ಮುಟ್ಟಳ್ಳಿ ಗ್ರಾಮ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ವಿಸ್ತ್ರತ ಚರ್ಚೆ
ಇಲ್ಲಿಯ ಮುಟ್ಟಳ್ಳಿ ಗ್ರಾಪಂ ವ್ಯಾಪ್ತಿಯ 2025–26ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ತಲಾನ ಕಟ್ಟೆವೀರ ದೇವಾಲಯದ ಸಭಾಭವನದಲ್ಲಿ ಗ್ರಾಪಂ ಅಧ್ಯಕ್ಷೆ ರಜನಿ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸಾರ್ವಜನಿಕರು ಸ್ಥಳೀಯ ಸಮಸ್ಯೆಗಳ ಕುರಿತು ಅಹವಾಲು ಸಲ್ಲಿಸಿದರು. ಮುಟ್ಟಳ್ಳಿ ಮತ್ತು ಕಸಲಗದ್ದೆ ಪ್ರದೇಶಗಳಲ್ಲಿ ಜಂಗಲ್ ಕಟಿಂಗ್ ಕಾರ್ಯ ಸರಿಯಾಗಿ ನಡೆಯದಿರುವುದರಿಂದ ಆಗಾಗ ವಿದ್ಯುತ್ ಸಂಪರ್ಕಕ್ಕೆ ತೊಂದರೆ ಉಂಟಾಗಿದೆ.ಹೊಸ ಮನೆಗಳಿಗೆ ದೃಢೀಕರಣ ನೀಡಿದರೂ,ಕೆಲವು ಮನೆಗಳಿಗೆ ಇನ್ನೂ ಎನ್‌ಒಸಿ ನೀಡದಿರುವುದು ಸ್ಥಳೀಯರಿಗೆ ತೊಂದರೆ ಉಂಟುಮಾಡಿದೆ. ಈ ಸಮಸ್ಯೆಯನ್ನು ತಕ್ಷಣ ಪರಿಹರಿಸುವಂತೆ ಗ್ರಾಮಸ್ಥರು ಸಂಬಂಧಿತ ಅಧಿಕಾರಿಗಳಿಗೆ ಆಗ್ರಹಿಸಿದರು. ಬೀದಿ ದೀಪಗಳ ವಿದ್ಯುತ್ ಬಿಲ್ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಪಂಚಾಯಿತಿಗೆ ಆರ್ಥಿಕ ಹೊರೆ ಉಂಟಾಗಿದೆ. ಈ ಭಾರವನ್ನು ಹೆಸ್ಕಾಂ ಇಲಾಖೆ ಹೊತ್ತುಕೊಳ್ಳಬೇಕೆಂದು ಸದಸ್ಯ ದೇವಯ್ಯ ನಾಯ್ಕ ಅಭಿಪ್ರಾಯಪಟ್ಟರು.
ಅರಣ್ಯಾಧಿಕಾರಿ ಮಾತನಾಡಿ, ಸಾಗರ ರಸ್ತೆಯ ಅಕ್ಕಪಕ್ಕದಲ್ಲಿ ತ್ಯಾಜ್ಯ ಎಸೆಯುತ್ತಿರುವುದರಿಂದ ಹಂದಿಗಳು ರಸ್ತೆಗಳಿಗೆ ಆಕರ್ಷಿತರಾಗುತ್ತಿವೆ. ಇದರ ಪರಿಣಾಮವಾಗಿ ಅಪಘಾತಗಳು ಸಂಭವಿಸುತ್ತಿವೆ ಎಂದು ಹೇಳಿದರು. ಯಾವುದೇ ರೀತಿಯ ಕಸವನ್ನು ರಸ್ತೆಯ ಬದಿಯಲ್ಲಿ ಎಸೆಯದಂತೆ ಜನರಿಗೆ ಎಚ್ಚರಿಕೆ ನೀಡಿದರು.
ಸರ್ಕಾರ ವತಿಯಿಂದ ನೀಡಲಾಗುವ ಗೃಹಲಕ್ಷ್ಮಿ ಯೋಜನೆಯ ಹಣ ಕೆಲ ಮಹಿಳೆಯರಿಗೆ ಇನ್ನೂ ಬಂದಿಲ್ಲ ಎಂದು ಗ್ರಾಮಸಭೆಯಲ್ಲಿ ಜನರು ಆಕ್ಷೇಪ ವ್ಯಕ್ತಪಡಿಸಿದರು. ಪುರಸಭೆಯ ಘನತ್ಯಾಜ್ಯ ಘಟಕದಿಂದ ಕಪಕ್ಕ ಭಾಗದ ಜನರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಘಟಕದಿಂದ ಹೊರಬರುತ್ತಿರುವ ಮಲೀನ ನೀರು ಬಾವಿಗಳಿಗೆ ನುಗ್ಗಿ,ನೀರು ನೈರ್ಮಲ್ಯ ಕಳೆದುಕೊಳ್ಳುತ್ತಿದ್ದು, ರೋಗಗಳು ಹರಡುವ ಭೀತಿ ಉಂಟಾಗಿದೆ. ಈ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸಬೇಕು, ಕಸಲಗದ್ದೆ ಹಾಗೂ ತಲಾನ ಭಾಗಗಳಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ತೀವ್ರವಾಗಿದ್ದು, ಜನರು ಸಂಪರ್ಕದ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯನ್ನು ತಕ್ಷಣ ಸರಿಪಡಿಸಬೇಕೆಂದು ಆಗ್ರಹ ವ್ಯಕ್ತವಾಯಿತು. ಸಾಗರ ರಸ್ತೆಯಲ್ಲಿ ಮದ್ಯಪ್ರಿಯರ ಮತ್ತು ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು. ಪ್ರಭಾರಿ ಪಿಡಿಒ ಚಂದ್ರಶೇಖರ್, ಪ್ರಭಾರಿ ಕಾರ್ಯದರ್ಶಿ ಮಂಜುನಾಥ ಶೆಟ್ಟಿ ಮನೆ, ನೋಡಲ್ ಅಧಿಕಾರಿ ಶಿವಕುಮಾರ್, ಉಪಾಧ್ಯಕ್ಷೆ ಲಕ್ಷ್ಮೀ ಗೊಂಡ ಸೇರಿ ಸದಸ್ಯರು ಉಪಸ್ಥಿತರಿದ್ದರು.