ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಬನಘಟ್ಟ ಗೇಟ್ ಬಳಿ ಶ್ರೀರಂಗಪಟ್ಟಣ-ಜೇವರ್ಗಿ ಮುಖ್ಯ ಹೆದ್ದಾರಿ ಬಳಿ ಆಗಮಿಸಿ ರೈತರು, ಸಾರ್ವಜನಿಕರು ಮುಖ್ಯ ಹೆದ್ದಾರಿಯನ್ನು ತಡೆದು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಆಕ್ರೋಶ ಹೊರಹಾಕಿದರು.
ಹೆದ್ದಾರಿಗೆ ನಿರ್ಮಿಸಲಾಗಿರುವ ಸೇತುವೆ ಕಾಮಗಾರಿಯೂ ಮಂದಗತಿಯಲ್ಲಿ ಸಾಗುತ್ತಿವೆ. ಇದರಿಂದಾಗಿ ರಸ್ತೆ ಕಾಮಗಾರಿಯೂ ಸಹ ವಿಳಂಬವಾಗುತ್ತಿದೆ. ವಾಹನ ಸವಾರರಿಗೆ ಅನಾನೂಕೂಲವಾಗುತ್ತಿದೆ. ಈ ಸ್ಥಳದಲ್ಲಿ ಹೆಚ್ಚು ರಸ್ತೆ ಅಪಘಾತಗಳು ನಡೆದು ಸಾವು ನೋವು ಸಂಭವಿಸುತ್ತಿವೆ ಎಂದು ಕಿಡಿಕಾರಿದರು.ಸೇತುವೆ ಕಾಮಗಾರಿ ಆರಂಭಗೊಂಡ ಐದಾರು ವರ್ಷಗಳೇ ಕಳೆದರೂ ಈವರೆಗೂ ಕಾಮಗಾರಿಯನ್ನು ಗುತ್ತಿಗೆದಾರರಿಗೆ ಒತ್ತಡ ತಂದು ಪೂರ್ಣಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಸೇತುವೆ ಬಳಿ ಇರುವ ಹಳೆಯ ರಸ್ತೆ ತಿರುವು ಇರುವುದರಿಂದ ವೇಗವಾಗಿ ಬರುವ ವಾಹನಗಳಿಗೆ ರಸ್ತೆ ಸರಿಯಾಗಿ ಗೋಚರಿಸದೆ ಅವಘಡಗಳು ಸಂಭವಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸ್ಥಳದಲ್ಲಿ ಕಳೆದ ವರ್ಷವಷ್ಟೇ ಕಾರು ವಿಸಿ ನಾಲೆಗೆ ಉರುಳಿ ನಾಲ್ಕೈದು ಮಂದಿ ಮೃತಪಟ್ಟಿದ್ದರು. ಜತೆಗೆ ಸಾಕಷ್ಟು ಸಾವು ನೋವುಗಳು ಸಂಭವಿಸಿವೆ. ಆ ಸಂದರ್ಭದಲ್ಲಿ ಆಗಮಿಸಿದ ಅಧಿಕಾರಿಗಳು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು. ಆದರೆ, ಇಲ್ಲಿಯವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ದೂರಿದರು.ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೇತುವ ಕಾಮಗಾರಿ ಪೂರ್ಣಗೊಂಡಿದ್ದರೆ ಉದ್ಘಾಟಿಸಿ, ಇಲ್ಲವಾದರೆ ಬೇಗ ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಪಟ್ಟಹಿಡಿದರು.
ಸ್ಥಳಕ್ಕೆ ಗುತ್ತಿಗೆದಾರರ ಕಡೆಯ ಅಧಿಕಾರಿ ಆಗಮಿಸಿ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಸಂಜೆ ಬಳಿಕ ಸ್ಥಳಕ್ಕೆ ಎಂಜಿನಿಯರ್ ಹಾಗೂ ಮೇಲಾಧಿಕಾರಿಗಳನ್ನು ಸ್ಥಳಕ್ಕೆ ಕರೆದು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ಎಚ್.ಎನ್.ಮಂಜುನಾಥ್, ದೊರೆಸ್ವಾಮಿ, ಬಾಲಗಂಗಾಧರ್, ಚನ್ನಕೇಶವ, ಶ್ರೀನಿವಾಸ್, ಭಾಸ್ಕರ್, ಅನಿಲ್, ಪುಟ್ಟು, ಮಂಜು, ಪರಮೇಶ್, ಮನು ಸೇರಿದಂತೆ ಹಲವರು ಇದ್ದರು.