ಫುಟ್ಪಾತ್ ಮೇಲಿನ ಅಂಗಡಿ ತೆರವಿಗೆ ವ್ಯಾಪಕ ಪ್ರಶಂಸೆ

KannadaprabhaNewsNetwork |  
Published : May 06, 2026, 02:30 AM IST
5ುಲು1,2 | Kannada Prabha

ಸಾರಾಂಶ

ಹಲವಾರು ವರ್ಷಗಳಿಂದ ನಗರದ ಫುಟ್ಪಾತ್‌ ಮೇಲೆ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಅಂಗಡಿ, ಹೋಟೆಲ್ ಸೇರಿದಂತೆ ಬಂಡಿಗಳ ತೆರವು ಕಾರ್ಯಾಚರಣೆ ಮುಂದುವರಿದಿದೆ. ಈ ಕಾರ್ಯಾಚರಣೆಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ರಾಮಮೂರ್ತಿ ನವಲಿ

ಗಂಗಾವತಿ: ಹಲವಾರು ವರ್ಷಗಳಿಂದ ನಗರದ ಫುಟ್ಪಾತ್‌ ಮೇಲೆ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಅಂಗಡಿ, ಹೋಟೆಲ್ ಸೇರಿದಂತೆ ಬಂಡಿಗಳ ತೆರವು ಕಾರ್ಯಾಚರಣೆ ಮುಂದುವರಿದಿದೆ. ಈ ಕಾರ್ಯಾಚರಣೆಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಒಂದು ವಾರದಿಂದ ಕಾರ್ಯಾಚರಣೆ ನಡೆದಿದ್ದು, ಪ್ರಮುಖವಾಗಿ ಗಾಂಧಿ ವೃತ್ತ, ಮಹಾವೀರ ವೃತ್ತದ ರಸ್ತೆ, ಪಂಪಾನಗರ, ಶ್ರೀಚೆನ್ನಬಸವಸ್ವಾಮಿ ವೃತ್ತದ ರಸ್ತೆ, ಬಸವಣ್ಣ ವೃತ್ತ, ಬಸ್ ನಿಲ್ದಾಣ ರಸ್ತೆ, ಜುಲೈ ನಗರ ಸೇರಿದಂತೆ ವಿವಿಧ ರಸ್ತೆಗಳ ಪಕ್ಕದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಹೋಟೆಲ್‌ಗಳನ್ನು ತೆರವುಗೊಳಿಸಲಾಗಿದೆ.

ಕೆಲವರು ರಸ್ತೆಯ ಪಕ್ಕದಲ್ಲಿರುವ ಚರಂಡಿ ಮೇಲೆ ನಿರ್ಮಿಸಿರುವ ಫುಟ್ಪಾತ್‌ ಮೇಲೆ ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದರು. ಸೂಚನೆ ನೀಡಿದರೂ ಸ್ವಯಂ ಪ್ರೇರಿತರಾಗಿ ತೆರವುಗೊಳಿಸಲು ನಿರ್ಲಕ್ಷ್ಯ ಮಾಡಿದ್ದರಿಂದ ನಗರಸಭೆಯ ಸಿಬ್ಬಂದಿ ಜೆಸಿಬಿ ಮೂಲಕ ತೆರವುಗೊಳಿಸಿದ್ದಾರೆ.

ಸಂಚಾರಕ್ಕೆ ಅಡ್ಡಿ

ವೃದ್ಧರು ಮತ್ತು ಮಹಿಳೆಯರು ಸೇರಿದಂತೆ ಮಕ್ಕಳು ಸುಗಮವಾಗಿ ಸಂಚರಿಸುವುದಕ್ಕಾಗಿ ನಗರಸಭೆಯವರು ಅಮೃತಸಿಟಿ ಯೋಜನೆಯಲ್ಲಿ ಕೋಟ್ಯಾಂತ ವೆಚ್ಚ ಮಾಡಿ ಫುಟ್ಪಾತ್‌ ಗಳನ್ನು ನಿರ್ಮಿಸಿದ್ದರು. ಇದರ ಮೇಲೆ ಕೆಲವರು ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದರು. ಹೀಗಾಗಿ, ವಾಹನಗಳ ಸಂಚಾರಕ್ಕೂ ಅಡ್ಡಿ ಉಂಟಾಗಿತ್ತು.

