ಕೆಲವು ತಳಿ ದ್ರಾಕ್ಷಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಹೀಗಾಗಿ ದ್ರಾಕ್ಷಿಗೆ ಒಳ್ಳೆಯ ಬೆಲೆ ಬಂದಿದೆ. ಕಳೆದ ಬಾರಿ ಬೆಲೆ ಕುಸಿತದಿಂದ ಕಂಗಾಲಾಗಿದ್ದ ಬೆಳೆಗಾರರಿಗೆ ಈ ಬಾರಿ ದ್ರಾಕ್ಷಿ ಬೆಳೆ ಕೈಹಿಡಿದಿದೆ. ಅದರಲ್ಲೂ ದಿಲ್ ಖುಷ್ ದ್ರಾಕ್ಷಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿರುವುದರಿಂದ ಬೆಳೆಗಾರರ ಮೊಗದಲ್ಲಿ ಹರ್ಷ ಮೂಡಿದೆ.
ರಿಯಾಜಅಹ್ಮದ ದೊಡ್ಡಮನಿ
ಡಂಬಳ: ಈ ಬಾರಿ ದ್ರಾಕ್ಷಿ ಬೆಳೆಗೆ ಬಂಗಾರದಂಥ ಬೆಲೆ ಬಂದಿದ್ದು, ವ್ಯಾಪಾರಸ್ಥರು ದ್ರಾಕ್ಷಿ ಬೆಳೆಗಾರರ ತೋಟಗಳಿಗೆ ಭೇಟಿ ನೀಡಿ ಮುಂಗಡ ಹಣ ನೀಡಿ ಖರೀದಿಗೆ ಇಳಿದಿದ್ದಾರೆ.
ಮುಂಡರಗಿ ತಾಲೂಕಿನಲ್ಲಿ ಈ ಬಾರಿ 150ಕ್ಕೂ ಅಧಿಕ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯನ್ನು ಬೆಳೆಯಲಾಗಿದೆ. ತಾಲೂಕಿನಲ್ಲಿ ಮುಖ್ಯವಾಗಿ ಸೋನಾಕಾ, ಥಾಮ್ಸನ್, ಸಿಡ್‌ಲೆಸ್, ಮಾಣಿಕ್ ಚಮನ್, ಶರತ್, ಬೆಂಗಳೂರು, ಬ್ಲೂ, ದಿಲ್‌ಖುಷ್ ತಳಿಯ ದ್ರಾಕ್ಷಿಯನ್ನು ಬೆಳೆಯಲಾಗಿದೆ. ಕೆಲವೆಡೆ ದ್ರಾಕ್ಷಿ ಫಸಲನ್ನು ಕಟಾವು ಮಾಡಿದ್ದರೆ, ಇನ್ನೂ ಹಲವೆಡೆ ಕಟಾವು ಹಂತದಲ್ಲಿದೆ.
ಕೆಲವು ತಳಿ ದ್ರಾಕ್ಷಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಹೀಗಾಗಿ ದ್ರಾಕ್ಷಿಗೆ ಒಳ್ಳೆಯ ಬೆಲೆ ಬಂದಿದೆ. ಕಳೆದ ಬಾರಿ ಬೆಲೆ ಕುಸಿತದಿಂದ ಕಂಗಾಲಾಗಿದ್ದ ಬೆಳೆಗಾರರಿಗೆ ಈ ಬಾರಿ ದ್ರಾಕ್ಷಿ ಬೆಳೆ ಕೈಹಿಡಿದಿದೆ. ಅದರಲ್ಲೂ ದಿಲ್ ಖುಷ್ ದ್ರಾಕ್ಷಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿರುವುದರಿಂದ ಬೆಳೆಗಾರರ ಮೊಗದಲ್ಲಿ ಹರ್ಷ ಮೂಡಿದೆ.
