ಹಾವೇರಿ: ಸವಣೂರು ತಾಲೂಕಿನ ಹತ್ತಿಮತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ನೇತ್ರಾಧಿಕಾರಿ ಹುದ್ದೆಯನ್ನು ರದ್ದು ಮಾಡಿರುವುದನ್ನು ಖಂಡಿಸಿ ಹಾಗೂ ಆರೋಗ್ಯ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಕಾರ್ಯಕರ್ತರು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ವೇಳೆ ವೇದಿಕೆಯ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ ಮಾತನಾಡಿ, ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಆರೋಗ್ಯ ಇಲಾಖೆಯ ಕೆಲವೊಂದು ಕಡತಗಳ ಪರಿಶೀಲನೆ ಅವಶ್ಯವಾಗಿದೆ. ಲೋಕಾಯುಕ್ತ ಅಥವಾ ಬೇರೆ ತನಿಖಾ ಸಂಸ್ಥೆಯಿಂದ ತನಿಖೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದರು. ಸವಣೂರು ತಾಲೂಕಿನ ಹತ್ತಿಮತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ನೇತ್ರಾಧಿಕಾರಿ ಹುದ್ದೆ ರದ್ದು ಪಡಿಸಿರುವುದು ಖಂಡನೀಯ. ಕೂಡಲೇ ಈ ಕೇಂದ್ರಕ್ಕೆ ನೇತ್ರಾಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು. ಜಿಲ್ಲೆಯ ಬೇರೆ ತಾಲೂಕಿನಲ್ಲಿ 3- 4 ನೇತ್ರಾಧಿಕಾರಿ ಹುದ್ದೆ ಇದ್ದರೂ ಅವುಗಳನ್ನು ರದ್ದುಗೊಳಿಸದೇ ಸವಣೂರು ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಒಂದೇ ಹುದ್ದೆ ಇದ್ದರೂ ಅದನ್ನು ರದ್ದು ಮಾಡಿರುವ ಹಿಂದೆ ಏನೂ ಉದ್ದೇಶ ಇದೆ. ಇಂತಹ ಭ್ರಷ್ಟ ಅಧಿಕಾರಿಗಳು ಮಾಡುವ ತಪ್ಪಿನಿಂದ ಆ ಭಾಗದ ಜನರು ಕಣ್ಣಲ್ಲಿ ಸಣ್ಣ ಧೂಳು ಬಿದ್ದರೂ ಸಹಿತ ದೂರದ ಹಾವೇರಿ ಅಥವಾ ಸವಣೂರಿಗೆ ಬರುವ ಪರಿಸ್ಥಿತಿ ಬಂದಿರುವುದು ದುರದೃಷ್ಟಕರ.
ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೇತ್ರಾಧಿಕಾರಿ ಹುದ್ದೆ ರದ್ದು ಮಾಡಿರುವುದರಲ್ಲಿ ಸಾಕಷ್ಟು ತಪ್ಪುಗಳು ನಡೆದಿವೆ. ಆ ಕಾರಣದಿಂದ ಹತ್ತಿಮತ್ತೂರು ಮತ್ತು ಅಕ್ಕಿಆಲೂರ ಎರಡೂ ಪಿಎಚ್‌ಸಿಗಳಲ್ಲಿ ನೇತ್ರಾಧಿಕಾರಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಫಕ್ಕೀರೇಶ ಕಟ್ಟಿಮನಿ, ನಾಗರಾಜ ವಾಲಿಕಾರ, ಬಸವಣ್ಣಯ್ಯ ಹಳ್ಳಿಕೊಪ್ಪದಮಠ, ಕುಮಾರ ಸುಳ್ಳನವರ, ಮಮತಾ ಕಟ್ಟೆಪ್ಪನವರ, ಪ್ರೇಮಾ ನಾರಾಯಣಸ್ವಾಮಿ, ಲಕ್ಷ್ಮಿ ಕದರಮಂಡಲಗಿ, ಹಾಲಮ್ಮ ಹಿರೇಗೌಡ್ರ, ಇಂದೂ ದೇಸಾಯಿ, ಲಕ್ಷ್ಮಿ ಗಂಗಣ್ಣನವರ, ಇಂದಿರಾ ಬಡಿಗೇರ, ಲಲಿತಾ ಕಳ್ಳಿಹಾಳ, ಶೇಖಪ್ಪ ದೀಪಾವಳಿ, ಲಕ್ಷ್ಮಿ ತರವಣ್ಣನವರ, ಮಾಸೋಬಿ ಕೆಂಗಣ್ಣನವರ, ಲಲಿತಾ ಗೊರವರ, ಮಲ್ಲವ್ವ ಮಕರಬ್ಬಿ ಇತರರು ಇದ್ದರು. ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನಹಾವೇರಿ: ಜಿಲ್ಲೆಯ ನಾಲ್ಕು ತಾಲೂಕುಗಳ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ಗ್ರಾಮ ಒನ್ ಕೇಂದ್ರಗಳ ಸ್ಥಾಪನೆಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹಾವೇರಿ ತಾಲೂಕಿನ ದೇವಿಹೊಸೂರು, ಹಾನಗಲ್ಲ ತಾಲೂಕಿನ ಉಪ್ಪುಣಸಿ, ಬ್ಯಾಡಗಿ ತಾಲೂಕಿನ ತಡಸ ಹಾಗೂ ರಟ್ಟೀಹಳ್ಳಿ ತಾಲೂಕಿನ ಇಂಗಳಗೊಂದಿ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಗ್ರಾಮ ಒನ್ ಕೇಂದ್ರಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಏ. 15ರೊಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳು ಒಂದೇ ಸೂರಿನಡಿ ಒದಗಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಮೂಲಕ ಗ್ರಾಮೀಣ ಭಾಗದ ಜನರಿಗೆ ತಮ್ಮ ಸಮೀಪದಲ್ಲಿ ಸರ್ಕಾರದ ಹಲವು ಸೇವೆಗಳು ತಮ್ಮ ಮನೆಯ ಬಾಗಿಲಿಗೆ ತಲುಪುತ್ತಿವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ನೂತನ ಯೋಜನೆಗಳನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.