ನ್ಯಾಸರ್ಗಿ ಜಲಾಶಯದಿಂದ ಕೃಷಿ ಭೂಮಿಗೆ ನೀರು ಪೂರೈಕೆಗೆ ಆಗ್ರಹಿಸಿ ಧರಣಿ

KannadaprabhaNewsNetwork |  
Published : May 06, 2026, 02:30 AM IST
ಬಾಚಣಕಿ ಭಾಗದ ರೈತರು ಚಿಕ್ಕ ನೀರಾವರಿ ಇಲಾಖೆ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು. | Kannada Prabha

ಸಾರಾಂಶ

ತಾಲೂಕಿನ ನ್ಯಾಸರ್ಗಿ ಜಲಾಶಯದ ಗೇಟ್ ದುರಸ್ತಿಗೊಳಿಸಿ ಬಾಚಣಕಿ ಭಾಗದ ಕೃಷಿ ಭೂಮಿಗೆ ನೀರು ಪೂರೈಸುವಂತೆ ಆಗ್ರಹಿಸಿ ಬಾಚಣಕಿ ಭಾಗದ ರೈತರು ಮಂಗಳವಾರ ಇಲ್ಲಿಯ ಚಿಕ್ಕ ನೀರಾವರಿ ಇಲಾಖೆ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.

ಕನ್ನಡಪ್ರಭ ವಾರ್ತೆ ಮುಂಡಗೋಡ

ತಾಲೂಕಿನ ನ್ಯಾಸರ್ಗಿ ಜಲಾಶಯದ ಗೇಟ್ ದುರಸ್ತಿಗೊಳಿಸಿ ಬಾಚಣಕಿ ಭಾಗದ ಕೃಷಿ ಭೂಮಿಗೆ ನೀರು ಪೂರೈಸುವಂತೆ ಆಗ್ರಹಿಸಿ ಬಾಚಣಕಿ ಭಾಗದ ರೈತರು ಮಂಗಳವಾರ ಇಲ್ಲಿಯ ಚಿಕ್ಕ ನೀರಾವರಿ ಇಲಾಖೆ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.೪೦ ವರ್ಷಗಳ ಹಿಂದೆ ನ್ಯಾಸರ್ಗಿ ಮತ್ತು ಬಾಚಣಕಿ ಭಾಗದ ರೈತರ ಗದ್ದೆಗಳಿಗೆ ನೀರು ಪೂರೈಸುವ ಉದ್ದೇಶದಿಂದ ಈ ಜಲಾಶಯ ನಿರ್ಮಾಣ ಮಾಡಲಾಗಿದೆ. ಆದರೆ ಈವರೆಗೂ ಬಾಚಣಕಿ ಭಾಗದ ಕೃಷಿ ಭೂಮಿಗೆ ನೀರು ಪೂರೈಸಲಾಗಿಲ್ಲ. ಇದರಿಂದ ರೈತರ ಬೆಳೆಗೆ ಸಮರ್ಪಕ ನೀರು ಸಿಗದೆ ತೊಂದರೆಯಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆರೊಪಿಸಿದ ರೈತರು, ನೀರು ಪೂರೈಕೆ ವ್ಯವಸ್ಥೆ ಮಾಡುವವರೆಗೆ ಧರಣಿಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಪಟ್ಟುಹಿಡಿದರು.ಜಲಾಶಯದ ದುರಸ್ತಿ ಕಾರ್ಯಕ್ಕೆ ಅನುದಾನದ ಕೊರತೆ ಇದ್ದು, ಅನುದಾನಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸದ್ಯಕ್ಕೆ ಜೆಸಿಬಿ ಮೂಲಕ ಸಣ್ಣ ಪುಟ್ಟ ಕಾಲುವೆ ದುರಸ್ತಿ ಮಾಡಿ ನೀರು ಹರಿಸುವ ವ್ಯವಸ್ಥೆ ಮಾಡಿಕೊಡುವುದಾಗಿ ಚಿಕ್ಕ ನೀರಾವರಿ ಇಲಾಖೆ ಅಧಿಕಾರಿ ಆರ್.ಎನ್. ನಾಯ್ಕ ಭರವಸೆ ನೀಡಿದ್ದಾರೆ.ಲಂಚಕ್ಕೆ ಬೇಡಿಕೆ, ಲೋಕಾಯುಕ್ತರಿಗೆ ದೂರು:

