ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಆತ್ಮಹತ್ಯೆ ಮಾಡಿಕೊಂಡಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಕುಟುಂಬಕ್ಕೆ ಸರ್ಕಾರ ಘೋಷಿಸಿದ ಪರಿಹಾರ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ರಾಷ್ಟ್ರಭಕ್ತರ ಬಳಗದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಯಿತು.ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದನದಲ್ಲಿ ವಾಲ್ಮೀಕಿ ನಿಗಮದ ಹಗರಣವನ್ನು ಒಪ್ಪಿಕೊಂಡು ಮೃತನ ಕುಟುಂಬಕ್ಕೆ ₹25 ಲಕ್ಷ ಪರಿಹಾರ ಘೋಷಿಸಿ 3 ತಿಂಗಳಾಗಿದೆ. ಆದರೂ ಅವರ ಕುಟುಂಬಕ್ಕೆ ನೆರವು ನೀಡಿಲ್ಲ. ಮೃತ ಚಂದ್ರಶೇಖರ್ ಪತ್ನಿ ಕವಿತಾ ಆರ್ಥಿಕ ದುಸ್ಥಿತಿಯಿಂದ ಈಗಾಗಲೇ ತಾಯಿ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸ ಮತ್ತು ಕುಟುಂಬದ ನಿರ್ವಹಣೆ ಮಾಡಲಾಗದೇ ಸ್ಥಿತಿಯಲ್ಲಿದ್ದಾರೆ. ಕೂಡಲೇ ಘೋಷಿತ ಅನುದಾನ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾತನಾಡಿ, ಸೆ.10ರೊಳಗೆ ಸರ್ಕಾರ ಪರಿಹಾರ ಮಾಡದಿದ್ದರೆ ರಾಷ್ಟ್ರಭಕ್ತರ ಬಳಗ ಸಾರ್ವಜನಿಕರ ನೆರವಿನೊಂದಿಗೆ ತಕ್ಷಣಕ್ಕೆ ₹5 ಲಕ್ಷ ನೀಡಲಿದೆ. ಸೆ.20ರೊಳಗೆ ಪರಿಹಾರ ನೀಡದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಸಹಸ್ರಾರು ರಾಷ್ಟ್ರಭಕ್ತರೊಂದಿಗೆ ಮುತ್ತಿಗೆ ಹಾಕಿ ಜೈಲು ಬರೋ ಚಳುವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.ಸರ್ಕಾರ ಪರಿಹಾರ ನೀಡುವವರೆಗೆ ಹೋರಾಟ ನಿಲ್ಲಿಸುವುದಿಲ್ಲ. ಸರ್ಕಾರ ಅವರ ನೋವಿಗೆ ಸ್ಪಂಧಿಸಿಲ್ಲ. ಪರಿಶಿಷ್ಟ ಜಾತಿ, ಪಂಗಡಗಳ ಹಣವನ್ನು ಬೇರೆ ಉದ್ದೇಶಕ್ಕೆ ಸರ್ಕಾರ ಬಳಸಿಕೊಂಡಿದೆ. ನಮ್ಮ ಹೋರಾಟ ರಾಜಕೀಯಕ್ಕಾಗಿ ಅಲ್ಲ, ಕವಿತಾ ಕುಟುಂಬದೊಂದಿಗೆ ನಾವೆಲ್ಲ ಇದ್ದೇವೆ. ಸರ್ಕಾರಕ್ಕೆ ಕಿಂಚಿತ್ತು ಕಾಳಜಿ ಇದ್ದರೆ ಪರಿಶಿಷ್ಟ ವರ್ಗದ ಹೆಣ್ಣು ಮಗಳಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಮೋಹನ್‍ರಾವ್ ಜಾಧವ್ ಮಾತನಾಡಿ, ದನಗಳ್ಳ ಮೃತಪಟ್ಟಾಗ ತಕ್ಷಣ ₹25 ಲಕ್ಷ ಬಿಡುಗಡೆ ಮಾಡಲು ಸರ್ಕಾರದ ಬಳಿ ಹಣವಿದೆ. ಮೈಸೂರು ಮತ್ತು ಬೆಂಗಳೂರಿನಲ್ಲಿ ಸಮಾವೇಶ ಮಾಡಲು ಸರ್ಕಾರದ ಬಳಿ ಹಣವಿದೆ. ಆದರೆ, ಪ್ರಾಮಾಣಿಕ ಅಧಿಕಾರಿ ಹಗರಣವನ್ನು ಬಯಲಿಗೆಳೆದು ಆತ್ಮಹತ್ಯೆ ಮಾಡಿಕೊಂಡಾಗ ಆತನ ಕುಟುಂಬಕ್ಕೆ ಘೋಷಿತ ಪರಿಹಾರ ನೀಡಲು ಸರ್ಕಾರದ ಬಳಿ ಹಣವಿಲ್ಲವೇ ಎಂದು ಪ್ರಶ್ನಿಸಿದರು.ಈ ವೇಳೆ ಪ್ರಮುಖರಾದ ಕೆ.ಈ. ಕಾಂತೇಶ್, ಶಂಕರ್, ಶಂಕರ್‌ಗನ್ನಿ, ದೊರೆ ಚಿನ್ನಪ್ಪ, ಶಶಿಕಲಾ , ಈ. ವಿಶ್ವಾಸ್, ಸುವರ್ಣಶಂಕರ್, ಸುರೇಖಾ, ಬಾಲು, ಅ.ಮಾ.ಪ್ರಕಾಶ್, ಮೋಹನ್ ಇನ್ನಿತರರಿದ್ದರು.