ಬೆಂಗಳೂರು : ಧರ್ಮಸ್ಥಳಕ್ಕೆ ಕಳಂಕ ತರಲು ಷಡ್ಯಂತ್ರ ಮಾಡಿರುವ ಬಗ್ಗೆ ಸಿಬಿಐ ಅಥವಾ ಎನ್‌ಐಎ ತನಿಖೆ ನಡೆಸಬೇಕು ಎಂದು ರಾಜಧಾನಿಯಲ್ಲಿ ನಡೆದ ಬೃಹತ್ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ಹಕ್ಕೊತ್ತಾಯ ಮಂಡಿಸಲಾಯಿತು.
ಭಾನುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪುಣ್ಯ ಕ್ಷೇತ್ರ ಸಂರಕ್ಷಣಾ ಸಮಿತಿಯಿಂದ ಆಯೋಜಿಸಿದ್ದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಪರಿಹರ ವಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಪಕ್ಷಾತೀತವಾಗಿ ನಾವೆಲ್ಲರೂ ನಮ್ಮ ಧರ್ಮ ರಕ್ಷಣೆ, ಧರ್ಮಾಧಿಕಾರಿಗಳ ರಕ್ಷಣೆ, ಸಂಸ್ಕೃತಿಯ ಉಳಿಯುವಿಕೆಗಾಗಿ ಹೋರಾಟ ಮಾಡಬೇಕು. ನಮಗೆ ದೇಶ, ಧರ್ಮ, ಭಕ್ತಿ ಮುಖ್ಯವಾಗಿದೆ ಎಂದರು.
ಹಿಂದೂ ಧರ್ಮ ಕ್ಷೇತ್ರಗಳ ಮೇಲೆ ಮೊದಲಿನಿಂದಲೂ ಷಡ್ಯಂತ್ರ ನಡೆಯುತ್ತಾ ಬಂದಿದೆ. ಅಂತಹ ಪ್ರಯತ್ನಗಳು ಪ್ರತಿ ಬಾರಿಯೂ ವಿಫಲವಾಗಿವೆ. ಕಂಚಿ ಕಾಮಕೋಟಿ ಪೀಠದ ಸ್ವಾಮೀಜಿ, ಇಶಾ ಫೌಂಡೇಷನ್, ರವಿಶಂಕರ್ ಗುರೂಜಿ ಸೇರಿದಂತೆ ಅನೇಕ ಸ್ವಾಮೀಜಿಗಳು, ಅಯ್ಯಪ್ಪ ದೇವಸ್ಥಾನ, ಶನಿ ಶಿಂಗಣಾಪುರ ದೇವಸ್ಥಾನ ಸೇರಿದಂತೆ ಅನೇಕ ಹಿಂದೂ ದೇಗುಲಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಸ್ವಾಮೀಜಿ ಕಿಡಿಕಾರಿದರು.
ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರುದ್ಧ ಅತ್ಯಂತ ಕೀಳು, ಅವಹೇಳನಕಾರಿ ಪದಗಳನ್ನು ಬಳಸಲಾಗಿದೆ. ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿರುವ ಅಂತಹ ದೊಡ್ಡ ವ್ಯಕ್ತಿತ್ವವನ್ನು ಬಿಡದವರು ನಮ್ಮನ್ನು ಬಿಡುತ್ತಾರೆಯೇ? ಮುಂದೆ ನಮ್ಮ ಬುಡಕ್ಕೆ ಬರಬಹುದು. ಷಡ್ಯಂತ್ರದ ಹಿಂದಿರುವ ವ್ಯಕ್ತಿಗಳು ಯಾರು ಎನ್ನುವುದು ಗೊತ್ತಾಗಬೇಕು ಎಂದು ವಚನಾನಂದ ಸ್ವಾಮೀಜಿ ಆಗ್ರಹಿಸಿದರು.
ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಧರ್ಮಸ್ಥಳ ಹಿಂದೂ ಸಮುದಾಯಕ್ಕೆ ಸೇರಿದ್ದು. ಧರ್ಮಸ್ಥಳದ ಜೈನರು ನಮ್ಮ ಹಿಂದೂ ಸಮಾಜದ ಅವಿಭಾಜ್ಯ ಅಂಗ. ಧರ್ಮಸ್ಥಳ ನಮ್ಮ ಪಾಲಿನ ಶ್ರೀಕ್ಷೇತ್ರವಾಗಿದ್ದು, ನಮ್ಮ ಇಡೀ ಹಿಂದೂ ಪರಿವಾರ ನಂಬುತ್ತದೆ. ಹಿಂದೂ ಧರ್ಮ ವಿರೋಧಿಗಳ ಷಡ್ಯಂತ್ರದಿಂದ ಧರ್ಮಸ್ಥಳಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಲಿಲ್ಲ. ಈಗ ಇನ್ನೂ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಮಹಾ ಪಾದಯಾತ್ರೆ ಮಾಡಬೇಕು. ಕೇಸರಿಯ ಮಹಾಸಾಗರ ಹರಿಯಬೇಕು ಎಂದರು.