ಸೌಂದರ್ಯೀಕರಣಕ್ಕೆ ಒತ್ತು

ನಗರದಲ್ಲಿ ಸುಗಮ ಸಂಚಾರ, ಪಾದಾಚಾರಿಗಳಿಗೆ ಅನುಕೂಲ ಜೊತೆಗೆ ನಗರ ಸುಂದರವಾಗಿರಬೇಕು ಎಂದು ನಗರಸಭೆಯವರು ಕ್ರಮ ಕೈಗೊಂಡಿದ್ದಾರೆ. ರಸ್ತೆ ಮದ್ಯದಲ್ಲಿ ವಿದ್ಯುತ್ ದೀಪಗಳ ಕಂಬಗಳು, ಮಳೆ ನೀರು ಸುಗಮವಾಗಿ ಚರಂಡಿ ಸೇರುವಂತೆ ಕ್ರಮ ಕೈಗೊಂಡಿದ್ದು, ಇದಕ್ಕೆ ನಾಗರಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೂಡಲೆ ಫುಟ್ಪಾತ್‌ ದುರಸ್ಥಿ ಕಾರ್ಯಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಗುಂಡಮ್ಮ ಕ್ಯಾಂಪ್‌ನಲ್ಲಿ ಅವಕಾಶ

ಬೀದಿ ವ್ಯಾಪಾರಿಗಳಿಗೆ ಫುಟ್ಪಾತ ತೆರವು ಕಾರ್ಯಾಚರಣೆಯಿಂದ ತೊಂದರೆಯಾಗದಿರಲಿ ಎಂದು ನಗರಸಭೆಯವರು ಗುಂಡಮ್ಮ ಕ್ಯಾಂಪ್ ನಲ್ಲಿ ತರಕಾರಿ ಮಾರುಕಟ್ಟೆ ನಿರ್ಮಿಸಿದ್ದು, ಅಲ್ಲಿ ವ್ಯಾಪಾರ ಮಾಡುವಂತೆ ಸೂಚನೆ ನೀಡಿದ್ದಾರೆ.

ಗಂಗಾವತಿ ನಗರದ ಕೆಲ ರಸ್ತೆಗಳ ಪಕ್ಕದಲ್ಲಿರುವ ಫುಟ್ಪಾತ್‌ ಮೇಲೆ ಇರುವ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿದೆ. ಈಗಾಗಲೇ ಸೂಚನೆ ನೀಡಿದ್ದರೂ ತೆರವುಗೊಳಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ತರಕಾರಿ ವ್ಯಾಪಾರಿಗಳು, ಬೀದಿ ಬದಿಯ ವ್ಯಾಪಾರಿಗಳಿಗೆ ಗುಂಡಮ್ಮ ಕ್ಯಾಂಪ್ ಬಳಿ ನಿರ್ಮಿಸಿರುವ ಮಾರುಕಟ್ಟೆಗೆ ಹೋಗುವಂತೆ ಸೂಚನೆ ನೀಡಿದೆ. ಸಾರ್ವಜನಿಕರ ಹಿತ ದೃಷ್ಟಿ ಮತ್ತು ನಗರ ಸೌಂದರೀಕರಣಕ್ಕೆ ಒತ್ತು ನೀಡಲಾಗಿದೆ ಎಂದು ನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ ತಿಳಿಸಿದ್ದಾರೆ.

ನಗರದಲ್ಲಿ ಅನಧಿಕೃತ ಅಂಗಡಿಗಳ ತೆರವು ಕಾರ್ಯವನ್ನು ಸ್ವಾಗತಿಸುತ್ತೇವೆ. ನಗರ ಸೌಂದರೀಕರಣಕ್ಕೆ ಆದ್ಯತೆ ನೀಡಿರುವದು ಪ್ರಶಂಸನೀಯ. ಬೀದಿ ವ್ಯಾಪಾರಿಗಳು ಅನಾಥರಾಗವುದಕ್ಕೂ ಪೂರ್ವದಲ್ಲಿ ಅವರಿಗೆ ಸ್ಥಳಾವಕಾಶ ಕಲ್ಪಿಸಬೇಕು ಎಂದು ಸ್ಥಳೀಯ ನಿವಾಸಿ ಗಂಗಪ್ಪ ಆಗ್ರಹಿಸಿದರು.

ಬೀದಿ ಬದಿಯ ಅಂಗಡಿಗಳನ್ನು ತೆರವುಗೊಳಿಸಿದ್ದರಿಂದ ಬೀದಿ ಪಾಲಾಗಿದ್ದೇವೆ. ದಿನನಿತ್ಯ ಬಂಡಿಯಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡಿ ಜೀವನ ಸಾಗಿಸುತ್ತೇವೆ. ಬದುಕಲು ಅವಕಾಶ ನೀಡಿ ಎಂದು ಬೀದಿ ಬದಿ ವ್ಯಾಪಾರಿ ಗುಂಡಪ್ಪ ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆ ಆರಂಭಕ್ಕೂ ಮೊದಲು ತ್ವರಿತ ಕಾಮಗಾರಿಗೆ ಸಚಿವ ಸೂಚನೆ
ಫೈರಿಂಗ್ ರೇಂಜ್ ಎನ್‌ಸಿಸಿಗೆ ಅತ್ಯುಪಯುಕ್ತ: ಪ್ರೊ.ಅಶೋಕ್ ಸಂಗಪ್ಪ