ಕನಕಗಿರಿ ತಾಲೂಕು ಕೇಂದ್ರವಾಗಿದ್ದು, ಇಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಎಲ್ಲ ಕಚೇರಿಗಳಂತೆ ಕೋರ್ಟ್ ಇರಬೇಕು
ಕನಕಗಿರಿ: ತಿಂಗಳೊಳಗಾಗಿ ಪಟ್ಟಣದಲ್ಲಿ ತಾಲೂಕು ನ್ಯಾಯಾಲಯ ಆರಂಭವಾಗಲಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಸಿ. ಚಂದ್ರಶೇಖರ ಹೇಳಿದರು.
ಪಟ್ಟಣದ ಎಪಿಎಂಸಿ ಶ್ರಮಿಕ ಭವನದಲ್ಲಿ ಆರಂಭಿಸಲು ಉದ್ದೇಶಿಸಿರುವ ನ್ಯಾಯಾಲಯದ ದುರಸ್ಥಿ ಕಾರ್ಯ ಗುರುವಾರ ಪರಿಶೀಲಿಸಿ ಮಾತನಾಡಿದರು.ಕನಕಗಿರಿ ತಾಲೂಕು ಕೇಂದ್ರವಾಗಿದ್ದು, ಇಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಎಲ್ಲ ಕಚೇರಿಗಳಂತೆ ಕೋರ್ಟ್ ಇರಬೇಕು. ಕಾರಟಗಿಯೊಂದಿಗೆ ಇಲ್ಲಿಯೂ ಕೋರ್ಟ್ ಆರಂಭವಾಗಬೇಕಿತ್ತು. ತಾಲೂಕಿನ ಜನರು ಈ ಹಿಂದೆ ಕೋರ್ಟ್ ಕಲಾಪಗಳಿಗೆ ಗಂಗಾವತಿಗೆ ಹೋಗಬೇಕಿತ್ತು. ಇದು ಜನರಿಗೆ ಹೊರೆಯಾಗುತ್ತಿದ್ದರಿಂದ ಪಟ್ಟಣದಲ್ಲಿಯೇ ನ್ಯಾಯಾಲಯ ಆರಂಭಿಸುವ ಸಲುವಾಗಿ ಕಳೆದ ಹಲವು ದಿನಗಳಿಂದ ಬಾಡಿಗೆ ಕಟ್ಟಡ ಹುಡುಕುತ್ತಿದ್ದು, ಕೊನೆಗೆ ಎಪಿಎಂಸಿಯಲ್ಲಿನ ಶ್ರಮಿಕ ಭವನ ಅಂತಿಮಗೊಳಿಸಲಾಗಿದೆ. ಈಗಾಗಲೇ ಕೋರ್ಟ್ ಕಲಾಪ ನಡೆಯಲು ಬೇಕಾದ ಸಿದ್ಧತಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕೆಲ ಕಾರಣಗಳಿಗಾಗಿ ಕಾಮಗಾರಿ ನಿಧಾನವಾಗಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಮುಗಿಸಲು ಏಜೆನ್ಸಿ ಪಡೆದ ಕೆಆರ್ ಐಡಿಎಲ್ ಅಧಿಕಾರಿಗಳಿಗೆ ತಿಳಿಸಲಾಗಿದೆ. ಕಾಮಗಾರಿ ಮುಗಿದ ಕೂಡಲೇ ತಾಲೂಕಿನ ಜನತೆಯ ಬಹು ದಿನದ ಬೇಡಿಕೆಯಾದ ಕೋರ್ಟ್ ಆರಂಭಿಸಲಾಗುವುದು ಎಂದರು.
ಕಾರಟಗಿಯಲ್ಲಿ ಈಗಾಗಲೇ ಕೋರ್ಟ್ ಕಲಾಪ ನಡೆಯುತ್ತಿದ್ದು, ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಾಧೀಶರೆ ಕನಕಗಿರಿ ಕೋರ್ಟ್ ನ್ಯಾಯಾಧೀಶರಾಗಿರುತ್ತಾರೆ. ತಾಲೂಕಿನಲ್ಲಿರುವ ಪೆಂಡೆನ್ಸಿ ಪ್ರಕರಣ ಆಧಾರದಲ್ಲಿ ವಾರಕ್ಕೆ ಎರಡು ದಿನಗಳ ಕಾಲ ಸಂಚಾರಿ ಪೀಠದ ಕೋರ್ಟ್ ಕಲಾಪ ನಡೆಯಲಿದೆ. ಶುಕ್ರವಾರ ಹಾಗೂ ಶನಿವಾರ ದಿನಗಳಂದು ನ್ಯಾಯಾಲಯ ನಡೆಯಲಿದೆ. ಮುಂದಿನ ದಿನಗಳಲ್ಲಿ ಕಾಯಂ ಕೋರ್ಟ್ ಆದ ಬಳಿಕ ವಾರ ಪೂರ್ತಿ ನ್ಯಾಯಾಲಯ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.ತಹಸೀಲ್ದಾರ್ ವಿಶ್ವನಾಥ ಮುರುಡಿ, ಕಂದಾಯ ನಿರೀಕ್ಷಿಕ ಮಂಜುನಾಥ ಹಿರೇಮಠ, ಕೆಆರ್ ಐಡಿಎಲ್ ಇಇ ಅನಿಲ್ ಪಾಟೀಲ್, ವಕೀಲರ ಸಂಘದ ಅಧ್ಯಕ್ಷ ಶರಣಪ್ಪ ನಾಯಕ, ಕಾರ್ಯದರ್ಶಿ ಮಂಜುನಾಥ ಇತರರಿದ್ದರು.