ಚನ್ನಪಟ್ಟಣ: ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಪುರಾತನ ಶಾಸನಗಳಿವೆ. ಕಮಲ್‌ಹಾಸನ್ ಕೇವಲ ಒಬ್ಬನಟರೇ ಹೊರತು ಅವರೇನು ಭಾಷಾ ತಜ್ಞರಲ್ಲ, ಸಂಶೋಧಕರಲ್ಲ. ಕನ್ನಡ ಭಾಷೆಯ ಬಗ್ಗೆ ಹಗುರವಾಗಿ ಮಾತನಾಡಿ ಕ್ಷಮೆ ಕೇಳಲು ಸಹ ಒಪ್ಪದ ಅವರ ಸಿನಿಮಾಗಳನ್ನು ಕನ್ನಡನಾಡಿನಲ್ಲಿ ಸಂಪೂರ್ಣ ಬಹಿಷ್ಕರಿಸಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ಆಗ್ರಹಿಸಿದರು.
ಕಾವೇರಿ ನೀರಿನ ವಿಚಾರದಲ್ಲಿ ಪದೇಪದೆ ಖ್ಯಾತೆ ತೆಗೆಯುತ್ತಿರುವ ತಮಿಳುನಾಡು ಇದೀಗ ಭಾಷೆಯ ಬಗ್ಗೆ ಕೀಳುಮಟ್ಟದ ಹೇಳಿಕೆ ಕೊಟ್ಟಿರುವುದು ಖಂಡನೀಯ. ಅಲ್ಲದೆ ಪಕ್ಕದಲ್ಲೇ ಡಾ.ರಾಜ್‌ಕುಮಾರ್ ಅವರ ಪುತ್ರ ಶಿವರಾಜ್‌ಕುಮಾರ್ ಕುಳಿತಿದ್ದರೂ ಅವರು ಈ ಬಗ್ಗೆ ಸ್ಪಷ್ಟನೆ ನೀಡಿ ತಿರುಗೇಟು ನೀಡದೆ ಮೌನವಾಗಿದ್ದದ್ದು ಸಹ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿವೃತ್ತ ಪ್ರಾಂಶುಪಾಲರು ನಿಂಗೇಗೌಡ(ಎನ್‌ಜಿ) ಮಾತನಾಡಿ, ಕನ್ನಡ ಭಾಷೆ ತನ್ನದೇ ಆದ ಪ್ರಾಚೀನತೆ ಹೊಂದಿದೆ. ಇಂತಹ ಭಾಷೆ ಬಗ್ಗೆ ತಮಿಳು ನಟ ಕಮಲ್ ಹಾಸನ್ ಕನ್ನಡ ಭಾಷೆ ತಮಿಳು ಭಾಷೆಯ ಕೂಸು ಎಂದು ಹೇಳಿಕೆ ನೀಡಿರುವುದು ಖಂಡನೀಯ. ಎಲ್ಲಾ ಭಾಷೆಗಳನ್ನು ಪ್ರೀತಿಸಿ ಎಲ್ಲಾ ರಾಜ್ಯದ ಜನತೆಗೆ ಜೀವನ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆ. ಆದರೆ ನಮ್ಮ ಭಾಷೆಯ ಮೇಲೆ ಈ ರೀತಿ ಹೇಳಿಕೆ ನೀಡಿರುವ ಕಮಲ್ ಹಾಸನ್ ಕೂಡಲೇ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.ನಿವೃತ್ತ ಉಪಪ್ರಾಂಶುಪಾಲ ಚ.ಶಿ.ವೆಂಕಟೇಗೌಡ ಮಾತನಾಡಿ, ಕನ್ನಡ ಭಾಷೆಯ ಬಗ್ಗೆ ಕೀಳಾಗಿ ಮಾತನಾಡಿರುವ ಕಮಲ್‌ಹಾಸನ್ ಸಿನಿಮಾಗಳನ್ನು ರಾಜ್ಯದಲ್ಲಿ ಬಹಿಷ್ಕಾರ ಹಾಕಬೇಕು. ಸರ್ಕಾರ ಅವರ ಸಿನಿಮಾಗಳಿಗೆ ರಾಜ್ಯದಲ್ಲಿ ನಿರ್ಬಂಧ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಡಿಎಸ್‌ಎಸ್ ಸಂಚಾಲಕ ವೆಂಕಟೇಶ್, ಕಕಜ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್‌ಗೌಡ, ವೇದಿಕೆಯ ಮರಿಅಂಕೇಗೌಡ, ಕೃಷ್ಣ ಪ್ರಸಾದ್, ಜಯರಾಮು, ರಾಮಕೃಷ್ಣಪ್ಪ, ಚಿನ್ನಪ್ಪ, ಚಿಕ್ಕೇನಹಳ್ಳಿ ಸುರೇಶ್, ರಾಜು, ಬೀರೇಶ್, ರವಿ ಅಪ್ಪಗೆರೆ, ರಾಮಕೃಷ್ಣಪ್ಪ ಮೆಣಸಿಗನಹಳ್ಳಿ, ಡ್ರೈವರ್ ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.ಪೊಟೋ೨೯ಸಿಪಿಟಿ೩:
ಕಮಲ್ ಹಾಸನ್ ಹೇಳಿಕೆ ಖಂಡಿಸಿ ಕಕಜವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.