ಬಿಎಸ್‌ಎನ್‌ಎಲ್ ಅಧಿಕಾರಿಗಳು ಹಾಗೂ ಬಿಎಸ್‌ಎನ್‌ಎಲ್ ಸಲಹಾ ಸಮಿತಿ ಸದಸ್ಯರ ಸಭೆ
ಜಿಲ್ಲೆಯಲ್ಲಿನ ಎಲ್ಲಾ ಬಿಎಸ್‌ಎನ್‌ಎಲ್ ಟವರ್‌ಗಳನ್ನು ಉನ್ನತೀಕರಣಗೊಳಿಸಿ, ಜನರೇಟರ್ ಹಾಗೂ ಬ್ಯಾಟರಿ ವ್ಯವಸ್ಥೆ ಮಾಡಿದಲ್ಲಿ ಇನ್ನೊಂದು ವರ್ಷದ ಒಳಗಾಗಿ ಬಿಎಸ್‌ಎನ್‌ಎಲ್ ಸಿಮ್‌ಗಳಿಗೆ ದುಪ್ಪಟ್ಟು ಬೇಡಿಕೆ ಬರಲಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ನಗರದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಶುಕ್ರವಾರ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರು, ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್ ಸೇವೆ ಇನ್ನಷ್ಟು ಉನ್ನತೀಕರಣಗೊಳಿಸುವ ಉದ್ದೇಶದಿಂದ ರಾಜ್ಯ, ಜಿಲ್ಲೆ, ತಾಲೂಕು ಮಟ್ಟದ ಬಿಎಸ್‌ಎನ್‌ಎಲ್ ಅಧಿಕಾರಿಗಳು, ಬಿಎಸ್‌ಎನ್‌ಎಲ್ ಸಲಹಾ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ 2,56,456 ಬಿಎಸ್‌ಎನ್‌ಎಲ್ ಸಿಮ್‌ಗಳು ಕಾರ್ಯನಿರ್ವಹಿಸುತ್ತಿವೆ. ಇನ್ನೊಂದು ವರ್ಷದಲ್ಲಿ ಎಲ್ಲಾ ಟವರ್‌ಗಳನ್ನು ಸುಸ್ಥಿತಿಗೆ ತಂದು ಜನರೇಟರ್, ಬ್ಯಾಟರಿ ಹಾಗೂ ವಿದ್ಯುತ್ ಸಂಪರ್ಕ ಸಮರ್ಪಕಗೊಳಿಸಿದಲ್ಲಿ ದುಪ್ಪಟ್ಟು ಸಿಮ್‌ಗಳಿಗೆ ಬೇಡಿಕೆ ಬರಬಹುದು. ಅದಕ್ಕೆ ಪೂರ್ವಭಾವಿ ತಯಾರಿಗಳನ್ನು ಮಾಡುತ್ತೇವೆ ಎಂದರು.ಬಿಎಸ್‌ಎನ್‌ಎಲ್ ಸಂಪರ್ಕ ಪಡೆಯುವ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಪ್ರತಿದಿನ 100 ರಿಂದ 200 ಬೇರೆ ಸಿಮ್‌ನ ಗ್ರಾಹಕರು ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಆಗುತ್ತಿದ್ದಾರೆ ಎಂದು ತಿಳಿಸಿದರು.
ಈಗ ಜಿಲ್ಲೆಗೆ 78 ಹೊಸ ಬ್ಯಾಟರಿಗಳು ಮಂಜೂರಾಗಿವೆ. ಅದರಲ್ಲಿ 51 ಅಳವಡಿಕೆ ಆಗಿದೆ. 11 ಪ್ರಗತಿಯಲ್ಲಿದೆ, 18 ಬ್ಯಾಟರಿ ಗಳು ಬರಬೇಕಿದೆ. ಇನ್ನೂ 25ಕ್ಕೆ ಬೇಡಿಕೆ ಇಟ್ಟಿದ್ದೇವೆ ಎಂದು ಮಾಹಿತಿ ನೀಡಿದರು. ಎಲ್ಲಾ 217 ಟವರ್‌ಗಳು ಬ್ಯಾಟರಿ ಮತ್ತು ಜನರೇಟರ್‌ಗಳೊಂದಿಗೆ ವ್ಯವಸ್ಥಿತವಾಗಿ ಕೆಲಸ ಮಾಡುವಂತಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ. ಹೊಸದಾಗಿ 28 ಟವರ್‌ಗಳು ಮಂಜೂರಾಗಿದ್ದು, 21 ಕಾರ್ಯಾರಂಭಗೊಂಡಿವೆ. 3ಕ್ಕೆ ಸ್ಥಳ ನೀಡುವ ಕೆಲಸ ಆಗುತ್ತಿದೆ. ಉಳಿದವುಗಳನ್ನು ಮುಂದಿನ 15 ದಿನಗಳಲ್ಲಿ ಕಾರ್ಯಾರಂಭಗೊಳ್ಳಲಿವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದರು.
ಇದರೊಂದಿಗೆ ಜನರೇಟರ್‌ಗಳನ್ನು ಪೂರ್ಣಪ್ರಮಾಣದಲ್ಲಿ ಅಳವಡಿಸಿದರೆ ಅನುಕೂಲವಾಗುತ್ತದೆ. ಜನರೇಟರ್ ಬೇಡಿಕೆ ಹೆಚ್ಚು ಮಾಡುತ್ತೇವೆ. ಗ್ರಾಪಂಗಳಲ್ಲಿ ಹೈಸ್ಪೀಡ್ ನೆಟ್‌ವರ್ಕ್ ಬಲ ಪಡಿಸಬೇಕಿದೆ. ಕೆಲವು ಕಡೆ ಹೈಸ್ಪೀಡ್ ಸಂಪರ್ಕ ಸಿಗುತ್ತಿ ರಲಿಲ್ಲ. ಮುಂದಿನ ಒಂದು ವಾರದಲ್ಲಿ ಎಲ್ಲಾ ಗ್ರಾಪಂಗಳಿಗೆ ಹೈಸ್ಪೀಡ್ ಸಂಕರ್ಪ ಕೊಡಿಸುವುದಾಗಿ ಅಧಿಕಾರಿಗಳು ಒಪ್ಪಿದ್ದಾರೆ ಎಂದರು.
ಸಭೆಯಲ್ಲಿ ಬಿಜೆಪಿ ಮುಖಂಡರಾದ ಎಚ್.ಸಿ.ಕಲ್ಮರುಡಪ್ಪ, ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಸೇರಿದಂತೆ ಬಿಎಸ್‌ಎನ್‌ಎಲ್ ನಾಮ ನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.
ಚಿಕ್ಕಮಗಳೂರಿನ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅಧ್ಯಕ್ಷತೆಯಲ್ಲಿ ಬಿಎಸ್‌ಎನ್‌ಎಲ್ ಅಧಿಕಾರಿಗಳು ಹಾಗೂ ಬಿಎಸ್‌ಎನ್‌ಎಲ್ ಸಲಹಾ ಸಮಿತಿ ಸದಸ್ಯರ ಸಭೆ ನಡೆಯಿತು. ಎಚ್.ಸಿ. ಕಲ್ಮರುಡಪ್ಪ, ಹಿರೇಮಗಳೂರು ಪುಟ್ಟಸ್ವಾಮಿ ಇದ್ದರು.
------------------------------