ಕಸಾಪ ಪ್ರತಿಯೊಬ್ಬ ಕನ್ನಡಿಗನ ಅಭಿಮಾನದ ಸಂಸ್ಥೆ: ಫಿರೋಜ ಪಿರ್ಜಾದೆ

KannadaprabhaNewsNetwork |  
Published : May 06, 2026, 02:30 AM IST
ಎಚ್05.05-ಡಿಎನ್‌ಡಿ1: ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನೆ ದಿನಾಚರಣೆ ಆಚರಣೆ | Kannada Prabha

ಸಾರಾಂಶ

ಶತಮಾನಗಳ ಇತಿಹಾಸವನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು ಈ ನಾಡಿನ ಸಾಹಿತ್ಯಕ, ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡಿದಂತಹ ಒಂದು ಚಾರಿತ್ರಿಕವಾದ ಸಂಘಟನೆಯಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನೆ ದಿನಾಚರಣೆ ಉದ್ಘಾಟನೆ

ಕನ್ನಡಪ್ರಭ ವಾರ್ತೆ ದಾಂಡೇಲಿ

ಶತಮಾನಗಳ ಇತಿಹಾಸವನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು ಈ ನಾಡಿನ ಸಾಹಿತ್ಯಕ, ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡಿದಂತಹ ಒಂದು ಚಾರಿತ್ರಿಕವಾದ ಸಂಘಟನೆಯಾಗಿದೆ. ಇದು ಪ್ರತಿಯೊಬ್ಬ ಕನ್ನಡಿಗನ ಕನ್ನಡ ನಾಡಿನ ಅಭಿಮಾನದ ಸಂಸ್ಥೆಯಾಗಿದೆ ಎಂದು ಸಾಮಾಜಿಕ ಹೋರಾಟಗಾರ ಫಿರೋಜ ಪಿರ್ಜಾದೆ ನುಡಿದರು. ದಾಂಡೇಲಿಯ ಆಶಾಕಿರಣ ಐಟಿಐ ಕಾಲೇಜಿನಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನೆ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಇಂದು ಅತಿಯಾದ ತಂತ್ರಜ್ಞಾನ ಬಳಕೆಯಿಂದ ಭಾಷೆಗಳ ಮೇಲೆ ಪ್ರಹಾರವಾಗುತ್ತಿದೆ. ವಿದ್ಯಾರ್ಥಿ ಯುವಜನರು ಸಹ ಅತಿಯಾದ ತಂತ್ರಜ್ಞಾನದಲ್ಲಿ ಬದುಕನ್ನ ಮುಳುಗಿಸಿಕೊಂಡಿದ್ದಾರೆ. ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗುತ್ತಿದೆ. ಇದು ಬಹಳ ಆತಂಕದ ವಿಚಾರ. ನಾವು ಕನ್ನಡ ಪುಸ್ತಕವನ್ನು ಓದುವ ಮೂಲಕ ಕನ್ನಡದ ಸಂಸ್ಕೃತಿಯನ್ನು ಹಾಗೂ ಕನ್ನಡದ ಇತಿಹಾಸವನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಾಗಿದೆ ಎಂದರು. ಕನ್ನಡ ಸಾಹಿತ್ಯದಲ್ಲಿ ಸಂಸ್ಕೃತಿಯ ಕುರುಹು ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದ ಸಾಹಿತಿ ಡಾ. ಭೀಮಾಶಂಕರ ಅಜನಾಳ, ಕನ್ನಡ ಸಾಹಿತ್ಯ ಎನ್ನುವುದು ಇದೊಂದು ಸಾಗರ ಇದ್ದ ಹಾಗೆ. ಇದು ನಾಡಿನ ಇತಿಹಾಸದ ಜೊತೆಗೆ ಇಲ್ಲಿಯ ಜನಪದ ಹಾಗೂ ಇಲ್ಲಿಯ ಮೂಲ ಸಂಸ್ಕೃತಿಯನ್ನು ಉಳಿಸುವ ಮತ್ತು ಕಟ್ಟಿಕೊಡುವ ಕೆಲಸವನ್ನು ಮಾಡಿದೆ ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಮುರ್ತುಜಾ ಹುಸೇನ್ ಆನೆಹೊಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿರುವ ರಚನಾತ್ಮಕ ಕಾರ್ಯಕ್ರಮಗಳ ಬಗ್ಗೆ ಸ್ಮರಿಸಿ, ವಿದ್ಯಾರ್ಥಿಯುವಜನರು ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳವಂತಾಂಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಎನ್. ವಾಸರೆ ಮಾತನಾಡಿ, ಈ ನಾಡಿನ ಪ್ರಾತಿನಿಧಿಕ ಸಂಸ್ಥೆಯಾಗಿರುವ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯನ್ನು ಕನ್ನಡದ ಹಬ್ಬ ಎಂದೇ ಆಚರಿಸುವುದು ಸೂಕ್ತ. ಇಂದು ವಿದ್ಯಾರ್ಥಿ ಯುವಜನರು ಓದುವ ಸಂಸ್ಕೃತಿಯಿಂದ ದೂರವಾಗುತ್ತಿದ್ದಾರೆ. ಸಾಮಾನ್ಯ ಜ್ಞಾನಗಳನ್ನು ತಿಳಿದುಕೊಳ್ಳುತ್ತಿಲ್ಲ. ಅತಿಯಾದ ತಂತ್ರಜ್ಞಾನದ ಬಳಕೆ ಮುಂದೆ ಬಹಳಷ್ಟು ಅಪಾಯಕಾರಿಯಾಗಿದೆ. ಕನ್ನಡ ಪ್ರತಿಯೊಬ್ಬರ ಮನೆ, ಮನದಲ್ಲಿ ಅನುರಣಿಸುತ್ತಿರಬೇಕು ಎಂದರು. ಕಸಾಪ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಆಶಾಕಿರಣ ಐಟಿಐ ಕಾಲೇಜಿನ ಪ್ರಾಚಾರ್ಯ ಎನ್.ಆರ್. ನಾಯ್ಕ, ಕಸಾಪ ಕಾರ್ಯದರ್ಶಿಗಳಾದ ಗುರುಶಾಂತ ಜಡೆ ಹಿರೇಮಠ, ಪ್ರವೀಣ್ ನಾಯ್ಕ, ಕೋಶಾಧ್ಯಕ್ಷ ಶ್ರೀಮಂತ ಮದರಿ ಮುಂತಾದವರಿದ್ದರು. ಭಾವ ವೀಣೆ ಮಿಡಿದಾಗ ಎಂಬ ಭಾವಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ರಘುವೀರ್ ಗೌಡ ಗಿರೀಶ್ ನಾಯ್ಕ, ಮಹಾಂತೇಶ್ ಅಂದಕಾರ, ಸುರೇಶ ಕಾಮತ, ಪೂಜಾ ರೂಗಿ, ಗೌರಿ ಚಟ್ಟರಕಿ ಮುಂತಾದವರು ಭಾವಗೀತೆ ಪ್ರಸ್ತುತಪಡಿಸಿದರು.ಎನ್.ಆರ್. ನಾಯ್ಕ ಸ್ವಾಗತಿಸಿದರು, ವೆಂಕಮ್ಮ ಗಾಂವಕರ ವಂದಿಸಿದರು. ಗಿರೀಶ ಜೋಶಿ ನಿರೂಪಿಸಿದರು. ಕಲ್ಪನಾ ಪಾಟೀಲ, ಕುಣಾಲ ಘಟಕಾಂಬಳೆ, ಪ್ರವೀಣ ಸುಲಾಖೆ, ಎಸ್.ಎಸ್. ತೆಂಗಿನಮಠ, ಮನೋಜ ನಾಯ್ಕ, ಪಿಂಟೋ, ಸುಚಿತಾ, ಸತೀಶ ನಾಯ್ಕ ಮುಂತಾದವರು ಸಹಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆ ಆರಂಭಕ್ಕೂ ಮೊದಲು ತ್ವರಿತ ಕಾಮಗಾರಿಗೆ ಸಚಿವ ಸೂಚನೆ
ಫೈರಿಂಗ್ ರೇಂಜ್ ಎನ್‌ಸಿಸಿಗೆ ಅತ್ಯುಪಯುಕ್ತ: ಪ್ರೊ.ಅಶೋಕ್ ಸಂಗಪ್ಪ