ಕಾಂಗ್ರೆಸ್ಸಿಗೆ ಆರೆಸ್ಸೆಸ್‌ ಎಂದಿಗೂ ಶತ್ರು: ಪ್ರಿಯಾಂಕ್‌

KannadaprabhaNewsNetwork |  
Published : Aug 25, 2025, 01:00 AM ISTUpdated : Aug 25, 2025, 06:08 AM IST
Priyank kharge

ಸಾರಾಂಶ

ಆರ್‌ಎಸ್‌ಎಸ್‌ ಎಂಬ ವಿಷಕಾರಿ ಸಂಘಟನೆಯನ್ನು ಕಾಂಗ್ರೆಸ್‌ ಎಂದಿಗೂ ಶತ್ರುವಾಗಿಯೇ ನೋಡುತ್ತದೆ. ಪ್ರಬುದ್ಧ ಭಾರತ ನಿರ್ಮಾಣ ಆಗಬೇಕಾದರೆ ದೇಶದ ಪ್ರತಿ ಪ್ರಜೆಯೂ ಆರ್‌ಎಸ್‌ಎಸ್‌ಗೆ ತಾಕಿದ ಗಾಳಿಯೂ ನಮಗೆ ಸೋಕಬಾರದು ಎಂಬ ಪ್ರತಿಜ್ಞೆ ಕೈಗೊಳ್ಳಬೇಕು 

 ಬೆಂಗಳೂರು :  ಆರ್‌ಎಸ್‌ಎಸ್‌ ಎಂಬ ವಿಷಕಾರಿ ಸಂಘಟನೆಯನ್ನು ಕಾಂಗ್ರೆಸ್‌ ಎಂದಿಗೂ ಶತ್ರುವಾಗಿಯೇ ನೋಡುತ್ತದೆ. ಪ್ರಬುದ್ಧ ಭಾರತ ನಿರ್ಮಾಣ ಆಗಬೇಕಾದರೆ ದೇಶದ ಪ್ರತಿ ಪ್ರಜೆಯೂ ಆರ್‌ಎಸ್‌ಎಸ್‌ಗೆ ತಾಕಿದ ಗಾಳಿಯೂ ನಮಗೆ ಸೋಕಬಾರದು ಎಂಬ ಪ್ರತಿಜ್ಞೆ ಕೈಗೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಕರೆ ನೀಡಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಆರ್‌ಎಸ್‌ಎಸ್‌ ಗೀತೆ ಹಾಡಿದ ಬೆನ್ನಲ್ಲೇ ಪ್ರಿಯಾಂಕ್‌ ಖರ್ಗೆ ಅವರು ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಈ ಪೋಸ್ಟ್‌ ಕುತೂಹಲ ಕೆರಳಿಸಿದೆ.

ಜನಾಂಗೀಯ ದ್ವೇಷ, ವರ್ಣಾಶ್ರಮದ ಕ್ರೌರ್ಯಗಳನ್ನು ಒಳಗೊಂಡ ನಾಜಿವಾದ, ಮನುವಾದಗಳನ್ನೇ ಆರ್‌ಎಸ್‌ಎಸ್‌ ನರ ನಾಡಿ, ರಕ್ತಗಳಲ್ಲಿ ಪ್ರವಹಿಸಿಕೊಳ್ಳುತ್ತಿದೆ. ಈ ವಿಷಕಾರಿ ಸಂಘಟನೆಯನ್ನು ಕಾಂಗ್ರೆಸ್ ಪಕ್ಷವು ಎಂದಿಗೂ ಶತ್ರುವಾಗಿಯೇ ನೋಡುತ್ತದೆ. ಏಕೆಂದರೆ ಆರ್‌ಎಸ್‌ಎಸ್‌ ಸಂವಿಧಾನಕ್ಕೆ ಶತ್ರು, ಐಕ್ಯತೆ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಏಕತೆ ಹಾಗೂ ಸಾರ್ವಭೌಮತೆಗೆ ಶತ್ರು ಎಂದು ಹೇಳಿದ್ದಾರೆ.

ಪಟೇಲರ ಮಾತು ಸದಾ ಗಮನದಲ್ಲಿರಬೇಕು:

ಬಾಬಾ ಸಾಹೇಬರು, ಸರ್ದಾರ್ ಪಟೇಲರು ದಶಕಗಳ ಹಿಂದೆಯೇ ಆರ್‌ಸ್ಎಸ್ ಕುರಿತು ನಿಷ್ಠುರವಾಗಿ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಸಂಘ ಪರಿವಾರದ ಅಪಾಯವನ್ನು ಅಂದೇ ಊಹಿಸಿದ್ದ ಸರ್ದಾರ್‌ ಪಟೇಲರು ನಿಷೇಧ ಹೇರಿದ್ದರು. ನಮ್ಮ ರಾಷ್ಟ್ರದ ಸ್ವಾತಂತ್ರ್ಯವನ್ನು ಅಪಾಯಕ್ಕೆ ಸಿಲುಕಿಸಲು, ದೇಶದ ಹೆಸರು ಕಳೆಗುಂದಿಸಲು ಕೆಲಸ ಮಾಡುತ್ತಿರುವ ಆರ್‌ಎಸ್‌ಎಸ್‌ ಅನ್ನು ನಿಷೇಧಿಸುತ್ತಿದ್ದೇವೆ ಎಂದು 1948ರಲ್ಲಿ ಪ್ರಕಟಣೆ ಮಾಡಿದ್ದರು.

 ಪಟೇಲರ ಈ ಮಾತುಗಳನ್ನು ನಾವು ಸದಾ ಗಮನದಲ್ಲಿ ಇರಿಸಿಕೊಳ್ಳಬೇಕಿದೆ ಎಂದು ಪ್ರಿಯಾಂಕ್‌ ಹೇಳಿದ್ದಾರೆ.ಆರ್‌ಎಸ್‌ಎಸ್‌ನಿಂದ ದೇಶಕ್ಕೆ ಅಪಾಯವಿದೆಯೇ ಹೊರತು ಸಹಾಯವಿಲ್ಲ. ಸಂವಿಧಾನವನ್ನು ಒಪ್ಪದೆ ಕರಡು ಪ್ರತಿಯನ್ನು ಸುಟ್ಟು ಹಾಕಿದ್ದ, ರಾಷ್ಟ್ರಧ್ವಜವನ್ನು ಗೌರವಿಸದ, ಮಹಿಳೆಯರು, ಶೋಷಿತರನ್ನು ಮೂರನೇ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುವ ಅಜೆಂಡಾ ಹೊಂದಿರುವ ಆರ್‌ಸ್ಎಸ್ ಕಾಂಗ್ರೆಸ್ಸಿಗೆ ಮಾತ್ರವಲ್ಲ ಈ ದೇಶದ ಐಕ್ಯತೆಗೆ ಪರಮ ಶತ್ರು ಎನ್ನುವುದನ್ನು ಪ್ರತಿ ದೇಶಭಕ್ತನೂ ಗಮನದಲ್ಲಿರಿಸಿಕೊಳ್ಳಬೇಕು ಎಂದು ಸೂಚ್ಯವಾಗಿ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ದಲಿತ ಉದ್ದಿಮೆದಾರರ ಬೇಡಿಕೆಗೆ ಸಂಘಟಿತ ಹೋರಾಟ
ಬೆಂಗ್ಳೂರಲ್ಲಿ ರಾಜ್ಯದ ಮೊದಲ ಜೆನ್‌-ಝಿ ಅಂಚೇ ಕಚೇರಿ!