ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯನ್ನು ಹಿಂದೆ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಡಬಲ್‌ ಎಂಜಿನ್‌ ಬಿಜೆಪಿ ಸರ್ಕಾರವೇ ಮಾಡಬೇಕಿತ್ತು. ಆದರೆ, ಆ ಡಬಲ್‌ ಎಂಜಿನ್‌ ಸ್ಟಾರ್ಟ್‌ ಆಗಲೇ ಇಲ್ಲ.

 ಬೆಂಗಳೂರು : ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯನ್ನು ಹಿಂದೆ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಡಬಲ್‌ ಎಂಜಿನ್‌ ಬಿಜೆಪಿ ಸರ್ಕಾರವೇ ಮಾಡಬೇಕಿತ್ತು. ಆದರೆ, ಆ ಡಬಲ್‌ ಎಂಜಿನ್‌ ಸ್ಟಾರ್ಟ್‌ ಆಗಲೇ ಇಲ್ಲ. ಈಗ ನಾವು ಎಲ್ಲರ ಅನುಮತಿ ಪಡೆದ ನಂತರ ವಿರೋಧ ವ್ಯಕ್ತವಾದರೂ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಅನುಷ್ಠಾನಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತದ 57ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಿ.ಕೆ.ಶಿವಕುಮಾರ್‌, ಈ ಹಿಂದೆ ಶರಾವತಿ ಜಲವಿದ್ಯುತ್‌ ಉತ್ಪಾದನಾ ಘಟಕದಲ್ಲಿ ವಿದ್ಯುತ್‌ ಅವಘಡ ಸಂಭವಿಸಿ ಸುಟ್ಟು ಹೋದಾಗ ಕೇವಲ 28 ದಿನಗಳಲ್ಲಿ 3 ಯುನಿಟ್ ಕೆಲಸ ಮಾಡುವಂತೆ ಮಾಡಿದ್ದೆವು. ಅದಾದ ನಂತರ ಶರಾವತಿ ಯೋಜನೆಯ ಮುಂದುವರಿದ ಭಾಗವಾದ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯನ್ನು ಹಿಂದಿನ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಅನುಷ್ಠಾನಗೊಳಿಸುತ್ತದೆ ಎಂದು ತಿಳಿದಿದ್ದೆವು. ಆದರೆ, ಯೋಜನೆ ಅನುಷ್ಠಾನಗೊಳಿಸುವತ್ತ ಡಬಲ್‌ ಎಂಜಿನ್‌ ಸ್ಟಾರ್ಟ್‌ ಆಗಲಿಲ್ಲ. ಈಗ ನಾವು ಯೋಜನೆಗೆ ಸಂಬಂಧಿಸಿ ಎಲ್ಲ ರೀತಿಯ ಅನುಮತಿ ಪಡೆಯಲು ಕ್ರಮ ಕೈಗೊಳ್ಳುತ್ತಿದ್ದೇವೆ. ಅನುಮತಿ ದೊರೆತ ನಂತರ ಯಾವುದೇ ವಿರೋಧ ಬಂದರೂ ಪರಿಸರಕ್ಕೆ ಹಾನಿಯಾಗದಂತೆ ಯೋಜನೆ ಅನುಷ್ಠಾನಗೊಳಿಸುತ್ತೇವೆ ಎಂದರು.

1.61 ಕೋಟಿ ಕುಟುಂಬಗಳಿಗೆ ಬೆಳಕು:

ರಾಜ್ಯದ ಇಂಧನ ಇಲಾಖೆ 1.61 ಕೋಟಿ ಕುಟುಂಬಗಳಿಗೆ ಬೆಳಕು ನೀಡುತ್ತಿದೆ. ಅದರಲ್ಲೂ ಗೃಹಜ್ಯೋತಿಗೆ ರಾಜ್ಯ ಸರ್ಕಾರ 10 ಸಾವಿರ ಕೋಟಿ ರು. ವ್ಯಯಿಸುತ್ತಿದೆ. ಜತೆಗೆ ಕೃಷಿ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್‌ ನೀಡಲು 20 ಸಾವಿರ ಕೋಟಿ ರು. ಖರ್ಚು ಮಾಡುತ್ತಿದೆ. ಇಂಧನ ಇಲಾಖೆಯು ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಕೆಲಸ ಮಾಡುತ್ತಿದೆ. ಸರ್ಕಾರದಿಂದ ಹಣ ನೀಡುವುದು ಬಾಕಿಯಿದ್ದರೂ, ಜನರ ಸೇವೆ ಮಾಡುತ್ತಿದೆ ಎಂದು ತಿಳಿಸಿದರು.

