ಸಿದ್ದಾಪುರ-ವಿರಾಜಪೇಟೆ ರಸ್ತೆ ಕಾಮಗಾರಿ ಶೀಘ್ರ ಮುಗಿಸಲು ಆಗ್ರಹ

KannadaprabhaNewsNetwork |  
Published : Mar 19, 2025, 12:33 AM IST
ಒತ್ತಾಯ | Kannada Prabha

ಸಾರಾಂಶ

ಸ್ಥಗಿತಗೊಳಿಸಿರುವ ಸಿದ್ದಾಪುರ ವಿರಾಜಪೇಟೆ ರಸ್ತೆ ಅಗಲೀಕರಣ ಕಾಮಗಾರಿ ಆರಂಭಿಸಿ ಶೀಘ್ರ ಮುಗಿಸಬೇಕು ಸಿಪಿಐಎಂ ಮುಖಂಡ ಎನ್‌ ಡಿ ಕುಟ್ಟಪ್ಪ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಸ್ಥಗಿತಗೊಳಿಸಿರುವ ಸಿದ್ದಾಪುರ-ವಿರಾಜಪೇಟೆ ರಸ್ತೆ ಅಗಲೀಕರಣ ಕಾಮಗಾರಿ ಆರಂಭಿಸಿ ಶೀಘ್ರ ಮುಗಿಸಬೇಕು ಎಂದು ಸಿಪಿಐಎಂ ಮುಖಂಡ ‌ಎನ್.ಡಿ. ಕುಟ್ಟಪ್ಪ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಒತ್ತಾಯಿಸಿದ ಅವರು, ಸಿದ್ದಾಪುರದಿಂದ ಇಂಜಿಲಿಗೆರೆ ವರೆಗಿನ ರಸ್ತೆ ಅಗಲೀಕರಣ ಕಾಮಗಾರಿ ಹಾಗೂ ಚರಂಡಿ ಕಾಮಗಾರಿಯನ್ನು ಮೂರು ತಿಂಗಳ ಹಿಂದೆ ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು. ಆದರೆ ಕಾಮಗಾರಿ ಆರಂಭದಲ್ಲಿ ತ್ವರಿತ ಗತಿಯಲ್ಲಿ ಮುಂದುವರಿದಿತ್ತು. ಆದರೆ ಕಳೆದ ಒಂದು ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಇರುವ ವರ್ತಕರಿಗೆ ಹಾಗೂ ಶಾಲೆ, ಕಾಲೇಜುಗಳಿಗೆ ತೆರಳುವ ಮಕ್ಕಳಿಗೆ ಧೂಳಿನಿಂದಾಗಿ ಸಮಸ್ಯೆಯಾಗುತ್ತಿದೆ ಎಂದರು.

ರಸ್ತೆ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ರಸ್ತೆ ಬದಿಯಲ್ಲಿ ಮಣ್ಣುಗಳನ್ನು ಅಗೆದಿದ್ದು, ಗಾಳಿ ಬರುವ ಸಂದರ್ಭದಲ್ಲಿ ಧೂಳಿನಿಂದ ನಡೆದಾಡಲು ಕಷ್ಟವಾಗುತ್ತಿದೆ. ಕೂಡಲೇ ಶಾಸಕರು ಮಧ್ಯಪ್ರವೇಶ ಮಾಡಿ ಸ್ಥಗಿತಗೊಂಡಿರುವ ಕಾಮಗಾರಿಯನ್ನು ಪುನರಾರಂಭಿಸಬೇಕು ಎಂದು ಆಗ್ರಹಿಸಿದರು.

ಅಕಾಲಿಕ ಮಳೆ ಸುರಿದಲ್ಲಿ ಕೆಸರಿನಿಂದ ಸಾರ್ವಜನಿಕರು ಮತ್ತಷ್ಟು ಸಮಸ್ಯೆಗೆ ಸಿಲುಕುವ ಸಾಧ್ಯತೆ ಇದೆ. ಕೂಡಲೇ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸದಿದ್ದಲ್ಲಿ ಸಿಪಿಐಎಂ ವತಿಯಿಂದ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎಚ್.ಬಿ. ರಮೇಶ್ ಮಾತನಾಡಿ, ವಿರಾಜಪೇಟೆ ರಸ್ತೆಯಲ್ಲಿ ಮೂರು ಶಾಲೆಗಳು ಇದ್ದು, ಶಾಲೆಯ ಮಕ್ಕಳು ರಸ್ತೆ ಬದಿಯಲ್ಲಿ ನಡೆದಾಡಲು ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೆ ಈ ಭಾಗದಲ್ಲಿ ಆಸ್ಪತ್ರೆಯೊಂದು ಇದ್ದು ರೋಗಿಗಳಿಗೆ ತೆರಳಲು ಸಮಸ್ಯೆ ಎದುರಾಗಿದೆ ಎಂದು ತಿಳಿಸಿದರು.

ಕಾಮಗಾರಿಯ ಸ್ಥಗಿತಗೊಂಡು ತಿಂಗಳು ಕಳೆದರೂ ಕೂಡ ಸ್ಥಳೀಯ ಗ್ರಾಮ ಪಂಚಾಯಿತಿ ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿರುವುದು ಖಂಡನೀಯ. ಅಭಿವೃದ್ಧಿ ಕಾರ್ಯಗಳು ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಣ್ಣಪುಟ್ಟ ಸಮಸ್ಯೆಗಳು ಎದುರಾಗುವುದು ಸಹಜವಾಗಿದೆ. ಆದರೆ ಇದನ್ನೇ ನೆಪವೊಡ್ಡಿ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಸ್ಥಳೀಯ ಕೆಲವರು ಗುತ್ತಿಗೆದಾರರ ಬಳಿ ತಿಳಿಸಿರುವುದು ಸರಿಯಾದ ಕ್ರಮವಲ್ಲ. ಇದರ ಬಗ್ಗೆ ಗ್ರಾಮ ಪಂಚಾಯಿತಿಯವರು ಸಾರ್ವಜನಿಕರಿಗೆ ಹಾಗೂ ರಸ್ತೆ ಬದಿಯಲ್ಲಿ ವಾಸವಿರುವ ನಿವಾಸಿಗಳಿಗೆ ಮನವರಿಕೆ ಮಾಡಿಕೊಡುವ ಮೂಲಕ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಲು ಸಹಕರಿಸಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿಪಿಐಎಂ ಪಕ್ಷದ ಪದಾಧಿಕಾರಿಗಳಾದ ವೈಜು ಹಾಗೂ ಶಾಲಿ ಪ್ವಾಲೊಸ್ ಇದ್ದರು

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