ಕೆ-ಶಿಪ್ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ

KannadaprabhaNewsNetwork |  
Published : Sep 29, 2026, 01:45 AM IST
ಮಾಗಡಿ ಪಟ್ಟಣದ ಕಲ್ಯಾಗೇಟ್ ನಲ್ಲಿ ರಸ್ತೆ ಕಾಮಗಾರಿ ವಿಳಂಬ ವಿರುದ್ಧ ಕೆಂಪೇಗೌಡ ರೈತ ಸಂಘದ ವತಿಯಿಂದ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. | Kannada Prabha

ಸಾರಾಂಶ

ಮಾಗಡಿ: ಪಟ್ಟಣದಲ್ಲಿ ಆಮೆಗತಿಯಲ್ಲಿ ಸಾಗುತ್ತಿರುವ ಹಾಗೂ ಸ್ಥಗಿತಗೊಂಡಿರುವ ಕೆ-ಶಿಪ್ ರಸ್ತೆ ಕಾಮಗಾರಿಯಿಂದ ಅಪಘಾತಗಳು ಹೆಚ್ಚುತ್ತಿದ್ದು, ಕಾಮಗಾರಿಯನ್ನು ಕೂಡಲೆ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕೆಂಪೇಗೌಡ ರೈತ ಸಂಘದ ಪದಾಧಿಕಾರಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು

ಮಾಗಡಿ: ಪಟ್ಟಣದಲ್ಲಿ ಆಮೆಗತಿಯಲ್ಲಿ ಸಾಗುತ್ತಿರುವ ಹಾಗೂ ಸ್ಥಗಿತಗೊಂಡಿರುವ ಕೆ-ಶಿಪ್ ರಸ್ತೆ ಕಾಮಗಾರಿಯಿಂದ ಅಪಘಾತಗಳು ಹೆಚ್ಚುತ್ತಿದ್ದು, ಕಾಮಗಾರಿಯನ್ನು ಕೂಡಲೆ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕೆಂಪೇಗೌಡ ರೈತ ಸಂಘದ ಪದಾಧಿಕಾರಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಕೆಂಪೇಗೌಡ ರೈತ ಸಂಘದ ಪದಾಧಿಕಾರಿಗಳು ಲೋಕೋಪಯೋಗಿ ಇಲಾಖೆ ಹಾಗೂ ಕೆ-ಶಿಪ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ, ಕಳೆದ ಹಲವು ವರ್ಷಗಳಿಂದಲೂ ಪಟ್ಟಣದ ರಸ್ತೆ ಕಾಮಗಾರಿ ಪೂರ್ಣಗೊಳ್ಳದೆ ಉಳಿದಿದೆ. ಎಲ್ಲೆಂದರಲ್ಲಿ ರಸ್ತೆ ಅಗೆದು ಜಲ್ಲಿ ಸುರಿದು ಅರ್ಧಕ್ಕೆ ಬಿಡಲಾಗಿದೆ. ರಸ್ತೆಯುದ್ದಕ್ಕೂ ಬಿದ್ದಿರುವ ಆಳವಾದ ಹಳ್ಳ-ಗುಂಡಿಗಳಿಂದಾಗಿ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು ಕೈ-ಕಾಲು ಮುರಿದುಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಇದೇ ಮಾರ್ಗದಲ್ಲಿ 4 ಅಪಘಾತಗಳು ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದರು. ಮುಂಜಾನೆ 3 ರಿಂದ 4 ಗಂಟೆಗೆ ರೈತರು ಮಾರುಕಟ್ಟೆಗೆ ತರಕಾರಿ ಮತ್ತು ಇನ್ನಿತರೆ ಕೃಷಿ ಉತ್ಪನ್ನಗಳನ್ನು ಸಾಗಿಸುವ ವೇಳೆ ನಿತ್ಯವೂ ಜೀವಭಯದಲ್ಲೇ ಸಂಚರಿಸುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಪಟ್ಟಣ ವ್ಯಾಪ್ತಿಯಲ್ಲಿ ಜನಸಾಮಾನ್ಯರಿಗೆ ಮಾರಕವಾಗಿರುವ ಅವೈಜ್ಞಾನಿಕ ರಸ್ತೆ ಕಾಮಗಾರಿಯನ್ನು ಸರಿಪಡಿಸಿ, ತಕ್ಷಣವೇ ರಸ್ತೆ ನಿರ್ಮಾಣ ಕಾರ್ಯವನ್ನು ಮುಕ್ತಾಯಗೊಳಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರ ಮುಂದಿನ 15 ದಿನಗಳ ಒಳಗಾಗಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಕರ್ನಾಟಕ ರಾಜ್ಯ ಕೆಂಪೇಗೌಡ ರೈತ ಸಂಘದ ವತಿಯಿಂದ ಉಚ್ಚ ನ್ಯಾಯಾಲಯದ (ಹೈಕೋರ್ಟ್) ಮೆಟ್ಟಿಲೇರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಸಂಘಟನೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಡಿ ಶಿವಕುಮಾರ್, ತಾಲೂಕು ಅಧ್ಯಕ್ಷ ಶಿವಲಿಂಗಯ್ಯ, ರಾಜ್ಯ ಉಪಾಧ್ಯಕ್ಷ ಮಹಾಂತೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಶಂಕರ್, ತಾಲೂಕು ಗೌರವಾಧ್ಯಕ್ಷ ಶಿವರುದ್ರಪ್ಪ, ಉಪಾಧ್ಯಕ್ಷ ಕರಿಯಪ್ಪ, ಕಾರ್ಯದರ್ಶಿ ಶಿವಲಿಂಗಯ್ಯ, ಖಜಾಂಚಿ ಅಬ್ದುಲ್ ಕಲೀಲ್, ಕಾರ್ಯದರ್ಶಿ ಪಾಂಡುರಂಗಯ್ಯ, ಕಾನೂನು ಸಲಹೆಗಾರರಾದ ಸಹಾನ ಪಂಡಿತ್ ಇತರರು ಭಾಗವಹಿಸಿದ್ದರು.

(ಫೋಟೊ ಕ್ಯಾಫ್ಞನ್‌)ಮಾಗಡಿ ಪಟ್ಟಣದ ಕಲ್ಯಾಗೇಟ್‌ನಲ್ಲಿ ರಸ್ತೆ ಕಾಮಗಾರಿ ವಿಳಂಬದ ವಿರುದ್ಧ ಕೆಂಪೇಗೌಡ ರೈತ ಸಂಘದ ಪದಾಧಿಕಾರಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಾವರಿ ಯೋಜನೆ ಜಾರಿಗೆ ಸರ್ಕಾರ ಬದ್ಧ
ಕೆರೆಗಳ ಸಂರಕ್ಷಣೆ, ಅಭಿವೃದ್ಧಿಗೆ ಅಗತ್ಯ ಕ್ರಮ