ಕನ್ನಡಪ್ರಭ ವಾರ್ತೆ ಕೋಲಾರಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಆಡಳಿತ ಮಂಡಳಿ ಕಳೆದ ೨೦೨೩ನೇ ಸಾಲಿನಲ್ಲಿ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಅಕ್ರಮ ವೆಸಗಿದ್ದು ಸುಮಾರು ೯ ಕೋಟಿ ರು. ಹಗರಣ ನಡೆಸಿದೆ. ಈ ಬಗ್ಗೆ ಜಿಲ್ಲಾ ಎಸ್‌ಪಿ ಗಮನಕ್ಕೆ ತಂದು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ವಕೀಲ ವೆಂಕಟಾಚಲಪತಿ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಸ್‌ಪಿ ಅವರನ್ನು ಭೇಟಿ ಮಾಡಿ ವಾಪಸಾದ ಬಳಿಕ ಕೋಚಿಮುಲ್ ಅಧ್ಯಕ್ಷ ಕೆ.ವೈ. ನಂಜೇಗೌಡ ಮತ್ತು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ ಎಸ್‌ಪಿ ಅವರನ್ನು ಭೇಟಿಯಾಗಿರುವುದು ದಿಗ್ಭ್ರಮೆ ಮೂಡಿಸಿದೆ ಎಂದರು.ಎಸ್.ಪಿ. ಅವರ ಸೂಚನೆ ಮೇರೆಗೆ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ. ಆದರೆ ನಮಗೆ ಎನ್.ಸಿ.ಎ ನೀಡಲಿಲ್ಲ. ಎಫ್.ಐ.ಆರ್. ಸಹ ದಾಖಲಿಸಿಕೊಳ್ಳಲಿಲ್ಲ. ನಾವು ಕೊಟ್ಟ ದೂರಿನ ಮನವಿ ಪತ್ರದ ಮೇಲೆ ಸ್ವೀಕರಿಸಿದ ಸೀಲ್ ಹಾಕಿ ಕೊಟ್ಟಿದ್ದಾರೆ. ದೂರಿನ ಸಂಬಂಧ ಪರಿಶೀಲಿಸಿ ನಂತರ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ ಎಂದರು. ೩೦ ದಿನಗಳ ಕಾಲಾವಕಾಶ ನೀಡುತ್ತೇವೆ ಒಂದು ವೇಳೆ ಅವರು ದೂರು ದಾಖಲಿಸಿ ಕೊಂಡು ತನಿಖೆ ನಡೆಸದಿದ್ದಲ್ಲಿ ಜೂನ್‌ನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿ ಎಫ್.ಐ.ಆರ್. ದಾಖಲಿಸಲು ಹಾಗೂ ಸಿಬಿಐನಿಂದ ತನಿಖೆ ನಡೆಸುವಂತೆ ಆದೇಶ ತರುತ್ತೇವೆ ಎಂದರು. ಹಾಲು ಒಕ್ಕೂಟದಲ್ಲಿ ನೇಮಕಾತಿಯ ಪಟ್ಟಿ ಪರೀಕ್ಷೆಯ ಮುನ್ನವೇ ಸಿದ್ಧಪಡಿಸಿಕೊಂಡಿದ್ದಾರೆ. ಪ್ರತಿ ಹುದ್ದೆಯ ನೇಮಕಾತಿಗೆ ೨೫ ಲಕ್ಷದಿಂದ ೫೦ ಲಕ್ಷದವರೆಗೆ ವಸೂಲಿ ಮಾಡಿದ್ದಾರೆ. ಪರೀಕ್ಷೆ ನಡೆಸಿದ ಮಂಗಳೂರು ವಿವಿ ಉತ್ತರ ಪತ್ರಿಕೆಗಳನ್ನು ಹೆಚ್ಚುವರಿಯಾಗಿ ಮುದ್ರಿಸಿಕೊಂಡು ಅಭ್ಯರ್ಥಿಗಳಿಂದ ಉತ್ತರ ಬರೆಸಿ ಸಿದ್ಧಪಡಿಸಿಕೊಂಡು ನೈಜ ಪತ್ರಿಕೆಗಳನ್ನು ಬದಲಿಸಿದ್ದಾರೆ. ಇದನ್ನು ಆರ್.ಟಿ.ಐ. ಮೂಲಕ ಪಡೆಯಲು ವಿಳಂಬವಾಗಿದೆ ಎಂದರು. ಸಂದರ್ಶನದಲ್ಲಿ ನೇಮಕಾತಿ ಮಂಡಳಿಗೆ ೧೫ ಅಂಕಗಳವರೆಗೆ ನೀಡುವ ಅಧಿಕಾರ ನಿರ್ದೇಶಕರು ದುರ್ಬಬಳಕೆ ಮಾಡಿಕೊಂಡು ಹಣ ಪಡೆದು ಅಂಕ ನೀಡಿರುವುದಾಗಿ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಅವರೇ ಒಪ್ಪಿಕೊಂಡಿದ್ದು ಕೆ.ಪಿ.ಎಸ್.ಸಿ. ಯು.ಪಿ.ಎಸ್. ಪರೀಕ್ಷೆಗಳ ಸಂದರ್ಶನದಲ್ಲಿ ನೀಡುವ ಅಂಕಗಳಂತೆ ನಾವು ನೀಡಿದ್ದೇವೆ. ಇದು ಕದ್ದು ಮುಚ್ಚಿ ನೀಡಿರುವುದೇನೂ ಅಲ್ಲ. ಎಲ್ಲರಿಗೂ ತಿಳಿದ ವಿಷಯ ಪಾರದರ್ಶಕವಾಗಿದೆ ಎಂದು ಒಪ್ಪಿಕೊಂಡು ಅಪ್ರೋವರ್ ಆಗಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತ ಗೊಳಿಗಾನಹಳ್ಳಿ ನಾಗರಾಜ್, ಸಾಮಾಜಿಕ ಕಾರ್ಯಕರ್ತ ರಮೇಶ್ ಬಾಬು ಇದ್ದರು.- ಸುದ್ದಿಗೋಷ್ಠಿಯಲ್ಲಿ ವಕೀಲ ವೆಂಕಟಾಚಲಪತಿ ಮಾತನಾಡಿದರು.