₹40ರಿಂದ ₹150 ದರ: ಸದ್ಯ ಕೆಜಿಗೆ ದಿಲ್‌ಖುಷ್ ತಳಿ ದ್ರಾಕ್ಷಿ ಕೆಜಿಗೆ ₹40, ಶರತ್ ತಳಿಗೆ ₹100, ಸರಿತಾಕೃಷ್ಣ ತಳಿಗೆ ₹120, ರೆಡ್ ಗ್ಲೋಬ್ ₹140ರಿಂದ ₹150ರ ವರೆಗೂ ಮಾರಾಟವಾಗುತ್ತಿದೆ. ಈ ತಳಿಯ ದ್ರಾಕ್ಷಿ ಬೆಳೆಗಾರರ ಬಳಿ ವರ್ತಕರು ತೆರಳಿ ಮುಂಗಡ ಖರೀದಿ ಮಾಡುತ್ತಿದ್ದಾರೆ.
ದ್ರಾಕ್ಷಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗುತ್ತಿರುವುದು ಬೆಳೆಗಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕಳೆದ ವರ್ಷ ದಿಲ್‌ಖುಷ್ ತಳಿಯ ದ್ರಾಕ್ಷಿ ಕೆಜಿ ₹25ರಿಂದ ₹35ಕ್ಕೆ ಮಾರಾಟವಾಗಿತ್ತು. ಆದರೆ ಈ ವರ್ಷ ಕೆಜಿ ₹40ರಂತೆ ಮಾರಾಟವಾಗುತ್ತಿದೆ. ಸದ್ಯ ಸಿಗುತ್ತಿರುವ ಬೆಲೆ ರೈತರಿಗೆ ಲಾಭವೇ ಹೊರತು ನಷ್ಟವಲ್ಲ ಎನ್ನುತ್ತಾರೆ ದ್ರಾಕ್ಷಿ ಬೆಳೆಗಾರರಾದ ಡಂಬಳ ಹೋಬಳಿಯ ರಾಮೇನಳ್ಳಿ ಗ್ರಾಮದ ಮಹಾದೇವಪ್ಪ ಹಾಲಪ್ಪ ಗುಡಿಸಾಗರ ಅವರು.
ಈ ಬಾರಿ ವರ್ತಕರೇ ಬೆಳೆಗಾರರನ್ನು ಕಂಡು ನಾವೇ ಕಟಾವು ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಸತತ ಬೆಲೆ ಇಳಿಕೆಯಿಂದ ಕಂಗಾಲಾಗಿದ್ದ ರೈತರು ಈ ಬಾರಿ ಉತ್ತಮ ಬೆಲೆ ಕಂಡು ಸಂತಸಗೊಂಡಿದ್ದಾರೆ.
ರಾಜ್ಯದಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ಹೆಚ್ಚಾಗಿ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಅತಿ ಹೆಚ್ಚು ದ್ರಾಕ್ಷಿ ಕಟಾವಿಗೆ ಬರಲಿದೆ. ವಿವಿಧ ತಳಿಯ ದ್ರಾಕ್ಷಿ ಕೆಜಿಗೆ ₹40ರಿಂದ ₹140ರ ವರೆಗೂ ಮಾರಾಟವಾಗುತ್ತಿವೆ.ಮುಂಡರಗಿ ತಾಲೂಕಿನಲ್ಲಿ ತೋಟಗಾರಿಕಾ ಬೆಳೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ದಾಳಿಂಬೆ 4000 ಎಕರೆ, ದ್ರಾಕ್ಷಿ 150 ಎಕರೆ, ಬಾಳೆ 600 ಎಕರೆ ಹೊಂದಿದ್ದು, ಅಲ್ಲದೆ ವಿವಿಧ ತೋಟಗಾರಿಕಾ ಬೆಳೆ ಹೊಂದಲು ಉತ್ತೇಜನ ನೀಡಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಮಹಮ್ಮದರಫೀಕ ತಾಂಬೋಟಿ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.