ಹಳೆ ಮನೆ ಕಟ್ಟಿಗೆಯನ್ನು ಪಂಚನಾಮೆ ಮಾಡಲು ಉಪ ವಲಯ ಅರಣ್ಯಾಧಿಕಾರಿ ಹಾಗೂ ಬೀಟ್ ಗಾರ್ಡ್ ₹೧೦ ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ ಮುಂಡಗೋಡ ತಾಲೂಕಿನ ಉಗ್ಗಿನಕೇರಿ ಗ್ರಾಮದ ರಮೇಶ ವಾಲ್ಮೀಕಿ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.ಗುಂಜಾವತಿ ಉಪ ವಲಯ ಅರಣ್ಯಾಧಿಕಾರಿ ಬಸವರಾಜ ಯಾದವಾಡ ಹಾಗೂ ಉಗ್ಗಿನಕೇರಿ ವನರಕ್ಷಕ ಪಾಷಾ ಎಂಬುವರ ಮೇಲೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಉಗ್ಗಿನಕೇರಿ ಗ್ರಾಮದ ರಮೇಶ ಫಕ್ಕೀರಪ್ಪ ವಾಲ್ಮೀಕಿ ಎಂಬವರು ಶಿಥಿಲಾವಸ್ಥೆಯಲ್ಲಿದ್ದ ತಮ್ಮ ಹಳೆಯ ಮನೆಯನ್ನು ನೆಲಸಮಗೊಳಿಸಿ ಹೊಸ ಮನೆ ಕಟ್ಟಲು ನಿರ್ಧರಿಸಿ ಮನೆಗೆ ಅಳವಡಿಸಲಾದ ಹಳೆಯ ಕಟ್ಟಿಗೆಯನ್ನು ಮರು ಬಳಕೆಗೆ ಅನುಮತಿ ನೀಡುವಂತೆ ಮುಂಡಗೋಡ ವಲಯ ಅರಣ್ಯಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದರು. ಈ ಬೆನ್ನಲ್ಲೆ ಕಟ್ಟಿಗೆ ಪಂಚನಾಮೆ ಮಾಡಲು ಸ್ಥಳಕ್ಕಾಗಮಿಸಿದ ಫಾರೆಸ್ಟ್ ಗಾರ್ಡ ಕಟ್ಟಿಗೆಗಳ ಅಳತೆ ಮಾಡಿಕೊಂಡು ಹೋದರಲ್ಲದೇ ಬಳಿಕ ತಮ್ಮ ಗುಂಜಾವತಿ ಉಪ ವಲಯ ಅರಣ್ಯಾಧಿಕಾರಿ ಕಚೇರಿಗೆ ಕರೆಸಿ ನಿಮ್ಮ ಕೆಲಸ ಮಾಡಿಕೊಡಬೇಕಾದರೆ ₹೧೦ ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ರಮೇಶ ವಾಲ್ಮೀಕಿ ಲೊಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸ್ಥಾನದಲ್ಲಿರುವ ಅರಣ್ಯ ಇಲಾಖೆ ಸಿಬ್ಬಂದಿಗೆ ಲೊಕಾಯುಕ್ತರು ನೋಟಿಸ್ ನೀಡಿದ್ದು, ತನಿಖೆ ಆರಂಭಿಸಿದ್ದಾರೆ. ಸೂಕ್ತ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆ ಆರಂಭಕ್ಕೂ ಮೊದಲು ತ್ವರಿತ ಕಾಮಗಾರಿಗೆ ಸಚಿವ ಸೂಚನೆ
ಫೈರಿಂಗ್ ರೇಂಜ್ ಎನ್‌ಸಿಸಿಗೆ ಅತ್ಯುಪಯುಕ್ತ: ಪ್ರೊ.ಅಶೋಕ್ ಸಂಗಪ್ಪ