ನಿಯಮ ರೂಪಿಸಲು ಸಂಶೋಧನಾ ಸಂಸ್ಥೆಗಳ ಪಾತ್ರ ಅಗಾಧ: ಶಾಸಕ ಭಿಮಸೇನ ಚಿಮ್ಮನಕಟ್ಟಿ

KannadaprabhaNewsNetwork | Published : Dec 13, 2024 12:45 AM

ಸಾರಾಂಶ

ಸಿಎಂಡಿಆರ್ (ಸೆಂಟರ್ ಫಾರ್ ಮ್ಲಟಿ-ಡಿಸಿಪ್ಲಿನರಿ ರಿಸರ್ಚ್‌) ನಂತಹ ಸಂಶೋಧನಾ ಸಂಸ್ಥೆಗಳು ಸರ್ಕಾರದ ನೀತಿ ನಿಯಮ ರೂಪಿಸುವಲ್ಲಿ ಜನಪ್ರತಿನಿಧಿಗಳಿಗೆ ಸಲಹೆ ನೀಡಿದಾಗ ಪ್ರಾದೇಶಿಕ ಅಭಿವೃದ್ಧಿ ಪರಿಣಾಮಕಾರಿಯಾಗಿ ಸಾಧಿಸಬಹುದು

ಕನ್ನಡಪ್ರಭ ವಾರ್ತೆ ಬಾದಾಮಿ

ಸಿಎಂಡಿಆರ್ (ಸೆಂಟರ್ ಫಾರ್ ಮ್ಲಟಿ-ಡಿಸಿಪ್ಲಿನರಿ ರಿಸರ್ಚ್‌) ನಂತಹ ಸಂಶೋಧನಾ ಸಂಸ್ಥೆಗಳು ಸರ್ಕಾರದ ನೀತಿ ನಿಯಮ ರೂಪಿಸುವಲ್ಲಿ ಜನಪ್ರತಿನಿಧಿಗಳಿಗೆ ಸಲಹೆ ನೀಡಿದಾಗ ಪ್ರಾದೇಶಿಕ ಅಭಿವೃದ್ಧಿ ಪರಿಣಾಮಕಾರಿಯಾಗಿ ಸಾಧಿಸಬಹುದು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ಭೀಮಸೇನ ಚಿಮ್ಮನಕಟ್ಟಿ ಅಭಿಪ್ರಾಯಪಟ್ಟರು.

ಕಾಲೇಜು ಶಿಕ್ಷಣ ಇಲಾಖೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಾದಾಮಿ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಐಸಿಎಸ್‌ಎಸ್‌ಆರ್‌ನ ಅಂಗ ಸಂಸ್ಥೆಯಾದ ಸಿಎಂಡಿಆರ್- ಬಹುಶಿಸ್ತೀಯ ಸಂಶೋಧನಾ ಕೇಂದ್ರ ಧಾರವಾಡ ಆಶ್ರಯದಲ್ಲಿ ನಗರದ ಹೇಮರೆಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ಕರ್ನಾಟಕದಲ್ಲಿ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ: ಸಂಗತಿಗಳು ಹಾಗೂ ಸವಾಲುಗಳು ಎಂಬ ವಿಷಯದ ಮೇಲೆ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಸ್.ಟಿ.ಬಾಗಲಕೋಟಿ, ಕರ್ನಾಟಕದಲ್ಲಿ ಪ್ರಾದೇಶಿಕ ಅಭಿವೃದ್ಧಿ ಸವಾಲು ಬಗ್ಗೆ ವಿವರಿಸಿದರು. ಸಿಎಂಡಿಆರ್‌ ಸಂಯೋಜಕ ಡಾ.ಎಸ್.ವಿ.ಹನಗೋಡಿಮಠ ಪ್ರಾದೇಶಿಕ ಅಭಿವೃದ್ಧಿ ಕುರಿತಾದ ಸಂಶೋಧನಾತ್ಮಕ ಪತ್ರಿಕೆ ಮಂಡಿಸಿದರು. ಪ್ರಾಚಾರ್ಯ ಡಾ.ಎಂ.ಎನ್.ಸಿದ್ದಲಿಂಗಪ್ಪನವರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆ ಮೇಲೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಜಯಪ್ರಕಾಶ್ ಬೀಳಗಿ ಇದ್ದರು. ಕನ್ನಡ ಉಪನ್ಯಾಸಕ ಡಾ.ವಿ.ಬಿ.ಸಣ್ಣಸಕ್ಕರಗೌಡರ ನಿರೂಪಿಸಿ, ಕನ್ನಡ ಸಹಾಯಕ ಪ್ರಾಧ್ಯಾಪಕಿ ಕವಿತಾ ಜಂಗವಾಡ ವಂದಿಸಿದರು.

