ಭೂಹೀನರಿಗೆ ಒತ್ತುವರಿ ಜಮೀನು ಹಂಚಲು ಆಗ್ರಹ

KannadaprabhaNewsNetwork | Published : Oct 26, 2023 1:00 AM

ಸಾರಾಂಶ

ಭೂಹೀನರಿಗೆ ಒತ್ತುವರಿ ಜಮೀನು ಹಂಚಲು ಆಗ್ರಹ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಒತ್ತುವರಿ ಮಾಡಿರುವ ಹಾಗೂ ನಕಲಿ ದಾಖಲೆ ಸೃಷ್ಟಿಸಿದ ಸಂಬಂಧ ವಶಪಡಿಸಲಾಗಿರುವ ಭೂಮಿಯನ್ನು ಭೂಹೀನರಿಗೆ ಹಂಚಿಕೆ ಮಾಡಬೇಕು ಎಂದು ಕರ್ನಾಟಕ ಜನಶಕ್ತಿ ಸಂಘಟನೆ ರಾಜ್ಯ ಉಪಾಧ್ಯಕ್ಷ ಗೌಸ್ ಮೊಹಿಯುದ್ದೀನ್ ಜಿಲ್ಲಾಡಳಿತ ವನ್ನು ಒತ್ತಾಯಿಸಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒತ್ತುವರಿ ಮಾಡಿರುವ ಭೂಮಿಯನ್ನು ಕೂಡಲೇ ಖುಲ್ಲಾ ಮಾಡಿಸಿ ಭೂಹೀನ ಬಡ ಕುಟುಂಬಗಳಿಗೆ ತಲಾ ಎರಡು ಎಕರೆ ನೀಡಬೇಕು. ನೀಲಗಿರಿ ಗಿಡಗಳನ್ನು ಅರಣ್ಯ ಇಲಾಖೆಯವರು ತೆರವು ಮಾಡಬೇಕು. ಸರ್ವೋಚ್ಛ ನ್ಯಾಯಾಲಯದ ಆದೇಶವಿದ್ದರೂ ಎಲ್ಲಾ ಕಡೆ ನೀಲಗಿರಿ ಮರಗಳನ್ನು ಬೆಳೆಸಲಾಗಿದೆ ಎಂದರು. ಶ್ರೀಮಂತರು ನೂರಾರು ಎಕರೆ ಒತ್ತುವರಿ ಮಾಡಿದ್ದಾರೆ. ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಇರುವ ಅರಣ್ಯ ಇಲಾಖೆ ಬದುಕಿಗಾಗಿ ಒಂದೆರಡು ಎಕರೆ ಸಾಗುವಳಿ ಮಾಡಿರುವ ಬಡ ಜನರ ಕೃಷಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಹೇಳಿದರು. ಕಂದಾಯ ಇಲಾಖೆ, ಸರ್ವೆ ಮಾಡಿಸಿ ಟ್ರಂಚ್ ಅಥವಾ ಬೇಲಿ ಮಾಡಿಕೊಳ್ಳಬೇಕು, ಖಾಲಿ ಇರುವ ಎಲ್ಲಾ ಭೂಮಿ ಅರಣ್ಯ ಇಲಾಖೆ ತಮ್ಮದೇ ಎನ್ನುವ ರೀತಿಯಲ್ಲಿ ಎಲ್ಲಾ ಭೂಮಿಗೂ ಬೇಲಿ ಹಾಕಿಕೊಂಡು ಬಡವರಿಗೆ ಸಿಗಬೇಕಾದ ಭೂಮಿಗೆ ಅಡ್ಡಗಾಲು ಹಾಕುತ್ತಿದೆ. ಅದ್ದರಿಂದ ಅರಣ್ಯ ಹಾಗೂ ಕಂದಾಯ ಭೂಮಿ ಬೇರ್ಪಡಿಸಬೇಕು ಎಂದ ಅವರು, ಅರಣ್ಯದ ಹೆಸರಿನಲ್ಲಿ ಬಡವರಿಗೆ ತೊಂದರೆ ನೀಡಿದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಮೂಡಿಗೆರೆ ತಾಲೂಕು ಕಚೇರಿಯಲ್ಲಿ ಕಂದಾಯ ನಿರೀಕ್ಷಕರು ಸೇರಿದಂತೆ ಹಲವು ಹುದ್ದೆಗಳು ಖಾಲಿ ಇವೆ. ಇವುಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು. ಚಿಕ್ಕಮಗಳೂರು ಉಪ ವಿಭಾಗಾಧಿಕಾರಿಗಳನ್ನು ವರ್ಗಾವಣೆ ಮಾಡುವ ವದಂತಿ ಹಬ್ಬಿದ್ದು, ಜನಪರ ಕೆಲಸ ಮಾಡುವ ಅವರನ್ನು ವರ್ಗಾವಣೆ ಮಾಡಿದರೆ ಹೋರಾಟ ನಡೆಸಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕಬ್ಬಿಗೆರೆ ಮೋಹನ್‌ಕುಮಾರ್, ಪುಟ್ಟೇಗೌಡ ಹಾದಿಹಳ್ಳಿ, ಅರುಣಾಕ್ಷಿ, ದಿಲೀಪ್ ಇದ್ದರು.

Share this article