ಕುಷ್ಟಗಿ: ತಾಲೂಕಿನಲ್ಲಿ ಸುರಿದ ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಕೂಡಲೇ ಬೆಳೆನಷ್ಟ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ (ಟಿಎ ನಾರಾಯಣಗೌಡ ಬಣ) ಕಾರ್ಯಕರ್ತರು ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತಾಲೂಕಾಧ್ಯಕ್ಷ ಪ್ರಕಾಶ ಮನ್ನೇರಾಳ ಮಾತನಾಡಿ, ಕುಷ್ಟಗಿ ತಾಲೂಕಿನಲ್ಲಿ ಕಳೆದ ಒಂದು ತಿಂಗಳಿಂದ ಬಿಟ್ಟುಬಿಡದೆ ಮಳೆ ಸುರಿಯುತ್ತಿರುವ ಪರಿಣಾಮ ಹೆಸರು, ಸೂರ್ಯಕಾಂತಿ, ತೊಗರಿ, ಮೆಕ್ಕೆಜೋಳ, ಅಲಸಂದಿ, ಹತ್ತಿ, ಶೇಂಗಾ, ಹುರುಳಿ, ಉಳ್ಳಾಗಡ್ಡಿ, ಮೆಣಸಿನಕಾಯಿ ಗಿಡ, ಎಳ್ಳು, ಸಜ್ಜೆ ಸೇರಿದಂತೆ ಅನೇಕ ಬೆಳೆಗಳು ನೀರಿನ ತೇವಾಂಶಕ್ಕೆ ನಾಶವಾಗಿವೆ ಎಂದರು.ರೈತಾಪಿ ಜನರು ಬಿತ್ತನೆಯ ಸಮಯದಲ್ಲಿ ಸಾಕಷ್ಟು ಸಾಲಸೋಲ ಮಾಡಿ ಬಿತ್ತನೆ ಮಾಡಿದ್ದರು. ಈಗ ಬೆಳೆ ನಷ್ಟವಾಗಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ ಮಾಡಿರುವ ಖರ್ಚು ವಾಪಸ್ ಬಾರದಂತಾಗಿ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ ಎಂದರು.
ಸತತವಾಗಿ ಸುರಿದ ಮಳೆಯಿಂದ ಹೊಲಗಳಿಗೆ ನೀರು ನುಗ್ಗಿ ಮತ್ತು ಮಳೆ ನೀರು ಹೊಲಗಳಲ್ಲಿ ನಿಂತು ಬೆಳೆ ಹಾನಿಗೊಳಗಾಗಿದ್ದರೂ ಸಹಿತ ಜಿಲ್ಲಾಡಳಿತ ಇದುವರೆಗೂ ಬೆಳೆ ಹಾನಿ ಸಮೀಕ್ಷೆ ಕೈಗೊಂಡಿಲ್ಲದಿರುವುದು ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇಲ್ಲದಿರುವುದನ್ನು ಎತ್ತಿ ತೋರಿಸುತ್ತಿದೆ.ಈ ಕೂಡಲೇ ಬೆಳೆಹಾನಿ ಸಮೀಕ್ಷೆ ಕೈಗೊಂಡು ರೈತರಿಗೆ ಪರಿಹಾರ ಕೊಡಬೇಕು. ಸರ್ಕಾರದ ನಿರ್ಲಕ್ಷ್ಯ ಧೋರಣೆ ಹೀಗೇ ಮುಂದುವರಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಮನವಿ ಸ್ವೀಕರಿಸಿದ ತಹಸೀಲ್ದಾರ ಅಶೋಕ ಶಿಗ್ಗಾಂವಿ ಮಾತನಾಡಿ, ಮನವಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮಕ್ಕೆ ಮುಂದಾಗುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಂಗಮೇಶ ಗುರಿಕಾರ, ಆದಪ್ಪ ಎಸ್. ಉಳ್ಳಾಗಡ್ಡಿ, ಚನ್ನಪ್ಪ ನಾಲಗಾರ, ಚಂದ್ರಶೇಖರ್ ಹಾಗಲದಾಳ, ಬುಡ್ನೇಸಾಬ್ ಕಲಾದಗಿ, ಬಂಡೆಪ್ಪ ಬಿಜಾಪುರ, ಹನುಮಂತ ಮಾವಿನಇಟಿಗೆ, ಜಾವೀದ ಕಾಟೇವಾಡಿ, ಪರಸಪ್ಪ ಅಳ್ಳಳ್ಳಿ, ಶರಣಬಸವ ಮದಲಗಟ್ಟಿ, ಯಮನೂರಸಾಬ್ ಹುಲಿಯಾಪುರ ಸೇರಿದಂತೆ ಅನೇಕರು ಇದ್ದರು.