ವಿಚಾರ ಸಂಕಿರಣದ ಮೊದಲನೇ ತಾಂತ್ರಿಕ ಗೋಷ್ಠಿಯಲ್ಲಿ ರಾಷ್ಟ್ರದ ಬೇರೆ ಬೇರೆ ಭಾಗಗಳಿಂದ ಬಂದಿದ್ದ ಸಂಶೋಧಕರು ಪತ್ರಿಕೆ ಮಂಡಿಸಿದರು. ಬೆಳಗಾವಿ ಕೆಎಲ್ಇ ಲಿಂಗರಾಜ ಕಾಲೇಜಿನ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ.ರಾಘವೇಂದ್ರ ಹಾಜಗೋಳಕರ ಅಧ್ಯಕ್ಷತೆ ವಹಿಸಿದ್ದರು 2ನೇ ತಾಂತ್ರಿಕ ಗೋಷ್ಠಿಯಲ್ಲಿಯೂ ಅನೇಕ ಸಂಶೋಧಕರು ತಮ್ಮ ಸಂಶೋಧನಾ ಲೇಖನ ಮಂಡಿಸಿದರು. ಅಧ್ಯಕ್ಷತೆ ಬಾಗಲಕೋಟೆ ವಿವಿ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಕಲಾ ನಿಕಾಯದ ಡೀನ್‌ ಡಾ.ಚಿದಾನಂದ ಢವಳೇಶ್ವರ ವಹಿಸಿದ್ದರು.

ವಿಚಾರ ಸಂಕಿರಣದ ಸಮಾರೋಪದಲ್ಲಿ ಕಾಲೇಜು ಪ್ರಾಧ್ಯಾಪಕರಾದ ಗೋವರ್ಧನ ಪಿ.ಬಿ ಗಣ್ಯರನ್ನು ಸ್ವಾಗತಿಸಿದರು. ಪ್ರಾಧ್ಯಾಪಕ ಚಂದ್ರಶೇಖರ ಹೆಗಡೆ, ಎಸ್ಎಸ್‌ಬಿಎಂ ಪದವಿ ಕಾಲೇಜಿನ ಪ್ರಾ. ಪ್ರೊ.ರವೀಂದ್ರ ಮೂಲಿಮನಿ ಮತ್ತು ಬಾದಾಮಿ ಕಾಳಿದಾಸ ಪದವಿ ಕಾಲೇಜಿನ ಪ್ರಾ. ಡಾ.ಬೆಟ್ಟಪ್ಪ ಕಟಾಪುರ ಭಾಗವಹಿಸಿದ್ದರು. ಪ್ರಾ. ಡಾ.ಎಂ.ಎನ್.ಸಿದ್ದಲಿಂಗಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಪ್ರಾಧ್ಯಾಪಕರಾದ ಡಾ.ಸೀಮಾ.ಜಿ.ಕೆ ಸ್ವಾಗತಿಸಿದರು. ಐಕ್ಯೂಸಿ ಸಂಯೋಜಕರು ಡಾ.ಬಾಬು ರಾಯಣ್ಣ ಧನ್ನೂರ ಪ್ರಾಸ್ತಾವಿಕ ಮಾತನಾಡಿದರು.

Share this article