ಮಾದಾಪುರದಲ್ಲಿ ಕಂದಾಯ ಇಲಾಖೆ ಕಚೇರಿ ನಿರ್ಮಿಸಲು ಆಗ್ರಹ

KannadaprabhaNewsNetwork | Published : Aug 26, 2024 1:37 AM

ಸಾರಾಂಶ

ಮಾದಾಪುರವನ್ನು ಹೋಬಳಿ ಎಂದು ಘೋಷಿಸಿಕಂದಾಯ ಇಲಾಖಾ ಕಚೇರಿ ನಿರ್ಮಿಸಬೇಕು ಎಂದು ಆಗ್ರಹಿಸಲಾಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ತಾಲೂಕಿನ ಸೋಮವಾರಪೇಟೆ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಮಾದಾಪುರವನ್ನು ಹೋಬಳಿ ಎಂದು ಘೋಷಿಸಿ ಕಂದಾಯ ಇಲಾಖೆ ಕಚೇರಿ ನಿರ್ಮಿಸಬೇಕು ಎಂದು ಶನಿವಾರ ಮಾದಾಪುರದ ವಿ.ಎಸ್.ಎಸ್.ಎನ್ ಸಭಾಂಗಣದಲ್ಲಿ ಆಗ್ರಹಿಸಲಾಯಿತು.

ಮೂವತೋಕ್ಲು ಗ್ರಾಮದ ಗಣೇಶ್ ಮಾತನಾಡಿ, ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಗೆ ಮಾದಾಪುರ, ಗರ್ವಾಲೆ, ಹರದೂರು ಗ್ರಾಮ ಪಂಚಾಯಿತಿಯನ್ನು ಸೇರಿಸಿದ್ದು ಕಂದಾಯ ಇಲಾಖೆ ನಾಡ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಈ ಮೂರು ಗ್ರಾಮ ಪಂಚಾಯಿತಿಯನ್ನು ಸೇರಿಸಿ ಮಾದಾಪುರ ಹೋಬಳಿಯನ್ನಾಗಿ ಮಾಡಿ ಸ್ಥಳೀಯ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ಮಾದಾಪುರ, ಗರ್ವಾಲೆ ಭಾಗದ ವ್ಯಾಪ್ತಿಯ ಬಹುತೇಕ ಗ್ರಾಮಗಳು ಬೆಟ್ಟ ಗುಡ್ಡಗಳಿಂದ ಕೂಡಿದ್ದು ಈ ಭಾಗದಲ್ಲಿ ಸೋಮವಾರಪೇಟೆಯಿಂದ ಕಂದಾಯ ಇಲಾಖೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಕಾರ್ಯ ತಡವಾಗುತ್ತಿದೆ ಎಂದರು.

ಕಂದಾಯ ನಿರೀಕ್ಷರು ಹಾಗೂ ಗ್ರಾಮ ಆಡಳಿತ ಅಧಿಕಾರಿ ಮೊದಲು ಈ ಭಾಗಕ್ಕೆ ಬರುತ್ತಿದ್ದರು. ಇತ್ತೀಚಿಗೆ ಬರುತ್ತಿಲ್ಲ. ಯಾವುದೇ ಕೆಲಸಗಳು ಆಗಬೇಕು ಅಂದರೆ ತಹಸೀಲ್ದಾರ್ ಕಚೇರಿಗೆ ಬರಲು ತಿಳಿಸುತ್ತಾರೆ. ಕೆಲವರಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಯಾರೆಂದು ಇವರೆಗೂ ತಿಳಿಯದ ಪರಿಸ್ಥಿತಿಗೆ ಇಲ್ಲಿದೆ ಎಂದು ಸ್ಥಳೀಯರಾದ ನಾಪಂಡ ಉಮೇಶ್ ಉತ್ತಪ್ಪ ಹೇಳಿದರು.

ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅರುಣ್ ಕಾಳಪ್ಪ ಮಾತನಾಡಿ, ಮಾದಾಪುರ ಹೋಬಳಿ ಮಾಡಿದಲ್ಲಿ ಸ್ಥಳೀಯರಿಗೆ ಸೋಮವಾರಪೇಟೆಗೆ ತೆರಳುವ ಅವಶ್ಯಕತೆ ಇರುವುದಿಲ್ಲ. ಮಾದಾಪುರ, ಹರದೂರು, ಗರ್ವಾಲೆ ಈ ಮೂರು ಪಂಚಾಯಿತಿ ಈ ಹೋಬಳಿ ವ್ಯಾಪ್ತಿಗೆ ಸೇರಲಿದೆ. ಪೊಲೀಸ್ ಉಪಠಾಣೆ, ಆಸ್ಪತ್ರೆ, ಪೆಟ್ರೋಲ್ ಬಂಕ್ ಎಲ್ಲವು ಇದೆ, ವಾರದಲ್ಲಿ ಒಂದು ದಿನ ಸಂತೆಯೂ ನಡೆಯುತ್ತಿದೆ. ಈ ಭಾಗದಲ್ಲಿ ಬಸ್ ಗಳ ಮಾರ್ಗವು ಚೆನ್ನಾಗಿದ್ದು ಸೋಮವಾರಪೇಟೆ- ಮಡಿಕೇರಿ ಇವೆರಡು ತಾಲೂಕುಗಳಿಗೆ ಸಂಪರ್ಕಿಸುವ ಮುಖ್ಯ ರಸ್ತೆಯ ಮಧ್ಯದಲ್ಲಿ ಮಾದಾಪುರವಿದೆ. ಎಲ್ಲ ರೀತಿಯ ಮೂಲಭೂತ ವ್ಯವಸ್ಥೆಯು ಇಲ್ಲಿದೆ. ಮುಂದೆ ನಮ್ಮ ಸಮಿತಿಯಿಂದ ಸಂಬಂಧ ಪಟ್ಟ ಅಧಿಕಾರಿಗಳಿಗೆ ಇದರ ಬಗ್ಗೆ ಮನವರಿಕೆ ಮಾಡಿ ತಿಳಿಸಲಾಗುವುದು ಎಂದರು.

ಈ ಸಂದರ್ಭ ಮಾದಾಪುರ ಗ್ರಾ.ಪಂ. ಅಧ್ಯಕ್ಷ ಮನು ಬಿದ್ದಪ್ಪ, ಹರದೂರು ಗ್ರಾ. ಪಂ. ಅಧ್ಯಕ್ಷೆ ಉಮಾ, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಕೆ.ಏನ್. ದೀಪಕ್, ನಿವೃತ್ತ ತಹಸೀಲ್ದಾರ್ ಜಯರಾಮ್, ಗರ್ವಾಲೆ ಗ್ರಾ.ಪಂ. ಮಾಜಿ ಅಧ್ಯಕ್ಷ ಸುಭಾಷ್ , ಇಗ್ಗೋಡ್ಲು ಗ್ರಾಮದ ದೇವಯ್ಯ ಸೇರಿದಂತೆ ಹಲವರಿದ್ದರು.

Share this article