ಭದ್ರಾ ಮೇಲ್ದಂಡೆಗೆ 4 ಸಾವಿರ ಕೋಟಿ ರು. ಹಂಚಿಕೆಗೆ ಒತ್ತಾಯ

KannadaprabhaNewsNetwork |  
Published : Mar 06, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ | Kannada Prabha

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ನೀರಾವರಿ ಅನುಷ್ಠಾನ ಸಮಿತಿಯ ಹಂಪಯ್ಯನ ಮಾಳಿಗೆ ಧನಂಜಯ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಜಲ ಸಂಪನ್ಮೂಲ ಇಲಾಖೆಗೆ ಕನಿಷ್ಟ ಐವತ್ತು ಸಾವಿರ ಕೋಟಿ ರೂಪಾಯಿ ನಿಗಧಿ ಮಾಡಿ ಅದರಲ್ಲಿ ಭದ್ರಾ ಮೇಲ್ಡಂಡೆಗೆ ನಾಲ್ಕು ಸಾವಿರ ಕೋಟಿ ರೂಪಾಯಿ ಹಂಚಿಕೆ ಮಾಡೇಕೆಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಆಗ್ರಹಿಸಿದೆ.

ಇಲ್ಲಿನ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸದಸ್ಯ ಸಂಘಟನೆ, ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಹೇಳಿ ಬಯಲು ಸೀಮೆ ಜನರ ವಂಚಿಸಿದ ಕೇಂದ್ರದ ಮಾದರಿಯಲ್ಲಿ ರಾಜ್ಯ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ನೇತಾರ ಸಿದ್ದರಾಮಯ್ಯ ಕೂಡಾ ಬಯಲು ಸೀಮೆ ಜನರಿಗೆ ಮಹಾ ದ್ರೋಹವೆಸಗಿದ್ದು ಈ ಬಾರಿಯ ಬಜೆಟ್ ನಲ್ಲಿ ತಾವು ಎಸಗಲಾದ ತಪ್ಪನ್ನು ತಿದ್ದಿಕೊಂಡು ಅನುದಾನ ಬಿಡುಗಡೆ ಮಾಡಬೇಕೆಂದು ವಿನಂತಿಸಿದರು.

ಕಳೆದ 2025-26ನೇ ಸಾಲಿನ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆಗೆ ಕೇಂದ್ರದ ಒಂದು ಸಾವಿರ ಕೋಟಿ ಅನುದಾನ ನಿರೀಕ್ಷಿಸಿ ಕೇವಲ 250 ಕೋಟಿ ರೂಪಾಯಿ ಅನುದಾನ ಕಾಯ್ದರಿಸಿದ್ದರು. ಅಚ್ಚರಿ ಎಂದರೆ ಕೇಂದ್ರ ಸರ್ಕಾರ ಅನುಮೋದಿಸದ, ಕೇಂದ್ರ ಸಂಪುಟ ಒಪ್ಪಿಗೆ ನೀಡದ ಹಾಗೂ ಸರ್ಕಾರಿ ಆದೇಶವಾಗದ ಕೃಷಿ ಸಂಚಯಿನಿ ಯೋಜನೆ ತೋರಿಸಿ ಬಯಲು ಸೀಮೆ ಜನರ ವಂಚನೆ ಮಾಡಲಾಗಿತ್ತು. ರಾಜ್ಯ ಸರ್ಕಾರ ಮಾಡಿದ ಮಹಾ ದ್ರೋಹ ಇದೆಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಸಾಲಿನ ಬಜೆಟ್ ನಲ್ಲಿ ಜಲ ಸಂಪನ್ಮೂಲ ಇಲಾಖೆಗೆ ರಾಜ್ಯ ಸರ್ಕಾರ ಒಟ್ಟು 18,826 ಕೋಟಿಯಷ್ಟು ಅಲ್ಪ ಪ್ರಮಾಣದ ಅನುದಾನ ನಿಗದಿ ಮಾಡಿತ್ತು. ಇದರಲ್ಲಿ ಕೃಷ್ಣ ಭಾಗ್ಯಜಲ ನಿಗಮಕ್ಕೆ 5,349 ಕೋಟಿ ರು, ಕಾವೇರಿ ನೀರಾವರಿ ನಿಗಮಕ್ಕೆ 3,171 ಕೋಟಿ ರು, ಕರ್ನಾಟಕ ನೀರಾವರಿ ನಿಗಮಕ್ಕೆ 4,087 ಕೋಟಿ ರು. ಹಾಗೂ ಭದ್ರಾ ಮೇಲ್ದಂಡೆ ವ್ಯಾಪ್ತಿಗೆ ಒಳಪಡುವ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ 3830 ಕೋಟಿ ಅನುದಾನ ಹಂಚಿಕೆ ಮಾಡಲಾಗಿತ್ತು. ವಿದ್ಯುತ್ , ಸಾಲದ ಮರು ಪಾವತಿ, ಬಡ್ಡಿ ಸೇರಿದಂತೆ ಎಲ್ಲ ಬಾಬತ್ತುಗಳ ಸೇರಿದ ಮೊತ್ತ ಇದಾಗಿತ್ತು.

