ಕನ್ನಡಪ್ರಭ ವಾರ್ತೆ ರಾಮನಗರ
ಕನಕಪುರ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ವೈದ್ಯೆ ದಾಕ್ಷಾಯಿಣಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಜತೆಗೆ, ಪ್ರಕರಣವನ್ನು ಸಿಒಡಿ ತನಿಖೆಗೆ ವಹಿಸುವಂತೆ ಆಗ್ರಹಿಸಿ ಜಿಲ್ಲಾ ಪ್ರಗತಿ ಪರ ಸಂಘಟನೆ ಒಕ್ಕೂಟದ ಪದಾಧಿಕಾರಿಗಳು ಮಂಗಳವಾರ ನಗರದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.ಆರೋಪಿ ವೈದ್ಯೆ ದಾಕ್ಷಾಯಿಣಿ ವಿರುದ್ಧ ತಕ್ಷಣವೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ, ಸೋಮವಾರ ಕನಕಪುರ ಆಸ್ಪತ್ರೆ ಮುಂಭಾಗ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಈ ವೇಳೆ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಕುಮಾರಸ್ವಾಮಿ, ಕನಕಪುರ ಐಪಿಪಿ ಸಾರ್ವಜನಿಕ ಆಸ್ಪತ್ರೆಯಲ್ಲಿದ್ದ ಭ್ರೂಣಪತ್ತೆ ಸ್ಕ್ಯಾನಿಂಗ್ ಯಂತ್ರವನ್ನು ಮೇಲಧಿಕಾರಿಗಳ ಅನುಮತಿ ಪಡೆಯದೇ ಸ್ಥಳಾಂತರಿಸಿ ಅಕ್ರಮವಾಗಿ ಬಳಸಿಕೊಂಡಿರುವ ಆರೋಪದ ಮೇರೆಗೆ ತನಿಖೆ ನಡೆಸಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ರವರು ಪ್ರಸೂತಿ ತಜ್ಞೆ ಡಾ.ದಾಕ್ಷಾಯಿಣಿ ಅವರಿಗೆ ಕೇವಲ ನೋಟಿಸ್ ನೀಡಿ ಕೈತೊಳೆದುಕೊಂಡು ತಮ್ಮದೇ ತನಿಖಾ ವರದಿಯಲ್ಲಿ ಆರೋಪ ಸಾಬೀತಾಗಿದ್ದರೂ ಈ ವೈದ್ಯೆಯನ್ನು ಅಮಾನತುಗೊಳಿಸದೆ ಅವರ ರಕ್ಷಣೆಗೆ ನಿಂತಿದ್ದಾರೆ ಎಂದು ಆರೋಪಿಸಿದರು.ನೋಟಿಸ್ ನೀಡಿ ತಕ್ಷಣವೇ ಜಾರಿಗೆ ಬರುವಂತೆ ಪಿಸಿ ಮತ್ತು ಎನ್‌ಡಿಟಿ ಕಾಯ್ದೆ ಅನುಸಾರ ಸ್ಥಳದಲ್ಲಿಯೇ ವೈದ್ಯರನ್ನು ಅಮಾನತು ಮಾಡಿಬೇಕಿತ್ತು. ಆದರೆ, ಕೇವಲ ನೋಟಿಸ್ ನೀಡಿದ್ದಾರೆ. ಜತೆಗೆ, ಇದಕ್ಕೆ ಉತ್ತರಿಸಲು ಒಂದು ವಾರದ ಗಡವು ನೀಡಿದ್ದು, ಆರೋಪಿಗಳನ್ನು ವೃತ್ತಿಯಲ್ಲಿ ಬಿಟ್ಟು, ಸಾಕ್ಷ್ಯ ನಾಶಪಡಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಸ್ಕ್ಯಾನಿಂಗ್ ಯಂತ್ರದ ಬಳಕೆಯ ಬಗ್ಗೆ ಸ್ಥಳೀಯ ಶುಶ್ರೂಷಕಿಯರಿಂದ ಲಿಖಿತ ಬರಹ ಪಡೆಯಲಾಗಿದೆ. ಆಸ್ಪತ್ರೆಯ ಟಪಾಲಿನಲ್ಲಿ ಇರಿಸಬೇಕಿದ್ದ ಈ ಪ್ರತಿಗಳನ್ನು ಆರೋಪ ಸ್ಥಾನದಲ್ಲಿರುವ ಡಾ.