ಕೊಟ್ಟೂರು: ದಾವಣಗೆರೆ, ಬಾಗಲಕೋಟೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ರಾಜ್ಯದ ಅಸಮರ್ಥ ನಾಯಕತ್ವ ಮತ್ತು ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗದಿರುವ ಅಸಂಘಟನೆ ಕಾರಣ ಎಂದು ಸ್ಪಷ್ಟವಾಗಿದೆ. ಪಕ್ಷದ ವರಿಷ್ಠರು ಈ ಕಾರಣದಿಂದ ಬಿಜೆಪಿ ರಾಜ್ಯ ಘಟಕವನ್ನು ವಿಸ್ತರಿಸಿ ಹೊಸ ಅಧ್ಯಕ್ಷರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಹಿರಿಯ ಮುಖಂಡ ಎಸ್.ತಿಂದಪ್ಪ ಹೇಳಿದರು.ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸ್ವಹಿತಾಸಕ್ತಿಗೆ ಒತ್ತು ನೀಡಿ ಉಪಚುನಾವಣೆ ಪ್ರಚಾರ ಕಾರ್ಯದಲ್ಲಿ ಸರಿಯಾಗಿ ಕೆಲಸ ಮಾಡಿಲ್ಲ. ಉಪಚುನಾವಣೆಗೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ವರಿಷ್ಠರಿಗೆ ವಾಸ್ತವ ಸಂಗತಿಯ ಮಾಹಿತಿ ನೀಡದ ಈ ಇಬ್ಬರು ಇರುವವರೆಗೂ ಪಕ್ಷಕ್ಕೆ ಖಂಡಿತ ಭವಿಷ್ಯವಿಲ್ಲ ಎಂದರು.
ರಾಜ್ಯಾಧ್ಯಕ್ಷ ಬಿ.ವೈ. ವಿಜೇಂದ್ರ ಅವರನ್ನು ಬದಲಾಯಿಸಬೇಕು. ಇಲ್ಲವೇ ರಾಜ್ಯ ಘಟಕವನ್ನು ಸಂಪೂರ್ಣ ವಿಸರ್ಜಿಸಿ ಹೊಸ ಸಮಿತಿ ರಚಿಸಬೇಕು. ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರನ್ನು ಕೆಳಗಿಳಿಸಬೇಕು. ಸಮರ್ಥ ಶಾಸಕರ ದೊಡ್ಡ ಪಡೆ ಪಕ್ಷದಲ್ಲಿದ್ದು, ಅಂತವರಿಗೆ ವಿರೋಧ ಪಕ್ಷದ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಹರಾಳು ಬಸವರಾಜ, ಗಂಗಮ್ಮನಹಳ್ಳಿ ಸಿದ್ದಪ್ಪ ಇದ್ದರು.