ಕನ್ನಡಪ್ರಭ ವಾರ್ತೆ ಹಳಿಯಾಳ
ತ್ಯಾಗ, ಪ್ರೀತಿ ಮತ್ತು ಬಲಿದಾನದ ಸಂಕೇತವಾಗಿ ಹಾಗೂ ನಂಬಿದ ಭಕ್ತರನ್ನು ಸದಾ ಸಂರಕ್ಷಿಸಲು ಮುಂದಾಗುವ ದೇವರ ಕರುಣಾಮಯತೆಯನ್ನು ಸ್ಮರಿಸುವ ದಿಸೆಯಿಂದ ಆಚರಿಸಲ್ಪಡುವ ಬಕ್ರೀದ್(ಈದ್-ಉಲ್-ಅಝಾ) ಹಬ್ಬವನ್ನು ಹಳಿಯಾಳ ತಾಲೂಕಿನಾದ್ಯಂತ ಮುಸ್ಲಿಂ ಭಾಂದವರು ಗುರುವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು.ಹಬ್ಬದ ನಿಮಿತ್ತ ಪಟ್ಟಣದ ಮರಡಿ ಗುಡ್ಡದಲ್ಲಿನ ಈದ್ಗಾ ಮೈದಾನದಲ್ಲಿ ವಿಶೇಷ ಸಾಮೂಹಿಕ ನಮಾಜ್ ಸಲ್ಲಿಸಿದರು. ಪಟ್ಟಣದಲ್ಲಿನ ವಿವಿಧ ಮೊಹಲ್ಲಾಗಳ ಮುಸ್ಲಿಂ ಭಾಂದವರು ಪ್ರಾರ್ಥನೆಯಲ್ಲಿ ಪಾಲ್ಗೊಂಡರು.ಆದರ್ಶ ಪಾಲಿಸೋಣ:ಹಬ್ಬದ ಸಂಪೂರ್ಣ ಪೂಜಾವಿಧಿಯನ್ನು ಧರ್ಮಗುರು ಮುಪ್ತಿ ಮುಷ್ತಾಕ ಸಲ್ಲಿಸಿದರು. ತದನಂತರ ಧರ್ಮಗುರು ಮುಪ್ತಿ ಫಯಾಜಹ್ಮದ ಇಟ್ಟಂಗಿವಾಲೆ ಬಕ್ರೀದ್ ಸಂದೇಶ ನೀಡಿ ಪ್ರವಾದಿ ಇಬ್ರಾಹಿಂ ಅವರ ತ್ಯಾಗ, ಬಲಿದಾನ ಹಾಗೂ ದೈವ ಅಚಲ ಭಕ್ತಿಯನ್ನು ಸ್ಮರಿಸುವಂತಹ ಹಬ್ಬವು ಇದಾಗಿದೆ. ಅವರ ಆದರ್ಶಗಳನ್ನು ಪಾಲಿಸುತ್ತಾ ನಾವು ಸಾಗಬೇಕು, ಅಸಹಾಯಕರಿಗೆ ನಮ್ಮ ಕೈಲಾದಷ್ಟು ಸಹಾಯ, ಸಹಕಾರ ನೀಡುವ ಮನೋಭಾವವನ್ನು ನಾವು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು, ಸಮಾಜದಲ್ಲಿ ಎಲ್ಲರೊಂದಿಗೆ ಸಹೋದರರಂತೆ ಬಾಳಬೇಕು ಎಂದು ಕರೆ ನೀಡಿದರು. ಹಬ್ಬದ ಸಾಮೂಹಿಕ ನಮಾಜನಲ್ಲಿ ಮುಸ್ಲಿಂ ಪ್ರಮುಖರಾದ ಉದ್ಯಮಿ ರಫೀಕಹ್ಮದ ಬಸರಿಕಟ್ಟಿ, ಯುವ ಉದ್ಯಮಿ ಅಲಿಂ ಬಸರಿಕಟ್ಟಿ, ಪುರಸಭಾ ಮಾಜಿ ಅಧ್ಯಕ್ಷ ಅಜರ್ ಬಸರಿಕಟ್ಟಿ, ಅಲ್ತಾಫ್ ಬಸರಿಕಟ್ಟಿ, ಫಯಾಜ್ ಶೇಖ್, ಇಮ್ತಿಯಾಜ್ ಶೇಖ್, ಸುಭಾನಿ ಗೋರಿಖಾನ್, ರಿಜ್ವಾನ ಕಿಲ್ಲೆದಾರ, ಸರಪರಾಜ್ ಬೇಪಾರಿ, ಮುಸ್ಲಿಂ ಮುಖಂಡರಾದ ಮಹ್ಮದಖಯ್ಯಾಂ ಮುಗದ, ಯೂಸೂಪ ಜಂಗೂಬಾಯಿ, ಗುಲಾಬಷ್ಯಾ ಲತೀಪಣ್ಣನವರ, ಇಮ್ತಿಯಾಜ್ ಮನಿಯಾರ, ಮುಕ್ತುಂಹುಸೇನ್ ಉಗರಗೋಳ್, ಖಲೀಲ್ ಚಿಗರಿ, ಎಂ.ಎ. ಕಾಗದ, ನಿಸ್ಸಾರ ಯರಗುಡಿ, ಅನ್ವರ ಪುಂಗಿ ಸೇರಿದಂತೆ ಪಟ್ಟಣದ ದೊಡ್ಡ ಕುಟುಂಬಗಳಾದ ಜಂಗೂಬಾಯಿ, ದುರ್ಗಾಡಿ, ಪುಂಗಿ, ಲತೀಪಣ್ಣನವರ, ಮುಗದ ಕುಟುಂಬದವರು ಹಾಗೂ ಇತರರು ಇದ್ದರು. ಹಬ್ಬದ ಸಾಮೂಹಿಕ ಪ್ರಾರ್ಥನೆಯ ನಂತರ ಪ್ರತಿಯೊಬ್ಬರು ಒಬ್ಬರನ್ನೊಬ್ಬರನ್ನು ಅಲಂಗಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬಕ್ಕಾಗಿ ಹಾಲಿನಲ್ಲಿಯೇ ತಯಾರಿಸಲ್ಪಡುವ ಸುರ-ಕುರ್ಮಾ ಸಿಹಿ ಪಾಯಸವನ್ನು ಪರಸ್ಪರ ತಮ್ಮ ಪರಿಚಯಸ್ಥರಿಗೆ, ಆತ್ಮೀಯರಿಗೆ ನೆಂಟರಿಗೆ ಹಂಚಿ ಸಂಭ್ರಮಿಸಿದರು. ಮುಸ್ಲಿಂ ಧರ್ಮಿಯರು ಹೆಚ್ಚು ಸಂಖ್ಯೆಯಲ್ಲಿ ನೆಲೆಸಿರುವ ಗ್ರಾಮಗಳಲ್ಲಿಯೂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.