ಚಿತ್ರದುರ್ಗ: ಕಡ್ಲೆ ಬಿತ್ತನೆ ಬೀಜ ಮೈ ಮೇಲೆ ಬಿದ್ದು ಸೊಂಟ ಮುರಿದಿದೆ ಎಂದು ರೈತರೊಬ್ಬರು ನೀಡಿದ ದೂರಿನ ಮೇಲೆ ಕೃಷಿ ಅಧಿಕಾರಿ ಮೇಲೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್.ಐ.ಆರ್ ರದ್ದುಪಡಿಸುವಂತೆ ಆಗ್ರಹಿಸಿ ಕೃಷಿ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಲಾಯಿತು. ದೊಡ್ಡ ಸಿದ್ದವ್ವನಹಳ್ಳಿ ಗ್ರಾಮದ ರಾಘವೇಂದ್ರ ಎನ್ನುವ ರೈತ ಕಡ್ಲೆ ಬಿತ್ತನೆ ಬೀಜದ ಚೀಲ ಬಿದ್ದಿದೆ ಎಂದು ಕೋಟೆ ಪೊಲೀಸ್ ಠಾಣೆಯಲ್ಲಿ ಸಹಾಯಕಕೃಷಿ ಅಧಿಕಾರಿ ಆಶಾ ಅವರ ಮೇಲೆ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇದು ಕೃಷಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ಭಯ ಪಡುವಂತಾಗಿದೆ ಎಂದು ಕೃಷಿ ಇಲಾಖೆ ನಿಯೋಗ ನೋವು ತೋಡಿಕೊಂಡಿತು. ಇಲಾಖಾ ಮಾರ್ಗಸೂಚಿ, ನಿಯಮಾನುಸಾರ ದರ-ಕರಾರಿನಲ್ಲಿರುವ ಬೀಜ ಸರಬರಾಜು ಸಂಸ್ಥೆಗಳಿಂದ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನುಕರಿಸಿ, ರೈತರ ದಾಖಲಾತಿಗಳನ್ನು ಪರಿಶೀಲಿಸಿ ಕೆ-ಕಿಸಾನ್ ಎಂಐಎಸ್ ತಂತ್ರಾಂಶದ ಮೂಲಕ ರೈತರಿಗೆ ಬಿತ್ತನೆ ಬೀಜ ವಿತರಿಸಲಾಗುತ್ತಿದೆ.
ಚಿತ್ರದುರ್ಗ ತಾಲೂಕು ಕಸಬಾ ರೈತ ಸಂಪರ್ಕ ಕೇಂದ್ರದಲ್ಲಿ ಕಡಲೆ ಬಿತ್ತನೆ ಬೀಜಗಳನ್ನು ವಿತರಿಸುವಾಗ 8-10-2024 ರಂದು, ರಾಘವೇಂದ್ರ ಎನ್ನುವ ದೊಡ್ಡಸಿದ್ದವ್ವನಹಳ್ಲಿ ಗ್ರಾಮದ ರೈತ ಮದ್ಯಪಾನ ಮಾಡಿ ತೂರಾಡಿಕೊಂಡು ಕಡಲೆ ಖರೀದಿಗೆ ಬಂದಿದ್ದ. ಕಚೇರಿಯಲ್ಲಿರುವುದು ಮಹಿಳಾ ಅಧಿಕಾರಿ ಎಂದು ಲೆಕ್ಕಿಸದೆ ದೌರ್ಜನ್ಯ ತೋರಿ ಕಚೇರಿ ಒಳಗೆ ಅನಧಿಕೃತವಾಗಿ ಪ್ರವೇಶಿಸಿ, ತಾವೇ ಕಡಲೆ ಚೀಲಗಳನ್ನು ನೋಡಲು ಹೋಗಿ ಮೈಮೇಲೆ ಎಳೆದುಕೊಂಡಿರುತ್ತಾರೆ. ನಂತರ ಅಲ್ಲಿಂದ ಬೈಕ್ ನಲ್ಲಿ ನಿರ್ಗಮಿಸಿದ್ದಾರೆ. ಘಟನೆ ನಡೆದ 60 ದಿನಗಳ ಬಳಿಕ ರಾಘವೇಂದ್ರ ಅವರು ಕೆಲ ರೈತ ಮುಖಂಡರನ್ನು ಮತ್ತು ಇತರೆ ರೈತರನ್ನು ಗುಂಪು ಮಾಡಿಕೊಂಡು ಚಿತ್ರದುರ್ಗ ಕಸಬಾ ಹೋಬಳಿ, ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಚೀಲ ಬಿದ್ದಿದ್ದಕ್ಕೆ ಸೊಂಟ ಮುರಿದಿದೆ, ಐದು ಲಕ್ಷ ರು. ಪರಿಹಾರ ಕೊಡಿ ಎಂದು ಮಹಿಳಾ ಅಧಿಕಾರಿ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ.