ನರಗುಂದ: ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇಲ್ಲದಿರುವುದರಿಂದ ರೈತರು ಕಣ್ಣೀರು ಸುರಿಸುವಂತಾಗಿದೆ. ಕೂಡಲೇ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.
₹40 ಸಾವಿರ ಖರ್ಚು: 1 ಎಕರೆಗೆ ರೈತರು ಬಿತ್ತನೆಗೆ ಬೀಜ, ಔಷಧಿ, ಕಸ ತೆಗೆಯುವುದು ಸೇರಿ ಮಾರುಕಟ್ಟೆಗೆ ಹೋಗುವ ವರೆಗೆ ₹30ರಿಂದ ₹40 ಸಾವಿರ ಖರ್ಚು ಮಾಡುತ್ತಾರೆ. ಆದರೆ ಬೆಲೆ ಪಾತಾಳಕ್ಕೆ ಕುಸಿದಿರುವುದರಿಂದ ಮಾಡಿದ ಖರ್ಚೂ ವಾಪಸ್ ಬಾರದಂತಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಕೊಳೆಯುತ್ತಿರುವ ಈರುಳ್ಳಿ: ಜೂನ್‌ದಿಂದ ಸೆಪ್ಟೆಂಬರ್ ತಿಂಗಳವರೆಗೆ ತಾಲೂಕಿನಲ್ಲಿ ಬಿಟ್ಟು ಬಿಡದೇ ಮಳೆ ಸುರಿದಿದೆ. ಇದರಿಂದ ಬಹಳಷ್ಟು ಫಸಲು ಹೊಲದಲ್ಲೇ ಕೊಳೆತಿದೆ. ಅಲ್ಪಸ್ವಲ್ಪ ಉಳಿದ ಬೆಳೆಯನ್ನು ಕಟಾವು ಮಾಡಿ ಮಾರುಕಟ್ಟೆಗೆ ತಂದರೆ ಯೋಗ್ಯ ಬೆಲೆ ರೈತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.ಬಿತ್ತನೆ ವಿವರ: ತಾಲೂಕಿನಲ್ಲಿ ಈ ವರ್ಷ ಒಟ್ಟು 1130 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿಯನ್ನು ರೈತರು ಬಿತ್ತನೆ ಮಾಡಿದ್ದರು. ಆದರೆ ಅತಿವೃಷ್ಟಿಯಿಂದ 755 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿ ಬಸವರಾಜ ಬ್ಯಾಗಿ ತಿಳಿಸಿದ್ದಾರೆ.
ಯೋಗ್ಯ ಬೆಲೆ ಸಿಗುತ್ತಿಲ್ಲ: ಈ ವರ್ಷ ಈರುಳ್ಳಿಗೆ ಉತ್ತಮ ಬೆಲೆ ಸಿಗಬಹುದೆಂದು ಬೆಳೆದಿದ್ದೇವೆ. ಅತಿವೃಷ್ಟಿಯಿಂದ ಅಪಾರ ಪ್ರಮಾಣದಲ್ಲಿ ಬೆಳೆಹಾನಿಯಾಗಿದೆ. ಅಲ್ಪಸ್ವಲ್ಪ ಬೆಳೆಯನ್ನು ಮಾರುಕಟ್ಟೆಗೆ ತಂದರೆ ಯೋಗ್ಯ ಬೆಲೆ ಸಿಗುತ್ತಿಲ್ಲ. ಹೀಗಾಗಿ ಹೊಲದಲ್ಲಿ ಬೆಳೆಯನ್ನು ಗೊಬ್ಬರ ಮಾಡುತ್ತೇವೆ ಎಂದು ರೈತ ಜ್ಞಾನದೇವ ಮನೇನಕೊಪ್ಪ ತಿಳಿಸಿದರು.₹50 ಸಾವಿರ ಪರಿಹಾರ ನೀಡಿ: ಅತಿವೃಷ್ಟಿಯಿಂದ ರೈತರು ಅಪಾರ ಪ್ರಮಾಣದಲ್ಲಿ ಈರುಳ್ಳಿ ಬೆಳೆಯನ್ನು ಹಾನಿ ಮಾಡಿಕೊಂಡಿದ್ದಾರೆ. ಆದ್ದರಿಂದ ಸರ್ಕಾರ ಬೆಳೆಹಾನಿಯಾದ ರೈತರ ಪ್ರತಿ 1 ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಅಲ್ಪಸ್ವಲ್ಪ ಉಳಿದ ಬೆಳೆಯನ್ನು ಸರ್ಕಾರ ಪ್ರತಿ 1 ಕ್ವಿಂಟಲ್‌ಗೆ ₹5000 ಬೆಂಬಲ ಬೆಲೆಯಲ್ಲಿ ಖರೀದಿ ಮಾಡಬೇಕು ಎಂದು ಕರ್ನಾಟಕ ರೈತ ಸೇನೆ ಅಧ್ಯಕ್ಷ ಶಂಕ್ರಣ್ಣ ಅಂಬಲಿ ಆಗ್ರಹಿಸಿದರು.