ಈ ಹಿಂದೆ ನಾನು ಇಂಧನ ಸಚಿವನಾಗಿದ್ದಾಗ ಪಾವಗಡ ಸೌರ ವಿದ್ಯುತ್‌ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ಸಾಕಷ್ಟು ವಿರೋಧಗಳು ವ್ಯಕ್ತವಾದವು. ಆದರೆ ನಾನು ಯಾವುದೇ ಭೂಸ್ವಾಧೀನ ಮಾಡಿಕೊಳ್ಳದೆ ರೈತರ ಭೂಮಿಯನ್ನು 25 ವರ್ಷಕ್ಕೆ ಬಾಡಿಗೆಗೆ ಪಡೆದು ಯೋಜನೆ ಅನುಷ್ಠಾನಗೊಳಿಸಿದೆ. ಇದೀಗ ಯೋಜನೆ ವಿಸ್ತರಿಸಲು ಮತ್ತೆ 10 ಸಾವಿರ ಎಕರೆ ನೀಡಲು ರೈತರೇ ಮುಂದೆ ಬಂದಿದ್ದಾರೆ. ಅದರ ಬಗ್ಗೆ ಚರ್ಚೆ ನಡೆಸಲಾಗುತ್ತಿದ್ದು, ಯೋಜನೆ ವಿಸ್ತರಿಸಲಾಗುವುದು ಎಂದು ವಿವರಿಸಿದರು.

ಇಂಧನ ಸಚಿವ ಕೆ.ಜೆ.ಜಾರ್ಜ್‌ ಮಾತನಾಡಿ, ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಅನುಷ್ಠಾನಕ್ಕೆ ಮುನ್ನವೇ ಕೆಲವರು ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಯೋಜನೆಗೆ 125 ಎಕರೆ ಭೂಮಿಯಷ್ಟೇ ಬಳಕೆಯಾಗುತ್ತದೆ. ಇನ್ನು, ಇಲ್ಲಿ ಕಡಿಯಲಾಗುವ ಮರಗಳ ಬದಲಿಗೆ ಬೇರೆಡೆ 10 ಪಟ್ಟು ಹೆಚ್ಚಿನ ಸಸಿಗಳನ್ನು ನೆಟ್ಟು ಬೆಳೆಸಲಾಗುವುದು. ಹಾಗೆಯೇ, ಯೋಜನೆ ಅನುಷ್ಠಾನಗೊಳಿಸಲಾಗುವ ಅರಣ್ಯ ಭೂಮಿಯಲ್ಲಿ ಗೋಲ್ಡನ್‌ ಟೇಲ್‌ ಮಂಗಗಳಿವೆ. ಅವುಗಳಿಗೂ ಪುನರ್ವಸತಿ ಕಲ್ಪಿಸಲಾಗುವುದು. ಯೋಜನೆಗೆ ಬೇಕಾಗುವ ಎಲ್ಲ ಅನುಮತಿ ಪಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯುತ್‌ ಬೇಡಿಕೆ ಹೆಚ್ಚುತ್ತಿದ್ದು, ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂಬುದಕ್ಕೆ ಇದು ಸಾಕ್ಷಿ. ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಕುಟುಂಬಕ್ಕೆ 200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ನೀಡಲಾಗುತ್ತಿದೆ. ಈ ಯೋಜನೆ ಫಲಾನುಭವಿಗಳ ಪಟ್ಟಿ ಪರಿಷ್ಕರಿಸಲಾಗುತ್ತಿದ್ದು, ಅರ್ಹರಿಗೆ ಮಾತ್ರ ಯೋಜನೆ ಲಾಭ ಪಡೆಯುವಂತೆ ಮಾಡಲಾಗುತ್ತಿದೆ. ಗೃಹಜ್ಯೋತಿ ಯಶಸ್ವಿ ಅನುಷ್ಠಾನದಲ್ಲಿ ಇಂಧನ ಇಲಾಖೆ ಅಡಿಯ ಎಲ್ಲ ಸಂಸ್ಥೆಗಳ ಸಿಬ್ಬಂದಿ, ಅಧಿಕಾರಿಗಳ ಶ್ರಮ ಬಹಳಷ್ಟಿದೆ ಎಂದು ತಿಳಿಸಿದರು.

8 ಮಂದಿಗೆ ಗೌರವ:

ಕೆಪಿಸಿಎಲ್‌ನಲ್ಲಿ 25 ವರ್ಷ ಸೇವೆ ಸಲ್ಲಿಸಿದ 8 ಮಂದಿಯನ್ನು ಗೌರವಿಸಲಾಯಿತು. ಜತೆಗೆ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಅಂಕಗಳಿಸಿದ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ, ಕೆಪಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌ ಇತರರಿದ್ದರು.