ವಿಶ್ವೇಶ್ವರಯ್ಯ ನೀರಾವರಿ ನಿಗಮಕ್ಕೆ ಇದುವರೆಗೂ ಮಾಡಲಾದ ಸಾಲಕ್ಕೆ ಅಸಲು 902 ಕೋಟಿ ಹಾಗೂ ಬಡ್ಡಿ ರೂಪದಲ್ಲಿ 95 ಕೋಟಿ ಹಾಗೂ ವಿದ್ಯುತ್ ವೆಚ್ಚ10.29 ಕೋಟಿ ರೂಪಾಯಿ ಪಾವತಿಸುವ ಬಾಬತ್ತು ತೋರಿಸಲಾಗಿದೆ. ಕೇಂದ್ರದ ನಿರೀಕ್ಷಿತ ಸಾವಿರ ಕೋಟಿ ನಮೂದಿಸಲಾಗಿದೆ. ಇದರೊಟ್ಟಿಗೆ ಭೂ ಸ್ವಾಧೀನಕ್ಕೆ 600 ಕೋಟಿ ನೀಡಲಾಗಿದೆ. ಹಂಚಿಕೆ ಮಾಡಲಾದ ಮೊತ್ತದಲ್ಲಿ ಈ ಬಾಬತ್ತನ್ನು ಕಳೆದರೆ 2607 ಕೋಟಿಯಷ್ಟಾಗುತ್ತದೆ. ಅಂದರೆ 3830 ಕೋಟಿ ರು ನಲ್ಲಿ 2607 ಕೋಟಿ ಅನುದಾನ ಹೋದಲ್ಲಿ ಕಾಮಗಾರಿಗೆ ಸಿಗುವುದು ಕೇವಲ 1223 ಕೋಟಿ ರೂಪಾಯಿ ಮಾತ್ರ. ಇದರಲ್ಲಿ ನಿಗಮದ ಸಂಬಳ, ಸಾರಿಗೆ ವೆಚ್ಚವೂ ಸೇರುತ್ತದೆ.

ಭದ್ರಾ ಮೇಲ್ದಂಡೆಗೆ ಜ.2026ರ ಅಂತ್ಯದ ವೇಳೆಗೆ ಒಟ್ಟು 11,345 ಕೋಟಿ ರು. ವೆಚ್ಚವಾಗಿದೆ. 2025-26ಸಾಲಿನಲ್ಲಿ ಒಟ್ಟಾರೆ ರಾಜ್ಯ ಸರ್ಕಾರದಿಂದ 650 ಕೋಟಿ ರು ಅನುದಾನ ಮಾತ್ರ ಬಿಡುಗಡೆಯಾಗಿದೆ. 2026 ಫೆಬ್ರವರಿ ಅಂತ್ಯಕ್ಕೆ ಒಟ್ಟು 1896 ಕೋಟಿ ರು. ಬಾಕಿ ಬಿಲ್ಲುಗಳಿವೆ. ಮುಂಬರುವ ಬಜೆಟ್ ನಲ್ಲಿ ರಾಜ್ಯ ಸರ್ಕಾರ 50 ಸಾವಿರ ಕೋಟಿ ರು. ಮೊತ್ತವನ್ನು ಜಲ ಸಂಪನ್ಮೂಲ ಇಲಾಖೆಗೆ ನಿಗಧಿಪಡಿಸಿ ಅದರಲ್ಲಿ ನಾಲ್ಕು ಸಾವಿರ ಕೋಟಿ ರೂಪಾಯಿ ಅನುದಾನವ ಭದ್ರಾ ಮೇಲ್ದಂಡೆಗೆ ಹಂಚಿಕೆ ಮಾಡಬೇಕೆಂದು ಹಂಪಯ್ಯನಮಾಳಿಗೆ ಧನಂಜಯ ಆಗ್ರಹಿಸಿದರು.

ನೀರಾವರಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ರೈತ ಸಂಘದ ಮುಖಂಡರಾದ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಬಸ್ತಿಹಳ್ಳಿ ಸುರೇಶ್ ಬಾಬು,ವಿರುಪಾಕ್ಷಪ್ಪ, ಮಲ್ಲಾಪುರ ತಿಪ್ಪೇಸ್ವಾಮಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ರಕ್ಷಣಾ ನೀತಿ ಸಮರ್ಪಕ ಅನುಷ್ಠಾನದಲ್ಲಿ ಉದಾಸೀನ
ಮಿಡ್ಲ್‌.. 8 ಚದರ ಅಡಿ ಸಿದ್ದರಾಮಯ್ಯ ಭಾವಚಿತ್ರ ಅನಾವರಣ