ಹಾನಗಲ್ಲ: ಗ್ಯಾರಂಟಿ ಯೋಜನೆಗಳನ್ನು ಬೇಕಾದರೆ ಕೈ ಬಿಡಿ, ನಮ್ಮ ಉರ್ದು ಶಾಲೆಗಳ ಮಕ್ಕಳ ಹಿತಕ್ಕೆ ಶಿಕ್ಷಕರನ್ನು ನೇಮಕ ಮಾಡಿ, ಕೇವಲ ಕನ್ನಡ ಶಾಲೆಗಳಿಗೆ ೧೫ ಸಾವಿರ ಶಿಕ್ಷಕರನ್ನು ನೇಮಕ ಮಾಡುತ್ತಿದ್ದೀರಿ, ಉರ್ದು ಶಾಲೆಗಳನ್ನು ಏಕೆ ಕೈಬಿಟ್ಟಿರಿ ಎಂದು ಸರ್ಕಾರವನ್ನು ಪ್ರಶ್ನಿಸಿರುವ ಹಾನಗಲ್ಲಿನ ಅಂಜುಮನ್ ಎ ಇಸ್ಲಾಂ ಕಮಿಟಿ ಅಧ್ಯಕ್ಷ ಎನ್.ಐ. ಸವಣೂರ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಬೆದರಿಕೆ ಒಡ್ಡಿದರು.
ಈಗಾಗಲೇ ಕನ್ನಡ ಶಾಲೆಗಳ ೧೫ ಸಾವಿರ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಈಗ ಇದೆ ಅಧಿಸೂಚನೆ ಬದಲಿಸಿ ಅಥವಾ ಹೊಸ ಅಧಿಸೂಚನೆ ಹೊರಡಿಸಿ ಉರ್ದು ಶಾಲೆಗಳಿಗೆ ಶಿಕ್ಷಕರನ್ನು ಒದಗಿಸಿ. ಹಾವೇರಿ ಜಿಲ್ಲೆಯಲ್ಲಿಯೇ ಉರ್ದು ಶಾಲೆಗಳಿಗೆ ೩೫೦ಕ್ಕೂ ಹೆಚ್ಚು ಶಿಕ್ಷಕರ ಕೊರತೆ ಇದೆ. ರಾಜ್ಯದಲ್ಲಿ ಹತ್ತಾರು ಸಾವಿರ ಶಿಕ್ಷಕರ ಕೊರತೆಯಿಂದ ಉರ್ದು ಶಾಲೆಗಳು ಪ್ರಗತಿಯಲ್ಲಿ ಹಿಂದಿ ಬಿದ್ದಿವೆ. ಕೇವಲ ಕನ್ನಡ ಶಾಲೆಗಳ ಶಿಕ್ಷಕರ ನೇಮಕಕ್ಕೆ ಮಾತ್ರ ಅಧಿಸೂಚನೆ ಹೊರಡಿಸಿರುವುದರಲ್ಲಿ ಯಾರ ಕೈವಾಡವಿದೆಯೋ ಗೊತ್ತಿಲ್ಲ. ಇದೆಲ್ಲ ಸರಿಯಾಗಬೇಕು, ತಪ್ಪಿದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ಕುರಿತು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ, ಹಿರಿಯ ಸಚಿವರಾದ ಎಂ.ಬಿ. ಪಾಟೀಲ, ಪ್ರಿಯಾಂಕ ಖರ್ಗೆ, ಹಾನಗಲ್ಲ ಶಾಸಕ ಶ್ರೀನಿವಾಸ್ ಮಾನೆ ಅವರನ್ನು ಭೇಟಿ ಮಾಡಿ ಈ ಬಗ್ಗೆ ಗಮನ ಸೆಳೆಯಲಾಗಿದೆ. ಒಂದೆರಡು ದಿನಗಳಲ್ಲಿ ರಾಜ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ ನಮ್ಮ ಬೇಡಿಕೆ ಸಲ್ಲಿಸಲಾಗುವುದು. ವಿಳಂಬವಿಲ್ಲದೆ ಉರ್ದು ಶಾಲೆಗಳಿಗೆ ಶಿಕ್ಷಕರನ್ನು ತುಂಬುವ ಆದೇಶವಾಗಬೇಕು. ಇಡೀ ರಾಜ್ಯದ ಮುಸ್ಲಿಂ ಸಮುದಾಯದ ಮುಖಂಡರು ಬೆಂಗಳೂರಿನಲ್ಲಿ ಸಭೆ ಸೇರಿ ಮುಂದಿನ ತೀರ್ಮಾನ ಕೈಗಳ್ಳಲಾಗುವುದು. ಈಗ ನಡೆದಿರುವ ಕನ್ನಡ ಶಾಲೆಯ ಶಿಕ್ಷಕರ ನೇಮಕಾತಿಗೆ ತೊಂದರೆಯಾಗದಂತೆ ಉರ್ದು ಶಾಲೆಯ ಖಾಲಿ ಹುದ್ದೆ ಭರ್ತಿಗೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಅಂಜುಮನ್ ಎ ಇಸ್ಲಾಂ ಕಮಿಟಿ ಉಪಾಧ್ಯಕ್ಷ ನಿಸ್ಸಾರಅಹಮ್ಮದ ಗೌಂಡಿ, ಕಾರ್ಯದರ್ಶಿ ನಿಸ್ಸಾರಅಹಮ್ಮದ ಖಾಜಿ, ಖಜಾಂಚಿ ಫಾರೂಖಹಮ್ಮದ್ ಸಿತಾರ, ನಿರ್ದೇಶಕರಾದ ನವೀದ ಯಾವಗಲ್ಲ, ನಿಸಾರ ಪಾಲವಾಲೆ, ಖುರ್ಷಿದ ಹುಲ್ಲತ್ತಿ, ಇರ್ಫಾನ ಸೌದಾಗರ, ಅಬ್ದುಲ್‌ರಹೆಮಾನ್ ನರೇಗಲ್ಲ, ಜಮೀರ ದರ್ಗಾ, ಅಫ್ರೂಜ್ ರಾಣಿಬೆನ್ನೂರ ಇದ್ದರು.