ಬ್ಯಾಡಗಿ: ಬ್ಯಾಡಗಿ ರೈಲು ನಿಲ್ದಾಣಕ್ಕೆ ಮೆಣಸಿನಕಾಯಿ ರೇಲ್ವೆ ನಿಲ್ದಾಣ ಎಂದು ನಾಮಕರಣ ಮಾಡುವುದೂ ಸೇರಿದಂತೆ ರೇಲ್ವೆ ಪ್ರಯಾಣಿಕರಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ, ಕೆಲವು ವೇಗದ ರೈಲುಗಳ ನಿಲುಗಡೆ ಮಾಡುವಂತೆ ರೈಲ್ವೆ ಪ್ರಯಾಣಿಕರ ಕ್ಷೇಮಾಭಿವೃದ್ಧಿ ಹಾಗೂ ಅಭಿವೃದ್ಧಿ ಸಮಿತಿಯ ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಮಾಲತೇಶ ಅರಳೀಮಟ್ಟಿ, ಬ್ಯಾಡಗಿ ಮೆಣಸಿನಕಾಯಿಗೆ ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆದಿದ್ದು ವಿಶ್ವದ ಪಾರಂಪರಿಕ ಪಟ್ಟಿಗಳಲ್ಲಿ ಸೇರ್ಪಡೆಯಾಗಿದೆ. ವರ್ಷಕ್ಕೆ 3500 ಕೋಟಿ ರುಪಾಯಿಗಳ ವಹಿವಾಟು ಕೇವಲ ಮೆಣಸಿನಕಾಯಿಯಿಂದ ನಡೆಯುತ್ತಿದೆ. ಸದರಿ ಹೆಸರನ್ನು ಇನ್ನಷ್ಟು ಪ್ರಚಾರ (ಬ್ರಾಂಡ್) ನೀಡುವ ನಿಟ್ಟಿನಲ್ಲಿ ಸದರಿ ರೈಲ್ವೆ ನಿಲ್ದಾಣಕ್ಕೆ ಮೆಣಸಿನಕಾಯಿ ರೇಲ್ವೆ ನಿಲ್ದಾಣ ಎಂದು ನಾಮಕರಣ ಮಾಡುವಂತೆ ಆಗ್ರಹಿಸಿದರು.5 ಎಕ್ಸ್ ಪ್ರೆಸ್ ರೈಲುಗಳ ನಿಲುಗಡೆಗೆ ಒತ್ತಾಯ: ಪರಶುರಾಮ ಮೇಲಗಿರಿ ಮಾತನಾಡಿ, ಸಂಸದರಾದ ಬಳಿಕ ಯಲವಿಗಿ ನಿಲ್ದಾಣದಲ್ಲಿ ಬಿಜಾಪುರ- ಮಂಗಳೂರು ವೇಗದೂತ ರೇಲ್ವೆ ನಿಲುಗಡೆ ಮಾಡಿಸಿದ್ದು ಸ್ವಾಗತಾರ್ಹ. ಇದೇ ರೀತಿ ತಾಲೂಕು ಕೇಂದ್ರವಾದ ಹಾಗೂ ಪ್ರಮುಖ ಮೆಣಸಿನಕಾಯಿ ಮಾರಾಟ ಕೇಂದ್ರವಾದ ನಮ್ಮ ಬ್ಯಾಡಗಿ ರೇಲ್ವೆ ನಿಲ್ದಾಣದಲ್ಲಿಯೂ ಸಹ ಯಶವಂತಪುರ ವಾಸ್ಕೋ ಎಕ್ಸ್‌ಪ್ರೆಸ್ (17309), ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ (16589), ಮೈಸೂರು-ದಾದರ್ ಎಕ್ಸ್‌ಪ್ರೆಸ್ (11036), ಪುದುಚೇರಿ-ದಾದರ್ ಎಕ್ಸ್‌ಪ್ರೆಸ್ (11006), ತಿರುನಲ್ವೇಲಿ-ದಾದರ್ ಎಕ್ಸ್‌ಪ್ರೆಸ್ (11022) ರೈಲುಗಳನ್ನು ನಿಲುಗಡೆಗೆ ಅವಶ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು.
