ಸಿಖ್ ಸಮುದಾಯಕ್ಕೆ ಪ್ರವರ್ಗ ಸಂಖ್ಯೆ ಹಂಚಿಕೆ ಮಾಡುವಂತೆ ಒತ್ತಾಯ

KannadaprabhaNewsNetwork | Published : Feb 15, 2024 1:15 AM

ಸಾರಾಂಶ

ಇತರ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಮನಾಗಿ ಪರಿಗಣಿಸುವಂತೆ ಆಗ್ರಹ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬೀದರ್ ಗುರುದ್ವಾರ ಶ್ರೀ ನಾನಕ್ ಝೀರಾ ಸಾಹೇಬ್ ಅಧ್ಯಕ್ಷರಾದ ಡಾ. ಎಸ್ ಬಲಬೀರಸಿಂಗ್ ಅವರು ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಸಿಖ್ ಅಲ್ಪಸಂಖ್ಯಾತ ಸಮುದಾಯದ ಜನರು ಕೆಲವು ಕುಂದುಕೊರತೆಗಳನ್ನು ಎದುರಿಸುತ್ತಿದ್ದು ಅವುಗಳನ್ನು ಬಗೆಹರಿಸಬೇಕೆಂದು ಮುಖ್ಯಮಂತ್ರಿಗೆ ಗುರುದ್ವಾರ ಶ್ರೀ ನಾನಕ್ ಝೀರಾ ಸಾಹೇಬ್, ಅಧ್ಯಕ್ಷರಾದ ಡಾ. ಎಸ್ ಬಲಬೀರಸಿಂಗ್ ಮನವಿ ಮಾಡಿದ್ದಾರೆ.

ಈ ಕುರಿತು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಸಿಖ್, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಜೈನ್ ಸಮುದಾಯಗಳಿಗೆ ಸೇರಿದ ಪ್ರತಿನಿಧಿಗಳು ಮತ್ತು ಮುಖಂಡರೊಂದಿಗೆ 2024- 25ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆ ನಡೆಸಿದಾಗ ಬೀದರ್ ಸಿಖ್ ಸಮುದಾಯದಿಂದ ಮನವಿ ನೀಡಿ, ಮುಸ್ಲಿಂರು, ಕ್ರಿಶ್ಚಿಯನ್ನರು, ಬೌದ್ಧರು, ಪಾರ್ಸಿ ಮತ್ತು ಜೈನರು ಇತರ ಸಮುದಾಯಗಳೊಂದಿಗೆ ಸಿಖ್ ಸಮುದಾಯವನ್ನು ಅಲ್ಪಸಂಖ್ಯಾತ ಸಮುದಾಯವೆಂದು ಘೋಷಿಸಲಾಗಿದೆ.

ಸಿಖ್ ಅಲ್ಪಸಂಖ್ಯಾತ ಸಮುದಾಯ ಹೊರತುಪಡಿಸಿ ಇತರ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳಿಗೆ ಪ್ರವರ್ಗ ಸಂಖ್ಯೆಗಳನ್ನು (ಕೆಟೆಗರಿ) ನೀಡಲಾಗಿದೆ. ಆದರೆ ಸಿಖ್ ಸಮುದಾಯಕ್ಕೆ ವರ್ಗ ಸಂಖ್ಯೆ (ಕೆಟೆಗರಿ)ಯನ್ನು ನಿಗದಿಪಡಿಸದ ಕಾರಣ ಸಿಖ್ ಸಮುದಾಯದ ಜನರು ಸಾಮಾನ್ಯ ವರ್ಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ವೃತ್ತಿಪರ ಕೋರ್ಸಗಳು ಮತ್ತು ಸರ್ಕಾರಿ ಪ್ರವೇಶ ಹಾಗೂ ಉದ್ಯೋಗಗಳಿಂದ ವಂಚಿತರಾಗುತ್ತಿದ್ದಾರೆ ಎಂದಿದ್ದಾರೆ.

ಜಿಲ್ಲೆಯಲ್ಲಿ ಅನೇಕ ಸಿಕ್ಕಲಿಗರ ಜನಾಂಗದವರು ವಾಸಿಸುತ್ತಿದ್ದಾರೆ. ಆದರೆ ಅವರು ತುಂಬಾ ಬಡವರಾಗಿದ್ದು, ಸಿಕ್ಕಲಿಗರ ಜನರ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಬೇಕು. ಸರ್ಕಾರದಿಂದ ಒದಗಿಸಲಾದ ಕಾನೂನುಬದ್ಧ ಹಕ್ಕು ಮತ್ತು ಪ್ರಯೋಜನ ಪಡೆಯಲು ಅತ್ಯಂತ ನಿರ್ಲಕ್ಷಿತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಇಲಾಖೆಯ ಸಚಿವರಾದ ಜಮೀರ್ ಅಹ್ಮದ್ ಖಾನ್, ಕೆ.ಜೆ.ಜಾರ್ಜ್‌, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್, ಪೌರಾಡಳಿತ ಸಚಿವ ರಹೀಂ ಖಾನ್, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಮನಪ್ರೀತಸಿಂಗ (ಬಂಟಿ) ಖನುಜಾ ಸೇರಿದಂತೆ ಇನ್ನಿತರರು ಇದ್ದರು.

Share this article