ಧರ್ಮಸ್ಥಳ ಪರ ಹೋರಾಟಗಾರ ವಸಂತ ಗಿಳಿಯಾರ್ ಮಾತನಾಡಿ, ನೂರಾರು ವರ್ಷಗಳಿಂದ ನಾವು ಪೂಜಿಸಿಕೊಂಡು ಬಂದಿರುವ ಧರ್ಮ ಕ್ಷೇತ್ರದ ಮೇಲೆ ಅಪವಾದ ಬಂದಿದೆ ಎನ್ನುವ ಸಂಕಟ ಅನೇಕರಲ್ಲಿತ್ತು. ಈ ಘಟನಾವಳಿಗಳಿಂದ ಭಕ್ತರು ಕಣ್ಣೀರಿಟ್ಟರು. ಆದರೆ, ಇಂದು ಸಾವಿರಾರು ಜನರು ಹೋರಾಟ ಮಾಡಿದ ಕಾರಣ ಸತ್ಯದ ಮೆಟ್ಟಿಲಲ್ಲಿ ನಾವು ನಿಂತಿದ್ದೇವೆ. ಲಕ್ಷಾಂತರ ಜನರಿಗೆ ಉದ್ಯೋಗ, ಗ್ರಾಮೀಣಾಭಿವೃದ್ಧಿ, ಸ್ವಾವಲಂಬಿ ಜೀವನ ಕಟ್ಟಿಕೊಟ್ಟಿರುವ, ಕೇರಳದ ಬಡ್ಡಿ ದಂಧೆಕೋರರಿಂದ ಮುಕ್ತಿ ನೀಡಿರುವ, ವ್ಯಸನ ಮುಕ್ತಿ, ಹಿಂದೂ ಧರ್ಮ ಸಂರಕ್ಷಣೆ ಮಾಡುತ್ತಿರುವ ಖಾವಂದರರು ಎಡಪಂಥೀಯರ ಟಾರ್ಗೆಟ್ ಆಗಿದ್ದಾರೆ ಎಂದರು.
ಹಿಂದೂ ಜಾಗರಣ ವೇದಿಕೆಯ ಕೇಶವಮೂರ್ತಿ ಅವರು ಸಮಾವೇಶದ ಹಕ್ಕೊತ್ತಾಯ ಮಂಡಿಸಿದರು. ಶಾಸಕ ಎಸ್.ಆರ್.ವಿಶ್ವನಾಥ್, ಮಾಜಿ ಶಾಸಕ ಪಿ.ರಾಜೀವ್ ಮತ್ತಿತರರು ಉಪಸ್ಥಿತರಿದ್ದರು.
ಚಿಪ್ಪು ಹಿಡಿದುಕೊಂಡು ಬಂದ ಎಸ್‌ಐಟಿ, ಮಾಸ್ಕ್‌ಮ್ಯಾನ್!
ಎಸ್‌ಐಟಿ ತನಿಖೆಯನ್ನು ಅಣಕಿಸುವ ರೀತಿಯಲ್ಲಿ ಮಾಸ್ಕ್‌ಮ್ಯಾನ್ ಮತ್ತು ಎಸ್‌ಐಟಿ ವೇಷಧಾರಿಗಳು ಹಿಂದೂ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ಭಾಗವಹಿಸಿ ಗಮನ ಸೆಳೆದರು. ಶವ ಹೂತಿದ್ದೇನೆ ಎಂದಿದ್ದ ಮಾಸ್ಕ್‌ಮ್ಯಾನ್ ಹಾಗೂ ಎಸ್‌ಐಟಿ ಅಧಿಕಾರಿಗಳಂತೆ ಟೋಪಿ ಧರಿಸಿದ್ದ ಮತ್ತೊಬ್ಬ ವ್ಯಕ್ತಿ ಕೈಯಲ್ಲಿ ಚಿಪ್ಪು ಹಿಡಿದುಕೊಂಡು ಓಡಾಡಿದ್ದನ್ನು ನೋಡಿ ಸಮಾವೇಶಕ್ಕೆ ಬಂದವರು ನಕ್ಕರು.
ಸಮಾವೇಶದ ಹಕ್ಕೊತ್ತಾಯಗಳು
- ಧರ್ಮಸ್ಥಳ ವಿರುದ್ಧದ ಷಡ್ಯಂತ್ರದ ಬಗ್ಗೆ ಸಿಬಿಐ ಅಥವಾ ಎನ್‌ಐಎ ತನಿಖೆ ಆಗಬೇಕು.
- ಧರ್ಮಸ್ಥಳದ ವಿರುದ್ಧ ನಿರಂತರವಾಗಿ ಸುಳ್ಳು ಆರೋಪ ಮಾಡಿದ ಸುಜಾತಾ ಭಟ್ ಕುರಿತು ತನಿಖೆಯಾಗಬೇಕು.
- ಸುಳ್ಳು ಆರೋಪ ಮಾಡಿರುವ ಯುಟ್ಯೂಬರ್ ಸೇರಿದಂತೆ ಅನೇಕರಿಗೆ ವಿದೇಶಗಳಿಂದ ಫಂಡಿಂಗ್ ಆಗಿರುವ ಬಗ್ಗೆ ತನಿಖೆ ಆಗಬೇಕು.
- ಸೌಜನ್ಯಗೆ ನ್ಯಾಯ ಒದಗಿಸುವ ನೆಪದಲ್ಲಿ ಭಾರಿ ಹಣ, ಆಸ್ತಿಯನ್ನು ಕೆಲವರು ಗಳಿಸಿದ್ದು, ಹಣದ ಮೂಲದ ಬಗ್ಗೆ ತನಿಖೆಯಾಗಬೇಕು.
- ಬುರುಡೆ ಬಿಟ್ಟಿರುವ ಅನಾಮಿಕ ಚಿನ್ನಯ್ಯನನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ತನಿಖೆ ನಡೆಸಬೇಕು.