ದಾಕ್ಷಾಯಿಣಿ ಜತೆ ಸೇವೆ ಸಲ್ಲಿಸುತ್ತಿರುವ ಅವರ ಪತಿ ಡಾ. ಮಲ್ಲೇಶ್ ಕೈಸೇರಿದ್ದು, ತಮ್ಮ ಮನೆಗೆ ಕೊಂಡೊಯ್ದಿದ್ದಾರೆ. ಹಾಗಾಗಿ ಡಾ.ಮಲ್ಲೇಶ್ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಕಾಯ್ದೆಯ ಪ್ರಕಾರ ಪಿಸಿ ಮತ್ತು ಪಿಎನ್‌ಡಿಟಿ ಶಿಕ್ಷಣ ಪಡೆದವರು ಮಾತ್ರ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಲು ಅವಕಾಶವಿರುತ್ತದೆ. ಆದರೆ, ಈ ಶಿಕ್ಷಣವನ್ನೇ ಪಡೆಯದೆ ಪ್ರಸೂತಿ ವೈದ್ಯೆ ದಾಕ್ಷಾಯಿಣಿ ಸ್ವತಃ ಸ್ಕ್ಯಾನಿಂಗ್ ಮಾಡುತ್ತಿದ್ದಾರೆ ಎಂದು ಹೇಳಿದರು.
ಕನಕಪುರ ನಗರದಲ್ಲಿ ದಾಕ್ಷಾಯಿಣಿ ಅವರು ಖಾಸಗಿ ಕ್ಲಿನಿಕ್ ನಡೆಸುತ್ತಿದ್ದಾರೆ. ತಮ್ಮ ಸೇವಾ ಅವಧಿಯನ್ನು ಸರಕಾರಿ ಆಸ್ಪತ್ರೆಯಲ್ಲಿ ಕಳೆಯದೆ ಬೇಕಾಬಿಟ್ಟಿಯಾಗಿ ಹಾಜರಾಗುತ್ತಿದ್ದಾರೆ. ಆ ಮೂಲಕ ತಮ್ಮ ಕರ್ತವ್ಯವನ್ನು ದುರುಪಯೋಗ ಮಾಡುತ್ತಿದ್ದಾರೆ ಎಂದು ಹೇಳಿದರು.ಸರ್ಕಾರ ಆಸ್ಪತ್ರೆಗಾಗಿ ನೀಡುವ ಅನೇಕ ಔಷಧಿಗಳನ್ನು ತಮ್ಮ ಕ್ಲಿನಿಕ್‌ಗೆ ಬರುವ ಗರ್ಭಿಣಿಯರಿಗೆ ನೀಡಿ ದುಡ್ಡು ಪಡೆಯುತ್ತಿದ್ದಾರೆ. ಅನೇಕ ಹೆಣ್ಣು ಮಕ್ಕಳಿಗೆ ಸಾಮಾನ್ಯ ಹೆರಿಗೆ ಸಾಧ್ಯವಿದ್ದರೂ, ದುಡ್ಡಿನ ಆಸೆಗಾಗಿ ಸಿಜರಿಯನ್ ಹೆರಿಗೆ ಮಾಡಿಸುವ ಮೂಲಕ ಹೆಣ್ಣು ಮಕ್ಕಳ ಜೀವದ ಜತೆಗೆ ಚೆಲ್ಲಾಟವಾಡುತ್ತಿದ್ದಾರೆ. ತಮ್ಮ ಖಾಸಗಿ ಕ್ಲಿನಿಕ್‌ನಲ್ಲಿಯೂ ಸಹ ಅಕ್ರಮ ಸ್ಕ್ಯಾನಿಂಗ್ ಯಂತ್ರವನ್ನು ಬಳಸುತ್ತಿದ್ದಾರೆ. ಇದರಿಂದಾಗಿ ಭ್ರೂಣ ಪತ್ತೆ ಹಾಗೂ ಹಣದಾಸೆಗಾಗಿ ಭ್ರೂಣಗಳ ಹತ್ಯೆಯನ್ನು ಮಾಡುತ್ತಿದ್ದಾರೆ. ಹಾಗಾಗಿ ಈ ವೈದ್ಯೆಯ ವಿರುದ್ಧ ಸಿಒಡಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.