ಕನ್ನಡಪ್ರಭ ವಾರ್ತೆ ಸಿರವಾರ
ತಾಲೂಕಿನ ಗಣದಿನ್ನಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಭೂಮಿಯನ್ನು ಆಶ್ರಯ ಫಲಾನುಭವಿಗಳಿಗೆ ಹಂಚಿಕೆ ಮಾಡುವಂತೆ ಒತ್ತಾಯಿಸಿ ತಾಪಂ ಕಚೇರಿ ಮುಂದೆ ದಲಿತ ಸಂಘರ್ಷ ಸಮಿತಿ (ಎನ್.ಮೂರ್ತಿ)ಯ ಪದಾಧಿಕಾರಿಗಳು ಗುರುವಾರದಿಂದ ಧರಣಿ ಕೈಗೊಂಡಿದ್ದಾರೆ.ಗಣದಿನ್ನಿ ಗ್ರಾಮದ ಸರ್ವೆ ನಂ.86ರ 5 ಎಕರೆ ಭೂಮಿಯನ್ನು ಸರ್ಕಾರ ಈಗಾಗಲೇ ಖರೀದಿಸಿದ್ದು, ಅದು ಇನ್ನು ಖಾಸಗಿ ವ್ಯಕ್ತಿಗಳ ವಶದಲ್ಲಿದೆ. ಈ ಭೂಮಿಯನ್ನು ಆಶ್ರಯ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕಾಗಿದ್ದು, ಪಿಡಿಒ ಮತ್ತು ಕೆಲ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನೂರಾರು ಬಡ ಎಸ್ಸಿ, ಎಸ್ಟಿ, ಹಿಂದುಳಿದ ಜನರು ಆಶ್ರಯ ಸ್ಥಳ ಪಡೆಯದೇ ಸಂಕಷ್ಟ ಎದುರಿಸುತ್ತಿದ್ದಾರೆ.
ಸರ್ಕಾರಿ ಭೂಮಿಯಲ್ಲಿ ಅಧಿಕಾರಿಗಳ ಕುಮ್ಮಕ್ಕಿನಿಂದಾಗಿ ಖಾಸಗಿ ವ್ಯಕ್ತಿಗಳು ಮುಂಗಾರು ಬೆಳೆದಿದ್ದಾರೆ ಎಂದು ಧರಣಿ ನಿರತರು ಆರೋಪಿಸಿದರು.ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆದು ಸಂಬಂಧಿಸಿದ ಆಶ್ರಯ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.
ದಸಂಸ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ನಂಜಲದಿನ್ನಿ, ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಎಂ.ಮನೋಹರ ಸಿರವಾರ, ರಾಜು ಬೊಮ್ಮನಾಳ, ತಾಲೂಕು ಘಟಕದ ಅಧ್ಯಕ್ಷ ಚಂದಪ್ಪ ಕವಿತಾಳ, ಅಮರೇಶ ಮಲ್ಲಟ, ಮಲ್ಲಪ್ಪ ಮಲ್ಲಟ, ಹುಲಿಗೆಪ್ಪ ಸಿರವಾರ, ಹುಲಿಗೆಪ್ಪ ಸೈದಾಪೂರ, ಈರಣ್ಣ ನಾಯಕ ಗಣದಿನ್ನಿ, ಹನುಮಂತ ಬಲ್ಲಟಗಿ, ನರಸಿಂಗ, ಜಂಬಣ್ಣ, ಮೌನೇಶ ಕವಿತಾಳ ಇದ್ದರು.