ಲಕ್ಷ್ಮೇಶ್ವರ: ಕನ್ನಡ ನಾಡಿನ ಅಸ್ಮಿತೆಯ ಪ್ರತೀಕವೇ ಕನ್ನಡ ಸಾಹಿತ್ಯ ಪರಿಷತ್ತು. ಕನ್ನಡ ನಾಡು- ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಮಸ್ತ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯ್ಕ ತಿಳಿಸಿದರು.
ತಾಲೂಕು ಘಟಕದ ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ೧೯೧೫ರ ಮೇ ೫ರಂದು ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸ್ಥಾಪಿಸಲ್ಪಟ್ಟಿತ್ತು. ಆರಂಭದ ವೇಳೆ ಕರ್ನಾಟಕ ಸಾಹಿತ್ಯ ಪರಿಷತ್ ಎಂದು ನಾಮಕರಣಗೊಂಡರೂ ಮುಂದೆ ೧೯೩೫ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಎಂದು ಮರುನಾಮಕರಣಗೊಂಡಿತು ಎಂದರು.
ಲಕ್ಷ್ಮೇಶ್ವರ ಪೌರಸೇವಾ ಸಾಧಕ ಬಸವಣ್ಣೆಪ್ಪ ನಂದೆಣ್ಣವರ ಮಾತನಾಡಿ, ಯಾವುದೇ ಪ್ರಶಸ್ತಿ, ಗೌರವ ಬಯಸದೇ ನಾಲ್ಕು ದಶಕಗಳ ಕಾಲ ಲಕ್ಷ್ಮೇಶ್ವರದ ಪೌರಸೇವೆ ಮಾಡಿದ ನಮ್ಮಂತವರನ್ನು ಗುರುತಿಸಿ ಗೌರವಿಸಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಸ್ತುತ್ಯಾರ್ಹ ಎಂದರು.ಶಿಕ್ಷಕ ಎಸ್.ಎಫ್. ಆದಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಶ್ರೀಮಂತ ಪರಂಪರೆಯನ್ನು ಮತ್ತಷ್ಟು ಸಮೃದ್ಧಗೊಳಿಸುತ್ತಿದೆ. ಅದರಲ್ಲೂ ಗದಗ ಜಿಲ್ಲಾ ಘಟಕ ಹಾಗೂ ಲಕ್ಷ್ಮೇಶ್ವರ ತಾಲೂಕ ಘಟಕಗಳು ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಅತ್ಯಂತ ಕ್ರಿಯಾಶೀಲವಾಗಿವೆ ಎಂದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ತಿರುಳ್ಗನ್ನಡ ನೆಲವಾದ ಪುಲಿಗೆರೆ ಅಂದರೆ ಈಗಿನ ಲಕ್ಷ್ಮೇಶ್ವರ ಪ್ರಾಚೀನ ಕಾಲದಿಂದಲೂ ಕನ್ನಡ, ಕನ್ನಡತನದ ಜಾಗೃತಿಯ ನಾಡು. ಹಾಗಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ರಚನಾತ್ಮಕ ಕಾರ್ಯಕ್ರಮ ನಿರಂತರವಾಗಿ ಸಂಘಟಿಸಲು ಸಾಧ್ಯವಾಗುತ್ತಿದೆ ಎಂದರು.
ಕಸಾಪ ತಾಲೂಕು ಘಟಕದ ಎಸ್.ಬಿ. ಅಣ್ಣಿಗೇರಿ ಸ್ವಾಗತಿಸಿದರು. ಶಂಕರ ಶಿಳ್ಳಿನ ವಂದಿಸಿದರು. ಶಿಕ್ಷಕ ಪ್ರಕಾಶ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕ ಪ್ರಭು ಹಾಲಗುಂಡಿ, ಆರ್.ಎಸ್. ಪಾಟೀಲ, ವೈ.ಎಂ. ಶಿರೂರು ಇದ್ದರು. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.