ನಮ್ಮಲ್ಲಿ ತಾವು ಬಿತ್ತನೆ ಬೀಜ ಪಡೆದಿಲ್ಲ. ಘಟನೆ ನಡೆದ ದಿನದಿಂದ ಇಲ್ಲಿಯವರೆಗೆ ನಮ್ಮ ಗಮನಕ್ಕೆ ಏನೂ ತಂದಿಲ್ಲವೆಂದು ಸಹಾಯಕ ಕೃಷಿ ಅಧಿಕಾರಿ ಆಶಾ ವಿನಂತಿಸಿದ್ದಾರೆ. ನಂತರ ರಾಘವೇಂದ್ರ ನಿಮಗೆ ಕೆಲಸ ಮಾಡಲು ಬಿಡುವುದಿಲ್ಲ ಎಂದು ಮಹಿಳಾ ಅಧಿಕಾರಿಗೆ ಧಮಕಿ ಹಾಕಿದ್ದಾರೆ. ನಂತರ ಡಿಸೆಂಬರ್ 5 ರಂದು ಚಿತ್ರದುರ್ಗದ ಕೋಟೆ ಪೋಲೀಸ್ ಠಾಣೆಯಲ್ಲಿ ಕೃಷಿ ಅಧಿಕಾರಿ ಆಶಾರಾಣಿ ರವರ ಮೇಲೆ ದೂರು ದಾಖಲಿಸಿದ್ದಾರೆ. ಪೂರ್ವಾಪರ ಪರಿಶೀಲಿಸದೇ ಠಾಣಾಧಿಕಾರಿಗಳು ಕೃಷಿ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಿಸಿದ್ದಾರೆಂದು ಕೃಷಿ ಇಲಾಖೆ ಅಧಿಕಾರಿಗಳ ತಂಡ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿತು. ಈ ಸಂಬಂಧ ಕೃಷಿ ಅಧಿಕಾರಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ನೀಡಿದರೂ, ಈವರೆಗೆ ದೂರನ್ನೇ ದಾಖಲಿಸಿರುವುದಿಲ್ಲ. ಸಿಬ್ಬಂದಿ ಕೊರತೆ ಹಾಗೂ ಅತಿಯಾದ ಕೆಲಸದ ಒತ್ತಡದಿಂದ ಕರ್ತವ್ಯ ನಿರ್ವಹಿಸುತ್ತಿರುವ ಕೃಷಿ ಅಧಿಕಾರಿಗಳ ಮೇಲೆ ಹೀಗೆ ಏಕಾಏಕಿ ಎಫ್ಐಆರ್ ದಾಖಲಿಸಿರುವುದು ಅವರನ್ನು ಮಾನಸಿಕವಾಗಿ ಕುಗ್ಗಿಸಿದೆ. ಮುಂದೆ ಕರ್ತವ್ಯ ನಿರ್ವಹಿಸಲು ಕಷ್ಟಸಾಧ್ಯವಾದಂತಹ ಪರಿಸ್ಥಿತಿ ನಿರ್ಮಾಣ ಮಾಡಿದೆ. ಹಾಗಾಗಿ ಎಫ್ಐಆರ್. ರದ್ದುಗೊಳಿಸಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ವಿನಂತಿಸಲಾಗಿದೆ. ಕೃಷಿ ಇಲಾಖೆ ಅಧಿಕಾರಿಗಳಾದ ವಿಕಾಸ್, ವೇಣುಗೋಪಾಲ್, ಎನ್.ಸಿ.ಉಮೇಶ್, ಧನರಾಜ್, ಬಿ.ಎನ್.ವೆಂಕಟೇಶ, ಪಾರ್ವತಮ್ಮ, ಆಶಾರಾಣಿ, ಕಿರಣ್ ಕುಮಾರ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.