗಿ ಅಲ್ಲಿ ೨೪/೭ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಸವದತ್ತಿಯ ಜನರಿಗೆ ಮಾತ್ರ ಕುಡಿಯುವ ನೀರು ಪೂರೈಕೆಯಲ್ಲಿ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.ಪುರಸಭೆ ಮಾಜಿ ಸದಸ್ಯ ರಾಜು ಪಟ್ಟಣಶೆಟ್ಟಿ ಮಾತನಾಡಿ, ಕುಡಿಯುವ ನೀರು ಪೂರೈಕೆಯಲ್ಲಿ ಅಧಿಕಾರಿಗಳು ಜನರಿಗೆ ಸುಳ್ಳು ಭರವಸೆಯನ್ನು ನೀಡುತ್ತಿದ್ದು, ಕಳೆದ ಬಾರಿ 4 ದಿನಗಳಿಗೊಮ್ಮೆ ಕುಡಿಯುವ ನೀರನ್ನು ಪೂರೈಸುತ್ತೇವೆ ಎಂದು ನೀಡಿದ ಭರವಸೆಗಳು ಹುಸಿಯಾಗಿವೆ. ನೀರು ಬಿಡುವ ಸಿಬ್ಬಂದಿ ತಮಗಿಷ್ಟದಂತೆ ವರ್ತಿಸುತ್ತಿದ್ದು, ಸರಿಯಾದ ವೇಳಾಪಟ್ಟಿಯೊಂದಿಗೆ ನೀರು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು. ಪಟ್ಟಣದ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಸರಿಯಾಗಿ ಪೂರೈಕೆ ಮಾಡದೆ ಹೋದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಅಭಿಯಂತರ ದಂಡಿನ ಮನವಿ ಸ್ವೀಕರಿಸಿ ಮಾತನಾಡಿ, ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾದ ಹಿನ್ನೆಲೆಯಲ್ಲಿ ನೀರು ಪೂರೈಕೆಗೆ ಸಮಸ್ಯೆಯಾಗಿದೆ. ಬರುವಂತ ದಿನಗಳಲ್ಲಿ ಅದನ್ನು ಸರಿಪಡಿಸಿ ಕನಿಷ್ಠ ಪಕ್ಷ ಐದು ದಿನಗಳಿಗೊಮ್ಮೆ ಕುಡಿಯುವ ನೀರನ್ನು ಪೂರೈಕೆ ಮಾಡುವುದಾಗಿ ಭರವಸೆ ನೀಡಿದರು.ಸೋಮಲಿಂಗಯ್ಯ ವಡಿಯರ, ಮಹಾಂತೇಶ ಅಮ್ಮಿನಭಾವಿ, ಗಿರೀಶ ರಂಗಣ್ಣವರ, ಅಜ್ಜಪ್ಪ ಹಾದಿಮನಿ, ಅರುಣ ಅಮ್ಮಿನಭಾವಿ, ಎಂ.ಎಂ.ಕಲಾದಗಿ, ಎಸ್.ಬಾಳಿ ಇತರರು ಉಪಸ್ಥಿತರಿದ್ದರು.