ಶಿಕ್ಷಕರೇ ಬದ್ಧತೆ ಜತೆ ಚಿಂತನೆಯೂ ಇರಲಿ: ಕೃಷಿ ಸಚಿವ ಚಲುವರಾಯಸ್ವಾಮಿ

KannadaprabhaNewsNetwork |  
Published : Aug 25, 2025, 01:00 AM IST
24ಕೆಎಂಎನ್ ಡಿ11 | Kannada Prabha

ಸಾರಾಂಶ

ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಹೋರಾಟ ಮಾಡುವುದು ಪ್ರತಿಯೊಬ್ಬರ ಹಕ್ಕು. ಆದರೆ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಏಳೂವರೆ ಕೋಟಿ ಜನರದ್ದು. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ಆದರೆ, ಕಾನೂನು ಚೌಕಟ್ಟಿನೊಳಗೆ ಸಮಸ್ಯೆ ಬಗೆಹರಿಸಬಹುದು. ಇದಕ್ಕೆ ಕಾಲಾವಕಾಶ ನೀಡಬೇಕಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸರ್ಕಾರಿ ಶಾಲೆಗಳಿಗೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿಲ್ಲ. ಶಿಕ್ಷಕರು ಬದ್ಧತೆಯಿಂದ ಕೆಲಸ ಮಾಡುವ ಜೊತೆಗೆ ಚಿಂತನೆ ನಡೆಸಿ ಹೆಚ್ಚಿನ ಮಕ್ಕಳು ದಾಖಲಾಗುವಂತೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಗುರುಭವನದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ನಡೆದ ಮೈಸೂರು ವಿಭಾಗದ ಮಟ್ಟದ ಶಿಕ್ಷಕ ಪ್ರತಿನಿಧಿಗಳ ಸಮಾವೇಶ ಹಾಗೂ ನೂತನ ರಾಜ್ಯಾಧ್ಯಕ್ಷರು ಮತ್ತು ಪ್ರಧಾನ ಕಾರ್‍ಯದರ್ಶಿಗಳಿಗೆ ಅಭಿನಂದನೆ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಶಾಲೆ ಪಕ್ಕದಲ್ಲೇ ಖಾಸಗಿ ಶಾಲೆಗಳು ಇರುತ್ತವೆ. ಅವು ಹೆಚ್ಚು ಮಕ್ಕಳನ್ನು ಆಕರ್ಷಿಸುತ್ತವೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳೇ ಇರುವುದಿಲ್ಲ. ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬಗ್ಗೆ ಶಿಕ್ಷಕರು ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಹೋರಾಟ ಮಾಡುವುದು ಪ್ರತಿಯೊಬ್ಬರ ಹಕ್ಕು. ಆದರೆ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಏಳೂವರೆ ಕೋಟಿ ಜನರದ್ದು. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ಆದರೆ, ಕಾನೂನು ಚೌಕಟ್ಟಿನೊಳಗೆ ಸಮಸ್ಯೆ ಬಗೆಹರಿಸಬಹುದು. ಇದಕ್ಕೆ ಕಾಲಾವಕಾಶ ನೀಡಬೇಕಾಗುತ್ತದೆ ಎಂದರು.

ಅಧಿಕಾರಿಗಳಿಗೆ ಕಾನೂನು ಬಿಟ್ಟು ಕೆಲಸ ಮಾಡಿ ಎಂದರೆ ಮಾಡುವುದಿಲ್ಲ. ಅದೇ ರೀತಿ ಮುಖ್ಯಮಂತ್ರಿಗಳು ಸಹ ಮಾಡಲು ಸಾಧ್ಯವಿಲ್ಲ. ಅವರಿಗೂ ಸಂವಿಧಾನ, ಕಾನೂನು, ಆರ್ಥಿಕ ಇಲಾಖೆಯ ಎಚ್ಚರಿಕೆ ಎಲ್ಲವನ್ನೂ ನೋಡಬೇಕಾಗುತ್ತದೆ. ಏಕಾಏಕಿ ಎಲ್ಲರ ಬೇಡಿಕೆಗಳನ್ನೂ ಬಗೆಹರಿಸಲು ಸಾಧ್ಯವಿಲ್ಲ. ಈ ಬಗ್ಗೆ ಶಿಕ್ಷಕರು ಗಂಭೀರ ಆಲೋಚನೆ ಮಾಡಬೇಕು ಎಂದರು.

ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವೂ ಇದೆ. ಅದೇ ರೀತಿ ಸರ್ಕಾರದ ಪರಿಸ್ಥಿತಿಯನ್ನೂ ನೋಡಬೇಕಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಜವಾಬ್ದಾರಿ ಏನು ಎಂಬುದನ್ನೂ ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಎಲ್ಲ ಕ್ಷೇತ್ರಗಳಲ್ಲೂ ಆರ್ಥಿಕ ಅಶಿಸ್ತು ಹೆಚ್ಚಾಗುತ್ತಿದೆ. ಆಸೆಗೆ ಕೊನೆ ಇಲ್ಲದಂತಾಗಿದೆ. ಯಾರು ಎಷ್ಟೇ ಕೊಟ್ಟರು ಸಾಧ್ಯವಾಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇದು ಈ ದೇಶದ 130 ಕೋಟಿ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಶಾಸಕ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನಬಾಲದಂಡಿ, ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ನುಗ್ಗಿ, ರಾಜ್ಯ ಪ್ರಧಾನ ಕಾರ್‍ಯದರ್ಶಿ ಚೇತನ್, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ನಾಗೇಶ್, ಮಂಜುನಾಥ್, ಚಿಕ್ಕೇಗೌಡ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರ ಬಡತನ ನಿರ್ಮೂಲನೆಗೆ ಸಂಜೀವಿನಿ ಸಹಕಾರಿ
ರೈತರು ಸರ್ಕಾರದ ಸೌಕರ್ಯ ಪಡೆಯಲು ಎಫ್‌ಐಡಿ ಮಾಡಿಸಲಿ: ಚೇತನಾ ಪಾಟೀಲ