ರೈತರ ಸಂಪೂರ್ಣ ಸಾಲಮನ್ನಾಗೆ ಆಗ್ರಹ

KannadaprabhaNewsNetwork |  
Published : Sep 13, 2026, 03:30 AM IST
ಬೆಳಗಾವಿ  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿರಾಜ್ಯದ ಬರಪೀಡಿತ ತಾಲೂಕುಗಳನ್ನು ಸಂಪೂರ್ಣ ಬರಪೀಡಿತ ಎಂದು ಘೋಷಿಸಿ, ಪ್ರತಿ ರೈತರ ಖಾತೆಗೆ ಕನಿಷ್ಠ ₹50 ಸಾವಿರ ಬರ ಪರಿಹಾರ ಜಮೆ ಮಾಡಬೇಕು. ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಸರ್ಕಾರಕ್ಕೆ ಆಗ್ರಹಿಸಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜ್ಯದ ಬರಪೀಡಿತ ತಾಲೂಕುಗಳನ್ನು ಸಂಪೂರ್ಣ ಬರಪೀಡಿತ ಎಂದು ಘೋಷಿಸಿ, ಪ್ರತಿ ರೈತರ ಖಾತೆಗೆ ಕನಿಷ್ಠ ₹50 ಸಾವಿರ ಬರ ಪರಿಹಾರ ಜಮೆ ಮಾಡಬೇಕು. ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಸರ್ಕಾರಕ್ಕೆ ಆಗ್ರಹಿಸಿದೆ. ನಗರದ ಚೆನ್ನಮ್ಮ ವೃತ್ತದಲ್ಲಿ ಶುಕ್ರವಾರ ರೈತರು ನಡು ರಸ್ತೆಯಲ್ಲೇ ಧರಣಿ ನಡೆಸಿ, ಒಣಗಿದ ಮೆಕ್ಕೆಜೋಳದ ಬೆಳೆಯನ್ನು ಪ್ರದರ್ಶಿಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ, ಕಳೆದ ಐದು ವರ್ಷಗಳಿಂದ ಬರ ಹಾಗೂ ಅತಿವೃಷ್ಟಿಯಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ವಿದ್ಯುತ್ ಇಲಾಖೆಯ ಲೋಡ್ ಶೆಡ್ಡಿಂಗ್‌ನಿಂದ ರೈತರಿಗೆ ತೀವ್ರ ತೊಂದರೆಯಾಗುತ್ತಿದ್ದು, ದಿನಕ್ಕೆ 12 ಗಂಟೆ ಗುಣಮಟ್ಟದ ತ್ರಿಫೇಸ್ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.

2025-26ನೇ ಸಾಲಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಟನ್‌ಗೆ ಹೆಚ್ಚುವರಿಯಾಗಿ ₹300 ನೀಡಬೇಕು. ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ ₹5,500 ಬಿಲ್ ನೀಡಬೇಕು. ಜಿಲ್ಲೆಯ ಎಲ್ಲ ನೀರಾವರಿ ಯೋಜನೆಗಳನ್ನು ತಕ್ಷಣ ಆರಂಭಿಸಿ ಕಟ್ಟಕಡೆಯ ಹಳ್ಳಿಗಳಿಗೂ ನೀರು ಪೂರೈಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ, ಮುಖ್ಯಮಂತ್ರಿ ಅವರು ಹೆಲಿಕಾಪ್ಟರ್‌ನಲ್ಲಿ ಬರ ಅಧ್ಯಯನ ಮಾಡುವುದನ್ನು ಬಿಟ್ಟು, ರೈತರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸಬೇಕು ಎಂದು ಒತ್ತಾಯಿಸಿದರು. ಕಳೆದ ನಾಲ್ಕು ತಿಂಗಳಿಂದ ಸಮರ್ಪಕವಾಗಿ ಮಳೆಯಾಗಿಲ್ಲ ಎಂಬುದು ಸರ್ಕಾರ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಿಳಿದಿದ್ದರೂ, ಬೆಳಗಾವಿ ಜಿಲ್ಲೆಯ ಒಂದೇ ಒಂದು ತಾಲೂಕನ್ನೂ ಬರಪೀಡಿತ ಎಂದು ಘೋಷಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿ ಎಕರೆಗೆ ₹50 ಸಾವಿರ ಬರ ಪರಿಹಾರ ನೀಡಬೇಕು. ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ರಾತ್ರಿ ವೇಳೆ ಹೊಲ-ಗದ್ದೆಗಳಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು. ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ರೈತರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದ್ದರೂ ಪರಿಹಾರ ಕ್ರಮ ಕೈಗೊಂಡಿಲ್ಲ. ಕೂಡಲೇ ರೈತರಿಗೆ ಪರಿಹಾರ ಬಿಡುಗಡೆ ಮಾಡಿ, ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿಶನ್ ನಂದಿ, ರಾಷ್ಟ್ರೀಯ ನಾಯಕ ಪ್ರಕಾಶ, ಪ್ರೇಮಾ ಚೌಗಲಾ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೆಹಲಿಯಲ್ಲಿ ಕೇಂದ್ರ ನಾಯಕರನ್ನು ಭೇಟಿಯಾದ ಬೆನಕೆ
ಬರ ಪರಿಸ್ಥಿತಿ ವೀಕ್ಷಿಸಿದ ಡಿಸಿ, ಸಿಇಒ