ಹಾಸನ: ತಾಲೂಕಿನ ಗೊರೂರು ಸಮೀಪದ ಹೇಮಾವತಿ ಅಣೆಕಟ್ಟೆ ಮುಂಭಾಗದ ವಿಶಾಲ ಖಾಲಿ ಭೂ ಪ್ರದೇಶವನ್ನು ಪ್ರವಾಸಿಗರ ಆಕರ್ಷಣೆಯ ಕೇಂದ್ರವನ್ನಾಗಿ ರೂಪಿಸುವ ಉದ್ದೇಶದಿಂದ, ಬೃಂದಾವನ ಗಾರ್ಡನ್ಸ್ ಮಾದರಿಯಲ್ಲಿ ಭವ್ಯ ಉದ್ಯಾನ ನಿರ್ಮಿಸಲು ರಾಜ್ಯ ಸರ್ಕಾರವು ಈ ವರ್ಷದ ಬಜೆಟ್‌ನಲ್ಲಿ ೫೦೦ ಕೋಟಿ ಅನುದಾನವನ್ನು ಮೀಸಲಿಡಬೇಕು ಎಂದು ಬೃಂದಾವನ ಹೋರಾಟ ಸಮಿತಿ ಗೌರವಾಧ್ಯಕ್ಷ ಹೇಮರಾಜ್ ಆಗ್ರಹಿಸಿದರು.
ಆ ಭರವಸೆಯಂತೆ ಪ್ರಸ್ತುತ ಬಜೆಟ್ ಅಧಿವೇಶನದಲ್ಲೇ ೫೦೦ ಕೋಟಿ ಅನುದಾನವನ್ನು ನಿಗದಿಪಡಿಸಿ ಕಾಮಗಾರಿ ಶೀಘ್ರ ಆರಂಭಿಸಬೇಕು ಎಂದು ಸಮಿತಿ ಒತ್ತಾಯಿಸಿದೆ. ಈ ಯೋಜನೆ ಜಾರಿಯಾದರೆ ಗೊರೂರು, ಹಾಸನ ಪ್ರದೇಶವು ಪ್ರಮುಖ ಪ್ರವಾಸಿತಾಣವಾಗಿ ಅಭಿವೃದ್ಧಿಯಾಗಲಿದೆ. ಕುಟುಂಬ ಸಮೇತ ಪ್ರವಾಸಿಗರು ಭೇಟಿ ನೀಡುವ ಕೇಂದ್ರವಾಗುವುದರ ಜೊತೆಗೆ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ ಎಂದು ಅಭಿಪ್ರಾಯಪಟ್ಟರು.
ಹೇಮಾವತಿ ಅಣೆಕಟ್ಟು ಈಗಾಗಲೇ ಪ್ರಕೃತಿ ಸೌಂದರ್ಯದಿಂದ ಪ್ರಸಿದ್ಧವಾಗಿದ್ದು, ಅದನ್ನು ಸುವ್ಯವಸ್ಥಿತ ಉದ್ಯಾನ, ಸಂಗೀತ ಕಾರಂಜಿ, ಬೆಳಕು ಅಲಂಕಾರ, ಮಕ್ಕಳ ಆಟೋಪಕರಣಗಳು, ಪಥಸಂಚಾರ ಮಾರ್ಗಗಳು ಸೇರಿದಂತೆ ಆಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಿದರೆ ಜಿಲ್ಲೆಗೆ ಹೊಸ ಪ್ರವಾಸೋದ್ಯಮ ಅಧ್ಯಾಯ ಆರಂಭವಾಗಲಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬೃಂದಾವನ ಹೋರಾಟ ಸಮಿತಿಯ ಜಗದೀಶ್ ರಾಮಘಟ್ಟ, ಬಂಗಾರಿ ಗೌಡ, ಮಲ್ಲೇಶ್, ನಿಂಗರಾಜು, ಜಿ.ಡಿ. ಪ್ರಕಾಶ್ ಇತರರು ಉಪಸ್ಥಿತರಿದ್ದರು.