ಮುಖ್ತರಸ್ತೆಗೆ ಸಮೀಪಗೊಳಿಸಿ: ಶಿವಯೋಗಿ ಶಿರೂರ ಮಾತನಾಡಿ, ನೂತನ ರೇಲ್ವೆ ನಿಲ್ದಾಣ ಮುಖ್ಯರಸ್ತೆಯಿಂದ ಬಹಳ ದೂರದಲ್ಲಿದೆ. ಇದರಿಂದ ಪ್ರಯಾಣಿಕರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಮೊಟೇಬೆನ್ನೂರ ರಸ್ತೆ ತಲುಪಲು ಸಮಸ್ಯೆಯಾಗುತ್ತಿದೆ. ಕಾರಣ ರೈತರ ಅಲ್ಪ ಜಮೀನನ್ನು ಪರಿಹಾರ ಕೊಡುವ ಮೂಲಕ ಸ್ವಾಧೀನಪಡಿಸಿಕೊಂಡು ಸಮೀಪದ ಮಾರ್ಗವನ್ನು ನಿರ್ಮಿಸಿಕೊಡಬೇಕು, ಬ್ಯಾಡಗಿ-ಮೊಟೇಬೆನ್ನೂರ ರೇಲ್ವೆ ಮೇಲು ಸೇತುವೆ ಕಾಮಗಾರಿ ಮುಗಿದಿದ್ದು ಸಂಚಾರಕ್ಕೆ ಮುಕ್ತವಾಗಿದೆ. ಆದರೆ ಉದ್ಘಾಟನೆಯಾಗಿಲ್ಲ. ಕೂಡಲೇ ಇದನ್ನು ನೆರವೇರಿಸುವಂತೆ ಮನವಿ ಮಾಡಿದರು.ಡೆಮೋ ಅಥವಾ ಮೆಮೋ ರೈಲ್ವೆ ಪ್ರತಿದಿನ ಚಲಿಸಲಿ: ಸುರೇಶ ಉದ್ಯೋಗಣ್ಣನವರ ಮಾತನಾಡಿ, ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಕೂಲಿ ಕಾರ್ಮಿರು ಕುಂದಗೋಳ, ಸಂಶಿ, ಗುಡಗೇರಿ, ಯಲವಿಗಿ ಇನ್ನಿತರ ಕಡೆಗಳಿಂದ ಸಾವಿರಾರು ಮಹಿಳೆಯರು ಪಟ್ಟಣಕ್ಕೆ ಆಗಮಿಸುತ್ತಿದ್ದು, ಮೆಣಸಿನಕಾಯಿ ಬೆಳೆದ ರೈತರು, ಸಾರ್ವಜನಿಕರು ಬ್ಯಾಡಗಿ ಹಾಗೂ ಇತರ ಸ್ಥಳಗಳಿಗೆ ಪ್ರಯಾಣ ಮಾಡುತ್ತಾರೆ. ಆದರೆ ಕಳಸೂರ, ಕರ್ಜಗಿ, ಕಜ್ಜರಿ (ದೇವರಗುಡ್ಡ), ಕರೂರು ಹೀಗೆ ಹಲವು ಹತ್ತಾರು ರೇಲ್ವೆಗಳು ನಿಲುಗಡೆ ಆಗದೇ ಇರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು, ಹುಬ್ಬಳ್ಳಿಯಿಂದ-ದಾವಣಗೆರೆವರೆಗೆ ನಿತ್ಯವೂ ಮೂರ್ನಾಲ್ಕು ಬಾರಿ ಡೆಮೋ ಅಥವಾ ಮೆಮೋ ರೈಲ್ವೆ ಚಲಿಸುವಂತೆ ನೋಡಿಕೊಳ್ಳಲು ಸೂಚಿಸಿದರು.
ಮೂಲ ಸೌಕರ್ಯಕ್ಕೆ ಒತ್ತಾಯ: ಮಹದೇವಪ್ಪ ಕೆಂಚನಗೌಡ್ರ ಮಾತನಾಡಿ, ರೇಲ್ವೆ ಸ್ಟೇಶನ್‌ನಿಂದ ಮೊಟೇಬೆನ್ನೂರ ರಸ್ತೆಯವರೆಗೆ ಈಗಿರುವ ಕಿರಿದಾದ ರಸ್ತೆಯನ್ನು ಅಗಲೀಕರಣ ಮಾಡಿ ದ್ವಿಪಥದ ರಸ್ತೆಯನ್ನಾಗಿ ನಿರ್ಮಿಸಿ ಬೀದಿದೀಪ ಅಳವಡಿಸಬೇಕು. ಈಗಿರುವ ರೈಲ್ವೆ ನಿಲ್ದಾಣ ಅವೈಜ್ಞಾನಿಕವಾಗಿ ನಿರ್ಮಾಣವಾಗಿದೆ. ಪ್ರವೇಶ ದ್ವಾರದಲ್ಲಿಯೇ ಸೋರುತ್ತಿದೆ. ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸಾಕಷ್ಟು ಆಸನಗಳಿಲ್ಲ, ರೇಲ್ವೆ ಸಿಬ್ಬಂದಿಯ ವಸತಿ ಗೃಹಗಳಿಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ. ಪುರುಷರಿಗೆ ಮತ್ತು ಮಹಿಳೆಯರಿಗೆ ಸುಸಜ್ಜಿತ ಶೌಚಾಲಯವಿಲ್ಲ, ರೇಲ್ವೆ ಸ್ಟೇಷನ್ ಎದುರು ವಾಹನಗಳ ನಿಲುಗಡೆ ಮಾಡಲು ಪಾರ್ಕಿಂಗ್ ವ್ಯವಸ್ಥೆಯಿಲ್ಲ, ಮೊಟೇಬೆನ್ನೂರ ರಸ್ತೆಯಿಂದ ರೇಲ್ವೆ ಸ್ಟೇಷನ್‌ಗೆ ಬರಲು ರಾತ್ರಿ ಸಮಯದಲ್ಲಿ ಸರಿಯಾದ ಬೀದಿ ದೀಪಗಳಿಲ್ಲ, ಕೂಡಲೇ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸುವಂತೆ ಮನವಿ ಸಲ್ಲಿಸಿದರು.