ಹರಪನಹಳ್ಳಿ: ನಗರದ ಹೊರವಲಯದ ರಸ್ತೆ ತಿರುವು ಹಾಗೂ ಅಪಘಾತ, ಕಳ್ಳತನ ಪ್ರಕರಣ ಸಂಭವಿಸುವ ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಕ್ಯಾಮೇರಾ ಅಳವಡಿಸುವಂತೆ ಒತ್ತಾಯಿಸಿ ಕನ್ನಡ ಜಾಗೃತಿ ವೇದಿಕೆಯ ವಿಜಯನಗರ ಜಿಲ್ಲಾ ಘಟಕದಿಂದ ನಗರಸಭೆ ಆಯುಕ್ತೆ ರೇಣುಕಾ ಎಸ್.ದೇಸಾಯಿಗೆ ಮನವಿ ಸಲ್ಲಿಸಿದರು.
ಅಪಘಾತಗಳಲ್ಲಿ ಕುಟುಂಬದ ಆಧಾರಸ್ತಂಭವಾಗಿರುವ ವ್ಯಕ್ತಿಗೆ ತೊಂದರೆಯಾದರೆ ಅದರ ಪರಿಣಾಮ ಕುಟುಂಬದ ಸದಸ್ಯರು ಹಾಗೂ ಮಕ್ಕಳ ಜೀವನದ ಮೇಲೂ ಬೀರುತ್ತದೆ. ಅಪಘಾತಕ್ಕೆ ಕಾರಣವಾದ ವಾಹನ ಪತ್ತೆ ಹಚ್ಚಲು ಹಾಗೂ ಅಪಘಾತದ ಬಳಿಕ ಸ್ಥಳದಿಂದ ಪರಾರಿಯಾಗುವವರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಲು ಸಿಸಿ ಕ್ಯಾಮೇರಾ ಸಹಕಾರಿಯಾಗಲಿವೆ. ಆದ್ದರಿಂದ ಪ್ರಮುಖ ರಸ್ತೆ ತಿರುವುಗಳು ಹಾಗೂ ಅಪಘಾತ ಸಂಭವಿಸುವ ಸ್ಥಳಗಳಲ್ಲಿ ತಕ್ಷಣ ಸಿಸಿ ಕ್ಯಾಮೇರಾ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಹರಪನಹಳ್ಳಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಮಹಾಂತೇಶ್ ಸಜ್ಜನಗೆ ಮನವಿ ಸಲ್ಲಿಸಿ ನೀಲಗುಂದ ಕ್ರಾಸ್ ಬಳಿ ಕಳ್ಳತನದ ಪ್ರಕರಣ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನಿತ್ಯ ಸಂಚರಿಸುವ ಪ್ರಮುಖ ಸ್ಥಳಗಳಲ್ಲಿ ಭದ್ರತಾ ದೃಷ್ಟಿಯಿಂದ ಸಿಸಿ ಕ್ಯಾಮೇರಾ ಅಳವಡಿಸಬೇಕು. ಸಾರ್ವಜನಿಕರು ಭಯವಿಲ್ಲದೆ ಸಂಚರಿಸುವಂತಹ ಸುರಕ್ಷಿತ ವಾತಾವರಣ ನಿರ್ಮಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಕನ್ನಡ ಜಾಗೃತಿ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಚಿರಂಜೀವಿ ಕೂಸಂಬಿ, ಮಹಿಳಾ ಘಟಕದ ಅಧ್ಯಕ್ಷೆ ಎಚ್.ಎಂ.ಗಂಗಮ್ಮ, ತಾಲೂಕು ಉಪಾಧ್ಯಕ್ಷ ಫಕೀರಪ್ಪ ಸೇರಿದಂತೆ ಇತರರು ಇದ್ದರು.