ಹರಪನಹಳ್ಳಿ: ನಗರದ ಪ್ರಸಿದ್ಧ ಶ್ರೀ ಕೋಟೆ ಆಂಜನೇಯ ದೇವಸ್ಥಾನದ ಅಧಿಕಾರವನ್ನು ತಹಸೀಲ್ದಾರ್ ಕೂಡಲೇ ವಹಿಸಿಕೊಂಡು, ದೇವಸ್ಥಾನದ ಅಭಿವೃದ್ಧಿಗೆ ಕ್ರಮವಹಿಸಬೇಕು ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ. ವೆಂಕಟೇಶ್ ಒತ್ತಾಯಿಸಿದರು.
ದೇವಸ್ಥಾನಕ್ಕೆ ಸಂಬಂಧಿಸಿ ಆಡಳಿತ ನಿರ್ವಹಣೆ, ಜಮಾ-ಖರ್ಚು, ವಾರ್ಷಿಕ ಖರ್ಚಿನ ಪಟ್ಟಿ, ಚರ/ಸ್ಥಿರ ಆಸ್ಥಿಗಳು ಮತ್ತು ಬ್ಯಾಂಕಿನ ವ್ಯವಹಾರದ ಲೆಕ್ಕಪತ್ರ ಪಡೆದು ಅಭಿವೃದ್ಧಿ ಮಾಡಬೇಕು. ದೇವಸ್ಥಾನಕ್ಕೆ ಸಮುದಾಯ ಭವನ, ಯಾತ್ರಾ ನಿವಾಸ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಶಾಸಕರು ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ವಾಲ್ಮೀಕಿ ಸಮಾಜದ ಮುಖಂಡ ಶಿರಹಟ್ಟಿ ದಂಡ್ಯಪ್ಪ ಮಾತನಾಡಿ, ಐತಿಹಾಸಿಕ ಆಂಜನೇಯ ಸ್ವಾಮಿ ದೇವಸ್ಥಾನ ಸರ್ವಜನಾಂಗದ ಆರಾಧ್ಯ ದೈವವಾಗಿದ್ದು, ದೇವಸ್ಥಾನ ಹೆಚ್ಚಿನ ಅಭಿವೃದ್ಧಿ ಹೊಂದಬೇಕಿದೆ ಎಂದು ಹೇಳಿದರು.ಪುರಸಭೆ ಮಾಜಿ ಉಪಾಧ್ಯಕ್ಷ ಎಚ್. ವಸಂತಪ್ಪ ಮಾತನಾಡಿ, ತಹಸೀಲ್ದಾರ್ ಅಧಿಕಾರ ವಹಿಸಿಕೊಳ್ಳುವಲ್ಲಿ ವಿಳಂಬ ಮಾಡುತ್ತಿರುವುದು ಸರಿಯಲ್ಲ ಎಂದರು.
ವಾಲ್ಮೀಕಿ ಸಮಾಜದ ಮುಖಂಡ ನಿಟ್ಟೂರು ಸಣ್ಣಹಾಲಪ್ಪ ಮಾತನಾಡಿದರು. ವಿಎಸ್‌ಎಸ್‌ಎನ್ ನಿರ್ದೇಶಕ ಗಾಟಿನ ಬಸಪ್ಪ, ಕುರುಬ ಸಮಾಜದ ಮುಖಂಡ ಮೇಘರಾಜ, ವರಕೇರಿ ಆಂಜಿನಪ್ಪ, ತಪಾಲಿ ಕೊಟ್ರಪ್ಪ, ತಲುವಾಗಲು ಹನುಮಂತಪ್ಪ ಇದ್ದರು.